ಹುಟ್ಟಿದಂದಿನಿಂದ ಸಾಯುವವರೆಗೂ ಬಳಸುವ ಒಂದು ಭಾಷೆಯೊಡನೆ ನಾವು ತೀವ್ರವಾದ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುವ ಕಾರಣದಿಂದಾಗಿ, ಭಾಷೆಗಳ ಬಗ್ಗೆ ವಸ್ತುನಿಷ್ಠವಾಗಿ, ನಿರ್ಭಾವುಕರಾಗಿ ವಿಚಾರ ಮಾಡಲು ನಮಗೆ ಕಷ್ಟವಾಗುತ್ತದೆ. ಹಾಗೆಯೇ, ಇತರ ಭಾಷೆಗಳ ಸ್ವರೂಪದ ಬಗ್ಗೆ ಗೊಂದಲಗಳಿರುತ್ತವೆ.
ಉದಾಹರಣೆಗೆ, ‘ಭಾರತದ, ಜಗತ್ತಿನ ಎಲ್ಲಾ ಭಾಷೆಗಳಿಗೂ ಸಂಸ್ಕೃತ ತಾಯಿ, ಆ ಕಾರಣದಿಂದಲೇ ಅದನ್ನು ದೇವಭಾಷೆ ಎಂದು ಕರೆಯುತ್ತಾರೆ’, ‘ಇಟಾಲಿಯನ್ ಮತ್ತು ತೆಲುಗು ಸಂಗೀತ ಭಾಷೆಗಳು’, ‘ಲಿಪಿಯಿಲ್ಲದ ಆಡುಭಾಷೆಗಳನ್ನು ಹಿಂದುಳಿದ ಭಾಷೆಗಳು ಎಂದು ಹೇಳಬಹುದು’, ‘ಈ ಭಾಷೆ ಇತರ ಭಾಷೆಗಳಿಗಿಂತ ಹೆಚ್ಚು ಪ್ರಾಚೀನವಾಗಿದೆ. ಆದುದರಿಂದ ಅದು ಹೆಚ್ಚು ಶ್ರೇಷ್ಠ’. ಭಾಷಾಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಇವೆಲ್ಲವೂ ಸತ್ಯದೂರ.
ಭಾಷೆಯ ಸ್ವರೂಪದ ಬಗ್ಗೆ ಹೀಗೆ ಕೆಲವು ನಿರ್ಣಾಯಕ ಹೇಳಿಕೆಗಳನ್ನು ಕೊಟ್ಟು ಮುಂದುವರೆಯಬಹುದು:
1. ಭಾಷೆ ಎಂಬುದು ಅಮೂರ್ತ ಸಂಕೇತಗಳ ವ್ಯವಸ್ಥೆ. ಸ್ವರ– ವ್ಯಂಜನ– ಪದಗಳಿಗೂ ಅವುಗಳ ಉಚ್ಚಾರಕ್ಕೂ ಯಾವ ತಾರ್ಕಿಕ ಸಂಬಂಧವೂ ಇಲ್ಲ; ಅದು ಕೇವಲ ಯಾದೃಚ್ಛಿಕ. 2. ಹಾಗೆಯೇ, ಪದಕ್ಕೂ ಅದರ ‘ಅರ್ಥ’ಕ್ಕೂ ಯಾವ ತಾರ್ಕಿಕ ಸಂಬಂಧವೂ ಇಲ್ಲ. 3. ಶಬ್ದದ ಉಚ್ಚಾರ, ಅದರ ‘ಅರ್ಥ’ ಇತ್ಯಾದಿಗಳೆಲ್ಲವೂ ಸಾಂಕೇತಿಕ.
ಭಾಷಾ ವಿಜ್ಞಾನಿ ಸೋಸ್ಯೋ ಭಾಷೆಯನ್ನು ‘ವ್ಯವಸ್ಥೆಗಳ ವ್ಯವಸ್ಥೆ’ ಎನ್ನುತ್ತಾನೆ. ಎಲ್ಲಾ ಸ್ತರಗಳಲ್ಲಿಯೂ
ಭಾಷೆ ಅಮೂರ್ತವಾಗಿರುವುದರಿಂದ, ಭಾಷೆಗಳ ಬಗ್ಗೆ ವಿವರಣೆ– ವಿಶ್ಲೇಷಣೆ ಸಾಧ್ಯವೇ ಹೊರತು ಮೌಲ್ಯಾತ್ಮಕ ತೀರ್ಮಾನಗಳು ಅಸಾಧ್ಯ. ಈ ಚರ್ಚೆಯ ಹಿನ್ನೆಲೆಯಲ್ಲಿ ಸದ್ಯ ವಾಗ್ವಾದಕ್ಕೆ ಕಾರಣವಾಗಿರುವ ಎರಡು ಸಂಗತಿಗಳನ್ನು ನೋಡಬಹುದು: ‘ಕನ್ನಡ ತಮಿಳಿನಿಂದ ಜನಿಸಿದೆ’ ಎಂಬ ಕಮಲ್ ಹಾಸನ್ ಹೇಳಿಕೆ ಮತ್ತು ‘ಸಂಸ್ಕೃತ ಭಾರತೀಯ ಭಾಷೆಗಳ ತಾಯಿ’ ಎಂಬ ಎಸ್.ಎಲ್. ಭೈರಪ್ಪನವರ ಹೇಳಿಕೆ.
ಭಾಷಾಶಾಸ್ತ್ರದ ಪ್ರಕಾರ, ಯಾವ ಭಾಷೆಯೂ ಮತ್ತೊಂದು ಭಾಷೆಯಿಂದ ಜನಿಸುವುದಿಲ್ಲ. ಭಾಷೆಗಳ ಉಗಮ ಹಾಗೂ ಬೆಳವಣಿಗೆಯನ್ನು ನಾವು ‘ಭಾಷಾ ಕುಟುಂಬಗಳು’ ರೂಪಕದ ಮೂಲಕ ನೋಡಬಹುದು. (ಈ ಸಂಬಂಧದಲ್ಲಿ, ‘ಕುಟುಂಬ’ ಎಂಬ ರೂಪಕವೇ ನಮ್ಮನ್ನು ತಪ್ಪು ದಾರಿಗೆ ಸೆಳೆಯುತ್ತದೆ; ‘ಕುಟುಂಬ’ ಪದವನ್ನು ಉಪಯೋಗಿಸಿದ ಕೂಡಲೇ ‘ತಾಯಿ– ಮಗಳು’ ಸಂಬಂಧ ಮುಂದೆ ಬರುತ್ತದೆ. ಇದಕ್ಕೆ ಬದಲಾಗಿ ‘ವರ್ಗ’ ಪದವನ್ನು ರೂಪಕವಾಗಿ ಉಪಯೋಗಿಸಿದರೆ ಹೆಚ್ಚು ಅರ್ಥಪೂರ್ಣ). ಭಾಷೆಗಳ ಉಗಮ ಹಾಗೂ ವಿಕಸನ ‘ತಾಯಿ– ಮಗಳ’ ಸಂಬಂಧದಷ್ಟು ಸರಳವಲ್ಲ.
ಒಂದು ಭೂಭಾಗದಲ್ಲಿನ ಭಾಷಿಕ ಸಮುದಾಯವು ತನ್ನ ವೃತ್ತಿ, ಧರ್ಮ, ಆರೋಗ್ಯ ಇತ್ಯಾದಿಗಳಿಗೆ ಹಾನಿಯಾಗತೊಡಗಿದಾಗ ಅಥವಾ ಪ್ರಾಕೃತಿಕ ದುರಂತಗಳ ಕಾರಣದಿಂದ ವಲಸೆ ಹೋಗಬಹುದು. ಸಾಮೂಹಿಕ ವಲಸೆಗಳು ಪ್ರಾಗೈತಿಹಾಸದ ಕಾಲದಿಂದಲೂ ಇವೆ. ಒಂದು ಸಮುದಾಯವು ಮತ್ತೊಂದು ಭಾಷಿಕ ಸಮುದಾಯದ ಭೂಭಾಗಕ್ಕೆ ಹೋದಾಗ, ವಲಸೆ ಬಂದ ಸಮುದಾಯವು ನೂತನ ಭಾಷೆ, ಸಂಸ್ಕೃತಿ, ವೃತ್ತಿ ಇತ್ಯಾದಿಗಳ ಪ್ರಭಾವದಿಂದ ತನ್ನ ಭಾಷೆಯನ್ನು ಕಾಲ ಕ್ರಮೇಣ ಬದಲಾಯಿಸಿಕೊಳ್ಳುತ್ತದೆ; ನೆಲೆಸಿರುವ ಸ್ಥಳದ ಭಾಷೆಯ ಪದಗಳು, ಉಚ್ಚಾರವನ್ನು ತನ್ನ ಹಳೆಯ ಭಾಷೆಯೊಳಗೆ ತರುತ್ತದೆ; ನೆಲೆಸಿದ ಭಾಷೆಯ ವ್ಯಾಕರಣವನ್ನು ಅವಶ್ಯಕವಿದ್ದಷ್ಟು ತನ್ನ ಭಾಷೆಗೆ ಅಳವಡಿಸಿಕೊಳ್ಳುತ್ತದೆ.
ಶತಮಾನಗಳ ನಂತರ ವಲಸಿಗರ ಭಾಷೆ ಅವರ ಪೂರ್ವ ಭಾಷೆಗಿಂತ ಹಾಗೂ ನೆಲೆಸಿದ ಭಾಷೆಗಿಂತ ಭಿನ್ನವಾಗಿ ಹೊಸ ಭಾಷೆಯೇ ಆಗುತ್ತದೆ. ಮೊದಲಿಗದು ಆಡುಭಾಷೆಯಾಗಿದ್ದು, ಎಷ್ಟೋ ಕಾಲದ ನಂತರ ಲಿಪಿಯೊಂದನ್ನು ಅಳವಡಿಸಿಕೊಳ್ಳುತ್ತದೆ. ಇಲ್ಲಿಗೆ ಹೊಸ ಭಾಷೆಯ ವಿಕಾಸದ ಒಂದು ಘಟ್ಟ ಮುಗಿಯುತ್ತದೆ. ಈ ಹೇಳಿಕೆಯು ಎಲ್ಲಾ ಭಾಷೆಗಳಿಗೂ ಅನ್ವಯಿಸುತ್ತದೆ, ದ್ರಾವಿಡ ಭಾಷೆಗಳಿಗೂ.
ಭಾಷಾ ಪಂಡಿತರು ದ್ರಾವಿಡ ಭಾಷೆಗಳ ಪ್ರಥಮಾವಸ್ಥೆಯನ್ನು ಕಲ್ಪಿಸಿಕೊಂಡು, ಆ ಭಾಷೆಯನ್ನು ಬಹುಶಃ ಕ್ರಿ.ಪೂ. 4ನೇ ಸಹಸ್ರಮಾನದಲ್ಲಿ, ಮಧ್ಯ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ನೆಲೆಸಿದ್ದವರು ಉಪಯೋಗಿ ಸುತ್ತಿದ್ದರೆಂದು ಹೇಳುತ್ತಾರೆ. ವಲಸೆಗಳಿಂದ ಆ ‘ಮೂಲ ಭಾಷೆ’ ಕ್ರಿ.ಪೂ. 3ನೇ ಸಹಸ್ರಮಾನದಲ್ಲಿ ಕವಲೊಡೆ ಯಲು ಪ್ರಾರಂಭಿಸಿತು; ಕಾಲಕ್ರಮದಲ್ಲಿ ನಾವಿಂದು ದ್ರಾವಿಡ ಭಾಷೆಗಳೆನ್ನುವ ಕನ್ನಡ, ತೆಲುಗು, ತಮಿಳು, ಮಲಯಾಳ, ತುಳು... ವಿಕಸಿತವಾದವು.
‘ಪಂಚ ದ್ರಾವಿಡ’ ಭಾಷೆಗಳಲ್ಲದೆ, ಈ ವರ್ಗಕ್ಕೇ ಸೇರುವ ಬ್ರಹುಯಿ, ಕೊಡವ, ಕೋಟಾ, ಇರುಳ, ತೋಡ, ಕುರುಂಬ ಒಳಗೊಂಡಂತೆ ಸುಮಾರು 80 ಭಾಷೆಗಳಿವೆ. ಇವುಗಳಲ್ಲಿ ಯಾವುದು ಮೊದಲ ಕವಲಾಗಿತ್ತು, ಯಾವುದು ನಂತರ ಕವಲಾಯಿತು ಎನ್ನುವ ಜಿಜ್ಞಾಸೆ ಅರ್ಥಹೀನ. ಪ್ರಾಚೀನತೆ ಭಾಷೆಯ ಶ್ರೇಷ್ಠತೆಯನ್ನು ಗುರುತಿಸುವ ಮಾನದಂಡವಲ್ಲ. ಈ ವಿವರಗಳು ಸಂಸ್ಕೃತ ಹಾಗೂ ಉತ್ತರ ಭಾರತದ ಹಿಂದಿ, ಕಾಶ್ಮೀರಿ, ರಾಜಾಸ್ಥಾನಿಯಂತಹ ಭಾಷೆಗಳಿಗಿರುವ ಸಂಬಂಧಕ್ಕೂ ಅನ್ವಯಿಸುತ್ತವೆ.
ಸಂಸ್ಕೃತವು ಉತ್ತರ ಭಾರತದಲ್ಲಿ ಹರಡುವವರೆಗೂ ಪ್ರತಿಯೊಂದು ಚಿಕ್ಕ– ದೊಡ್ಡ ಭೂಭಾಗದಲ್ಲಿ ಅದರದೇ ಆದ ಭಾಷೆಯಿತ್ತು. ಸಂಸ್ಕೃತವು ‘ದೇವಭಾಷೆ’ಯಾಗಿ ಹಾಗೂ ಪ್ರಭುತ್ವದ ಭಾಷೆಯಾದ ಕಾರಣದಿಂದ ಅದು ಮೊದಲಿದ್ದ ದೇಶೀ ಭಾಷೆಗಳನ್ನು ಎಲ್ಲಾ ನೆಲೆಗಳಲ್ಲಿಯೂ ಪ್ರಭಾವಿಸಿತು; ಆ ಭಾಷೆಗಳಿಗೆ ಹೊಸದೇ ರೂಪು ಕೊಟ್ಟಿತು. ಹಿಂದಿ, ಪಂಜಾಬಿ ಮುಂತಾದ ಉತ್ತರ ಭಾರತದ ಇಂದಿನ ಭಾಷೆಗಳು ಆ ರೀತಿಯಲ್ಲಿ ಹೊಸ ರೂಪ ಪಡೆದ ಹಳೆಯ ಭಾಷೆಗಳೇ. ದಕ್ಷಿಣ ಭಾರತದ ಭಾಷೆಗಳು ಸಂಸ್ಕೃತದಿಂದ ಪ್ರಭಾವಿತವಾಗಿದ್ದರೂ ತಮ್ಮತನವನ್ನು ಕಳೆದುಕೊಳ್ಳದೆ ಶ್ರೀಮಂತವಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.