
ಮುಖ್ಯಮಂತ್ರಿ ಕುರ್ಚಿಯಲ್ಲಿ ದೇವರಾಜ ಅರಸು ಅವರಿಗಿಂತ ಹೆಚ್ಚಿನ ದಿನ ತಾವು ಕುಳಿತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಭ್ರಮದಲ್ಲಿದ್ದಾರೆ. ದಿನದ ಲೆಕ್ಕದಲ್ಲಿ ಅವರು ಮುಂದಿರಬಹುದು. ಸಾಧನೆಯ ಲೆಕ್ಕದಲ್ಲಿ, ಸಾಮಾಜಿಕ ಬದ್ಧತೆಯ ಲೆಕ್ಕದಲ್ಲಿ, ಜನಾನುರಾಗದ ಲೆಕ್ಕದಲ್ಲಿ ಅವರು ದೇವರಾಜ ಅರಸರ ಹತ್ತಿರಕ್ಕೂ ಬರುವುದಿಲ್ಲ.
ಅರಸು ಅವರ ಸ್ವಕ್ಷೇತ್ರ ಹುಣಸೂರು. 1962ರಲ್ಲಿ ಅವರು ಅಲ್ಲಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ಯಾವುದೇ ಕಾರಣಕ್ಕೂ ಅವರು ತಮ್ಮ ಕ್ಷೇತ್ರ ಬಿಟ್ಟು ಹೋಗಲಿಲ್ಲ. ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಮುಖ್ಯಮಂತ್ರಿಯಾಗಿಯೂ ಸತತವಾಗಿ ದಾಖಲೆ ಅವಧಿಗೆ ಇದ್ದರು. ಆದರೆ ಸಿದ್ದರಾಮಯ್ಯ ಅವರು 2013ರಿಂದ 2018ರವರೆಗೆ ಮುಖ್ಯಮಂತ್ರಿ ಆಗಿದ್ದರು. ಮತ್ತೆ 2023ರಲ್ಲಿ ಮುಖ್ಯಮಂತ್ರಿ ಆಗಿದ್ದಾರೆ. ದೇವರಾಜ ಅರಸರು ನಾನ್‌ಸ್ಟಾಪ್ ಮುಖ್ಯಮಂತ್ರಿ, ಸಿದ್ದರಾಮಯ್ಯ ಅವರು ಹಾಗಲ್ಲ.
ಸಿದ್ದರಾಮಯ್ಯನವರು ತವರು ಜಿಲ್ಲೆ, ತವರು ಕ್ಷೇತ್ರವನ್ನು ನಂಬದೇ ರಾಜಕೀಯ ನೆಲೆಗಾಗಿ ಬಾದಾಮಿ–ಕೊಪ್ಪಳಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತಮಗೆ ರಾಜಕೀಯ ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 3 ಬಾರಿ ಸೋತಿದ್ದಾರೆ. (1989, 1999, 2018). ಈಗ ವರುಣಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
‘ಉಳುವವನೇ ನೆಲದೊಡೆಯ’ ಎಂಬ ಭೂ ಸುಧಾರಣಾ ಕಾಯ್ದೆ ದೇಶದಲ್ಲಿ ಇವತ್ತಿಗೂ ಚಾರಿತ್ರಿಕ ದಾಖಲೆ. ಬಡವರು, ರೈತರನ್ನು ಸಾಲದ ಸುಳಿಯಿಂದ ರಕ್ಷಿಸಲು ತಂದ ಋಣಮುಕ್ತ ಕಾಯ್ದೆ, ವಿಧವಾ ವೇತನ, ವೃದ್ಧಾಪ್ಯ ವೇತನ, ಉಚಿತ ಭಾಗ್ಯ ಜ್ಯೋತಿ ಯೋಜನೆ, ಜೀತ ಪದ್ಧತಿ ಹಾಗೂ ಮಲ ಹೊರುವ ಅನಿಷ್ಟ ಪದ್ಧತಿಯ ರದ್ದತಿ, ಅರಸರ ಮಾತೃಹೃದಯಕ್ಕೆ ಉದಾಹರಣೆಯಂತಿವೆ.
ದೇವರಾಜ ಅರಸರು ಅವಕಾಶ ವಂಚಿತ ಸಮಾಜಗಳು ಹಾಗೂ ಆರ್ಥಿಕ ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು, ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ದೊರಕಿಸಿಕೊಡಲು ಎಲ್.ಜಿ. ಹಾವನೂರು ಆಯೋಗ ರಚಿಸಿದರು; ಕೇವಲ 3 ವರ್ಷಗಳ ಅವಧಿಯಲ್ಲಿ ವರದಿ ಸ್ವೀಕರಿಸಿ ಅದನ್ನು ಅನುಷ್ಠಾನಗೊಳಿಸಿದರು. ಹಾವನೂರು ವರದಿ ಆಧಾರದ ಮೇಲೆ ಇವತ್ತಿಗೂ ರಾಜ್ಯದಲ್ಲಿ ಹಿಂದುಳಿದ ಹಾಗೂ ಆರ್ಥಿಕ ದುರ್ಬಲರಿಗೆ ಮೀಸಲಾತಿ ಹಂಚಿಕೆಯಾಗುತ್ತಿದೆ.
ಸಿದ್ದರಾಮಯ್ಯ ಅವರು 2014ರಲ್ಲಿ ಹಿಂದುಳಿದವರಿಗೆ ನ್ಯಾಯ ದೊರಕಿಸಿ ಕೊಡುತ್ತೇನೆಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ಅಧ್ಯಕ್ಷತೆ
ಯಲ್ಲಿ ಸಾಮಾಜಿಕ ಸಮೀಕ್ಷೆ ಹಾಗೂ ಜಾತಿಗಣತಿ ನಡೆಸಿದ್ದರು. ಆ ವರದಿಯನ್ನು 10 ವರ್ಷಗಳವರೆಗೂ ಸ್ವೀಕರಿಸುವ ಎದೆಗಾರಿಕೆ ತೋರಿಸಲಿಲ್ಲ. ನಂತರ ಅದನ್ನು ಕಸದಬುಟ್ಟಿಗೆ ಎಸೆದರು. ನಾಗಮೋಹನ ದಾಸ್ ಆಯೋಗದ ವರದಿಯ ಅನುಸಾರ ಪರಿಶಿಷ್ಟ ಜಾತಿಯ 59 ಅಲೆಮಾರಿ ಸಮುದಾಯಗಳಿಗೆ ನೀಡಬೇಕಾಗಿದ್ದ ಶೇ 1 ಮೀಸಲಾತಿಯ ಶಿಫಾರಸ್ಸನ್ನು ಪಕ್ಕಕ್ಕೆ ಸರಿಸಿ, ಅನಾಥ ಪ್ರಜ್ಞೆಯ ಆ ಸಮಾಜಗಳ ಸಾಂವಿಧಾನಿಕ ಹಕ್ಕು ಹಾಗೂ ಸಾಮಾಜಿಕ ನ್ಯಾಯದ ಅವಕಾಶದ ಬಾಗಿಲನ್ನು ಮುಚ್ಚಿದರು.
ಮೂಲ ಮೈಸೂರಿಗರಾದರೂ ಮೈಸೂರು ಹೆಸರಿನ ರಾಜ್ಯವನ್ನು ‘ಕರ್ನಾಟಕ’ ಎಂದು ನಾಮಕರಣ ಮಾಡಿದ ಅರಸರು ಕರ್ನಾಟಕ ರಾಜಕಾರಣದಲ್ಲಿ ಸ್ವಾಭಿಮಾನದ ಸಂಕೇತ
ಆಗಿದ್ದಾರೆ. ಅವರಿಗೆ ಹೋರಾಟದ ಹಿನ್ನೆಲೆ ಇತ್ತು. ಸಿದ್ದರಾಮಯ್ಯ ಯಾವುದೇ ಹೋರಾಟದಲ್ಲಿ ಮಿಂದು ಎದ್ದವರಲ್ಲ. ಸಿದ್ದರಾಮಯ್ಯನವರ ಬೆನ್ನಿಗಿರುವಂತೆ ದೇವರಾಜ ಅರಸರ ಬೆನ್ನಿಗೆ ಜಾತಿಯ ಬಲ ಇರಲಿಲ್ಲ.
ಅರಸರು ಪ್ರತಿ ಹಂತದಲ್ಲಿ ನೋವು ಮತ್ತು ಒತ್ತಡವನ್ನು ಎದುರಿಸಿದರು. ರಾಜಕೀಯ ಪಿತೂರಿಗಳ ವ್ಯೂಹವನ್ನು ಮೆಟ್ಟಿ ನಿಂತು ರಾಜಕಾರಣ ಮಾಡಿದರು. ರಾಮಕೃಷ್ಣ ಹೆಗಡೆಯವರ ಕಾಲದಿಂದಲೂ ನಿರಂತರ ಅಧಿಕಾರವನ್ನು ಅನುಭವಿಸಿಕೊಂಡು ಬಂದಿದ್ದ ಸಿದ್ದರಾಮಯ್ಯನವರು ಜನತಾದಳದಿಂದ ಹೊರಬರುವವರೆಗೂ ಉಪಮುಖ್ಯಮಂತ್ರಿ, ಹಣಕಾಸು ಮಂತ್ರಿ ಸ್ಥಾನ ಸೇರಿ ಒಂದಲ್ಲಾ ಒಂದು ಅಧಿಕಾರದ ಸ್ಥಾನ ಅಲಂಕರಿಸಿದ್ದರು.
ಮೈಸೂರು ಭಾಗದ ರೈತರ ಬದುಕನ್ನು ಹಸನು ಮಾಡಲಿದ್ದ ‘ವರುಣಾ ನಾಲೆ’ ಯೋಜನೆಯನ್ನು ಅರಸರು ಕೈಗೆತ್ತಿಕೊಂಡಾಗ ತಪ್ಪು ಗ್ರಹಿಕೆಯಿಂದ ಮಂಡ್ಯ ಭಾಗದ ರೈತರು ಬಹುದೊಡ್ಡ ಚಳವಳಿಯನ್ನು ಆರಂಭಿಸಿದರು. ಮಂಡ್ಯದ ಪಾಲಿಗೆ ಅರಸರನ್ನು ಖಳನಾಯಕನಂತೆ ಬಿಂಬಿಸಿ, ಅವರನ್ನು ಮಂಡ್ಯದಲ್ಲಿ ಅಡ್ಡಗಟ್ಟಿ ಅಪಮಾನಿಸಲಾಯಿತು. ಆದರೆ ತಮಗಾದ ಅಪಮಾನ, ನೋವನ್ನು ನುಂಗಿಕೊಂಡು ದಿಟ್ಟತನದಿಂದ ವರುಣಾ ನಾಲೆಯ ಯೋಜನೆಯನ್ನು ಅರಸರು ಅನುಷ್ಠಾನಗೊಳಿಸಿದರು. ನಾಲೆಯ ಸುತ್ತಲಿನ ಪ್ರದೇಶವನ್ನು ಹಸಿರುವಲಯವನ್ನಾಗಿ ಘೋಷಿಸಿ, ರೈತರ ಜಮೀನನ್ನು ಉಳಿಸಿ, ಹಸಿರು ಹಾಗೂ ಧಾನ್ಯ ಸಂಪತ್ತನ್ನು ಉಳಿಸಬೇಕಾದ ಸಿದ್ದರಾಮಯ್ಯನವರು ಅಂತಹ ಪ್ರಯತ್ನಕ್ಕೆ ಮುಂದಾಗಲೇ ಇಲ್ಲ.
ಚುನಾವಣೆಯಲ್ಲಿ ಸೋತು ಮೂಲೆಗೆ ಸೇರಿದ್ದ ಇಂದಿರಾ ಗಾಂಧಿ ಅವರನ್ನು ಕರ್ನಾಟಕಕ್ಕೆ ಕರೆತಂದು ಚಿಕ್ಕಮಗಳೂರಿನ ಉಪಚುನಾವಣೆಯಲ್ಲಿ ಗೆಲ್ಲಿಸಿ, ಲೋಕಸಭೆಗೆ ಕಳುಹಿಸಿಕೊಟ್ಟು ಇಂದಿರಾ ಗಾಂಧಿಯವರಿಗೆ ರಾಜಕೀಯ ಮರು ಜನ್ಮ ನೀಡಿದವರು ದೇವರಾಜ ಅರಸರು. ಅಂಥ ಅರಸರನ್ನೇ ಪಕ್ಷದಿಂದ ಉಚ್ಚಾಟಿಸಿ ಅವರ ರಾಜಕೀಯ ಭವಿಷ್ಯಕ್ಕೆ ಕಲ್ಲು ಹಾಕಲಾಯಿತು. ಇಲ್ಲವಾಗಿದ್ದರೆ ದೇವರಾಜ ಅರಸರಿಗೆ ಹತ್ತುವರ್ಷ ಮುಖ್ಯಮಂತ್ರಿಯಾಗಿ ಐತಿಹಾಸಿಕ ದಾಖಲೆ ಬರೆಯುವ ಎಲ್ಲ ಅವಕಾಶವೂ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.