ಹುಣ್ಣಿಮೆಯ ಚಂದ್ರ ಎಂದರೆ ಕವಿಗಳಿಗೆ, ಪ್ರೇಮಿಗಳಿಗೆ, ಕಲಾವಿದರಿಗೆ ಅತ್ಯಂತ ಪ್ರೀತಿ. ಶೀತಲ ಕಿರಣಗಳದೊಂದು ಆಕರ್ಷಣೆಯಾದರೆ, ಅಪೂರ್ವ ಶಾಂತಿಯನ್ನೂ ಅದು ಸೂಚಿಸುತ್ತದೆ. ಸೌಂದರ್ಯ–ಶಾಂತಿಯ ಸಂಕೇತವಾದ ಚಂದ್ರ ಇದ್ದಕ್ಕಿದ್ದಂತೆ ಬಣ್ಣ ಕಳೆದುಕೊಂಡು ಮಂಕಾದರೆ ಹುಟ್ಟುವ ಭಾವನೆಗಳೇ ಬೇರೆ.
ಚಂದ್ರಗ್ರಹಣ ರಾಜನೊಬ್ಬನಿಗೆ ಸನ್ಯಾಸ ಸ್ವೀಕರಿಸಲು ಪ್ರೇರೇಪಿಸಿತು. ಕವಿಯೊಬ್ಬನಿಗೆ ನಿರಾಶಾಭಾವ ಮೂಡಿಸಿತು. ಅಷ್ಟೇ ಆಗಿದ್ದರೆ ಚೆನ್ನಾಗಿತ್ತು. ಮಹಾರಾಜರುಗಳಿಗೆ ಕೇಡನ್ನು ತರುವ ಸಂದೇಶ ಎಂದು ಚಂದ್ರಗ್ರಹಣವನ್ನು ಭಾವಿಸಿದವರೇ ಹೆಚ್ಚು. ಹಾಗಾಗಿ, ತಮ್ಮ ರಾಜನನ್ನು ಆ ದುಷ್ಟಶಕ್ತಿಯಿಂದ ಕಾಪಾಡಲು ತಾತ್ಕಾಲಿಕ ‘ರಾಜ’ನೊಬ್ಬನನ್ನು ಸಿಂಹಾಸನದ ಮೇಲೆ ಕೂಡಿಸಿ, ಗ್ರಹಣ ಮುಗಿದ ಕೂಡಲೇ ಅವನನ್ನು ಬಲಿಕೊಡುವ ಸಂಪ್ರದಾಯ ಬ್ಯಾಬಿಲೋನಿಯಾದಲ್ಲಿ ಇತ್ತು. ಭಾರತದಲ್ಲಿ ದೇವಾಲಯಗಳಿಗೆ ದತ್ತಿ ಮತ್ತು ವಿದ್ವಾಂಸರಿಗೆ ದಾನ ನೀಡುವ ಪರಿಪಾಠ ಬೆಳೆದುಬಂದಿತು. ನೂರಾರು ಶಾಸನಗಳು ಹೀಗೆ ಗ್ರಹಣಗಳನ್ನು ದಾಖಲಿಸಿವೆ. ಭೂಮಿಯ ಭ್ರಮಣೆಯ ನಿಧಾನವಾದ ಬದಲಾವಣೆಯನ್ನು ವಿವರಿಸುವಲ್ಲಿ ಇವುಗಳ ಮಹತ್ವ ತಡವಾಗಿಯಾದರೂ ಅರಿವಾಗಿದೆ.
ಭೂಮಿಯ ನೆರಳಿನಲ್ಲಿ ಚಂದ್ರ ಹಾದುಹೋಗುವ ವಿದ್ಯಮಾನವೇ ಚಂದ್ರಗ್ರಹಣ. ಇದರ ಬಗ್ಗೆ ಪ್ರಾಥಮಿಕ ಶಾಲೆಯಲ್ಲೇ ತಿಳಿವಳಿಕೆ ಕೊಡಲಾಗುತ್ತದೆ. ಆದರೂ, ಜನರ ಮನಸ್ಸಿನಿಂದ ಭಯ ಇನ್ನೂ ಮಾಸಿಲ್ಲ. ಸೂರ್ಯಗ್ರಹಣದಂದು ಕಿಟಕಿ ಬಾಗಿಲು ಹಾಕಿ ಕುಳಿತುಕೊಳ್ಳುವರು; ಚಂದ್ರಗ್ರಹಣಕ್ಕೆ ಮುಸುಕಿಟ್ಟು ಮಲಗುವರು. ಹೀಗೆ ಮಾಡುವುದರಿಂದ ಅಪೂರ್ವ ನೈಸರ್ಗಿಕ ಚಮತ್ಕಾರವನ್ನು ನೋಡುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಕಾಮನಬಿಲ್ಲು, ಜೋಡಿ ಕಾಮನಬಿಲ್ಲು, ಚಂದ್ರನ ಸುತ್ತ ‘ಗೂಡು ಕಟ್ಟುವುದು’–ಇಂತಹ ನೋಟಗಳ ಹಾಗೆ ಗ್ರಹಣವೂ ಒಂದು ಅಪರೂಪದ ಆಕರ್ಷಕ ನೋಟ.
ಭೂಮಿ ಒಂದು ಘನಗೋಳ ಆದ್ದರಿಂದ ಅದರ ನೆರಳು ಗಾಢವಾಗಿ ಕಪ್ಪಾಗಿಯೇ ಇರಬೇಕು. ಆಕಾಶದಲ್ಲೊಂದು ತೆರೆ ಇದ್ದಿದ್ದರೆ ಪರೀಕ್ಷಿಸಬಹುದಾಗಿತ್ತು. ನೆರಳಿಗಿಂತ ಚಿಕ್ಕದಾದ ಚಂದ್ರ ಹೀಗೊಂದು ತೆರೆಯಾಗುವುದೇ ಚಂದ್ರಗ್ರಹಣ. ಆದರೆ, ಭೂಮಿಯನ್ನು ಆವರಿಸಿರುವ ವಾತಾವರಣ ಕಪ್ಪು ನೆರಳಿನ ಬದಲು ಬಣ್ಣ ಬಣ್ಣದ ಲೋಕವನ್ನು ತೆರೆದಿಡುತ್ತದೆ. ಆಕರ್ಷಕ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತಗಳನ್ನು ಪ್ರದರ್ಶಿಸುತ್ತದೆಯಲ್ಲವೇ? ಹಾಗೆಯೇ ನೆರಳಿನಲ್ಲಿ ಮರೆಯಾಗುವ ಚಂದ್ರನಿಗೆ ಬಣ್ಣದ ಲೇಪನ ಮಾಡುತ್ತದೆ. ರಕ್ತವರ್ಣದ ಚಂದ್ರ ಎಂಬುದು ಉತ್ಪ್ರೇಕ್ಷೆ; ಕಿತ್ತಳೆ, ಕಂದು ಅಥವಾ ತಾಮ್ರವರ್ಣ ಎಂಬುದು ಸೂಕ್ತ.
ಸೆಪ್ಟೆಂಬರ್ 7ರ ರಾತ್ರಿ ನೆರಳಿನೊಳಗಿನ ಚಂದ್ರನ ಬಣ್ಣ ತಿಳಿಯಲು ಒಂದು ಅವಕಾಶ ಒದಗಲಿದೆ. ಸ್ವಲ್ಪ ತಡವಾಗಿ ಮಲಗಿದರಾಯಿತಷ್ಟೇ. ರಾತ್ರಿ 9.30ರ ಸುಮಾರಿಗೆ ಚಂದ್ರನತ್ತ ಕಣ್ಣು ಹಾಯಿಸಿ. ಮತ್ತೆ 10ರ ನಂತರ ಏನಾದರೂ ವ್ಯತ್ಯಾಸ ಇದೆಯೇ? ಹತ್ತು ನಿಮಿಷ ಬಿಟ್ಟು ಮತ್ತೆ ನೋಡಿ. ಒಂದು ಮೂಲೆಯಲ್ಲಿ ಸ್ವಲ್ಪ ಮಸಿ ಹತ್ತಿದ ಹಾಗೆ ಕಾಣುವುದು. ಇನ್ನೂ ಹತ್ತು ನಿಮಿಷ ಬಿಟ್ಟು ನೋಡಿದಾಗ ಆ ಭಾಗದಲ್ಲಿ ಕ್ರಮೇಣ ಮಸುಕಾಗುತ್ತಿರುವುದು ಗಮನಕ್ಕೆ ಬರುತ್ತದೆ. 10.45ರ ಸುಮಾರಿಗೆ ಚಂದ್ರ ಮಂಕಾಗಿ ಮಸಿ ಹತ್ತಿದಂತಿದ್ದ ಭಾಗ ವಿಸ್ತಾರವಾಗಿರುವುದು. ಚಂದ್ರನ ಬಣ್ಣ ಸ್ವಲ್ಪ ಕಿತ್ತಳೆಯೇನೋ ಅನ್ನಿಸಬಹುದು. 11ರ ವೇಳೆಗೆ ಬಿಳಿ ಬಣ್ಣ ಪೂರ್ತಿ ಮಾಯವಾಗಿ ಕಂದು ಅಥವಾ ಕಿತ್ತಳೆ ಆಗಬಹುದು. ಯಾವ ಬಣ್ಣ ಆಗಲಿದೆ ಎಂದು ನೋಡಿ ತಿಳಿಯಬೇಕಷ್ಟೆ.
ಚಂದ್ರನ ಸುತ್ತ ಮೋಡ ಇರದಿದ್ದರೆ ನಕ್ಷತ್ರಗಳು ಸ್ಫುಟವಾಗಿ ಕಾಣತೊಡಗುತ್ತವೆ. ಅವು ಅಲ್ಲೇ ಇದ್ದವಲ್ಲ; ಸಂಜೆ ಏಕೆ ಕಾಣಲಿಲ್ಲ? ಚಂದ್ರ ಮಂಕಾದ್ದರಿಂದ ಅವುಗಳ ಮಂದ ಪ್ರಕಾಶ ಗೋಚರಿಸುತ್ತದೆ. ವಿದ್ಯುದ್ದೀಪದ ಜೊತೆಯಲ್ಲಿ ಮೇಣದಬತ್ತಿ ಇಟ್ಟು ನೋಡಿ. ವಿದ್ಯುದ್ದೀಪ ಆರಿಸಿದಾಗ ಮಾತ್ರ ಮೇಣದಬತ್ತಿಯ ಅಸ್ತಿತ್ವ ಗಮನಕ್ಕೆ ಬಂದ ಹಾಗೆ. 11ರಿಂದ 12.22ರವರೆಗೆ ಪೂರ್ಣ ಗ್ರಹಣ. ಅಂದರೆ ಕಳಾಹೀನನಾದ ಚಂದ್ರನ ದರ್ಶನ. 12.30ರ ಹೊತ್ತಿಗೆ ಮತ್ತೆ ಕಿತ್ತಳೆ ಬಣ್ಣದ ಲೇಪನ. ಅಂಚಿನಲ್ಲಿ ತೆಳುವಾಗಿ ಕಾಣಿಸಿಕೊಳ್ಳುವ ಬಿಳಿ ಬಣ್ಣ ಕ್ರಮೇಣ ವಿಸ್ತರಿಸುತ್ತದೆ, 1.26ಕ್ಕೆ ಮತ್ತೆ ಬಿಳಿ ಚಂದ್ರ ಹಾಜರು! ಸುತ್ತಲಿನ ನಕ್ಷತ್ರಗಳು ಮಾಯ!
ನಾವು ಮಾಡುವ ಕೆಲಸವೊಂದಿದೆ. 10.30ರ ಸಮಯದಲ್ಲಿ ವೃತ್ತಾಕಾರದ ನೆರಳು ಚಂದ್ರನ ಮೇಲೆ, ಕಚ್ಚಿ ತಿಂದ ರೊಟ್ಟಿಯ ಆಕಾರ ಮೂಡಿಸಿದೆಯಲ್ಲವೇ? ಭೂಮಿಯ ನೆರಳು ಗುಂಡಗಿದೆ ಎಂದ ಮೇಲೆ ಭೂಮಿ ಗುಂಡಗಿದೆ ಎಂದಾಯಿತಲ್ಲವೇ? ನಿಮ್ಮ ಕಣ್ಣಿನಿಂದಲೇ ಈ ಸತ್ಯವನ್ನು ಖಚಿತಪಡಿಸಿಕೊಳ್ಳಿ. 11ರಿಂದ 12.22ವರೆಗಿನ ಅವಧಿಯಲ್ಲಿ ಹೊರಗೆ ಬಂದು ಕತ್ತೆತ್ತಿ ನೋಡಿ. ಬಹುಶಃ ಚಂದ್ರನನ್ನು ಹುಡುಕಬೇಕಾಗಬಹುದು. ಮೊಬೈಲ್‌ನಿಂದ ಫೋಟೊ ತೆಗೆಯಲು ಪ್ರಯತ್ನಿಸಿ. ಬೆಳಕು ಸಾಲದು ಎಂಬ ಸಂದೇಶ ಬಂದರೆ ಆಶ್ಚರ್ಯವೇನಿಲ್ಲ. ಬೇರೆ ಕ್ಯಾಮೆರಾ ಇದ್ದರೆ ಎಕ್ಸ್‌ಪೋಷರ್ ಹೊಂದಿಸುವ ಪ್ರಯತ್ನ ಮಾಡಿ ಫೋಟೊ ತೆಗೆಯಬಹುದು.
ಗ್ರಹಣ ವೀಕ್ಷಿಸುವ ಈ ಅವಕಾಶ ಕಳೆದುಕೊಂಡರೆ, 2028ರ ಕೊನೆಯ ದಿನದವರೆಗೂ ಕಾಯಬೇಕಾಗುತ್ತದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.