ADVERTISEMENT

ಸಂಗತ | ಆರ್‌ಎಸ್‌ಎಸ್: ಸುಳ್ಳು ಸೃಷ್ಟಿಸುವ ಬ್ರಹ್ಮ

ಪ್ರಜಾವಾಣಿ ವಿಶೇಷ
Published 30 ಅಕ್ಟೋಬರ್ 2025, 23:30 IST
Last Updated 30 ಅಕ್ಟೋಬರ್ 2025, 23:30 IST
   

ಸಾಹಿತಿ ದೇವನೂರ ಮಹಾದೇವ ಅವರಿಗೆ ಪ್ರತಿಕ್ರಿಯಿಸಲು ಹೋಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಇನ್ನಷ್ಟು ಸುಳ್ಳುಗಳನ್ನು ಹೇಳಿದ್ದಾರೆ (ಪ್ರ.ವಾ., ಅ. 28). ಆರ್‌ಎಸ್‌ಎಸ್ ಸುಳ್ಳನ್ನು ಸೃಷ್ಟಿಸುವ ಬ್ರಹ್ಮವೇ ಆಗಿದೆ ಎನ್ನುವುದನ್ನು ನನ್ನ ಅನುಭವದ ಹಿನ್ನೆಲೆಯಲ್ಲಿ ವಿವರಿಸುತ್ತೇನೆ.

ಇಪ್ಪತ್ತೈದು ವರ್ಷಗಳ ಹಿಂದೆ ನಾನು ಶಿರಸಿಯಲ್ಲಿದ್ದೆ. ಆರ್‌ಎಸ್‌ಎಸ್‌ನ ಬೌದ್ಧಿಕ ಪ್ರಮುಖ ಭಾಷಣಕಾರ ಉಪೇಂದ್ರ ಶೆಣೈ ಬಂದಿದ್ದರು. ಅವರು, ಸುಳ್ಳನ್ನು ಸುಂದರವಾಗಿ ಹೇಳಿ ಜನರನ್ನು ನಂಬಿಸಬಲ್ಲ ವ್ಯಕ್ತಿ. ಅವರ ಭಾಷಣ ಸೃಷ್ಟಿಯ ಆರಂಭದಿಂದ ತೊಡಗಿ ವೇದಕಾಲಗಳನ್ನೆಲ್ಲ ವಿವರಿಸಿದಾಗ, ಅಪ್ರತಿಮವಾಗಿ ಮಾತನಾಡುತ್ತಾರೆಂದು ಸಭಿಕರು ಭ್ರಮಾಧೀನರಾದರು. ಸುಳ್ಳನ್ನು ಕನಿಷ್ಠ ನಾಚಿಕೆಯೂ ಇಲ್ಲದೆ ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳುವ ಮನಸ್ಸು ಅವರದಾಗಿತ್ತು. 1678ನೇ ಇಸವಿ ಫೆಬ್ರುವರಿ 6ರಂದು ಏನಾಯಿತು ಎಂದರೆ... ಹೀಗೆ ಹೇಳಿದರೆ ಪ್ರಶ್ನಿಸುವವರು ಕಡಿಮೆ; ಕರಾರುವಕ್ಕಾಗಿ ಮಾತನಾಡುತ್ತಾರೆಂದು ಹೊಗಳುವವರೇ ಹೆಚ್ಚು. ಹೀಗೆ ಧೈರ್ಯದಿಂದ ಸುಳ್ಳು ಹೇಳುವುದೇ ಆರ್‌ಎಸ್‌ಎಸ್‌ನವರ ಪ್ರಕೃತಿ.

ಉಪೇಂದ್ರ ಶೆಣೈ ಅವರು ತಮ್ಮ ಮಾತುಗಳಲ್ಲಿ ‘ಹಿಮಾಲಯಮಾರಭ್ಯ ಯಾವದಿಂದು ಸರೋವರಂ./ ತಂ ದೇವ ನಿರ್ಮಿತ ದೇಶವು ಹಿಂದುಸ್ತಾನಮಭಿಜಾಯತೆ’ (ಹಿಮಾಲಯದಿಂದಾರಂಭಿಸಿ ಕನ್ಯಾಕುಮಾರಿವರೆಗಿನ ದೇಶವನ್ನು ದೇವರು ಸೃಷ್ಟಿ ಮಾಡಿದ್ದು, ಅದು ಹಿಂದೂಸ್ತಾನ ಎಂದು ಹೆಸರಾಗಿದೆ) ಎನ್ನುವ ಶ್ಲೋಕವನ್ನು ಹೇಳಿ, ಎರಡೂವರೆ ಸಾವಿರ ವರ್ಷಗಳ ಹಿಂದೆ ‘ಬಾರ್ಹಸ್ಪತ್ಯ’ ಎಂಬ ಗ್ರಂಥದಲ್ಲಿ ಈ ಶ್ಲೋಕ ಇದೆ ಎಂದರು. ತಕ್ಷಣ ನಾನು, ‘ಆ ಗ್ರಂಥ ಎಲ್ಲಿದೆ? ನನಗೆ ಬೇಕು’ ಎಂದೆ. ರಸಭಂಗವಾದಂತೆ ಇಡೀ ಸಭೆ ನನ್ನನ್ನು ಕೆಕ್ಕರಿಸಿ ನೋಡತೊಡಗಿತು. ಆಗ ವೇದಿಕೆಯ ಮೇಲಿದ್ದವರೊಬ್ಬರನ್ನು ತೋರಿಸಿ, ‘ಅವರು ನಿಮಗೆ ಅದೆಲ್ಲವನ್ನು ವಿವರಿಸುತ್ತಾರೆ, ನಾನು ಭಾಷಣ ಮುಂದುವರಿಸುತ್ತೇನೆ’ ಎಂದಾಗ, ಸರಿ ಎಂದು ಒಪ್ಪಿಕೊಂಡೆ.

ADVERTISEMENT

ನಾಲ್ಕೈದು ದಿನಗಳ ಮೇಲೆ ಆ ನಾಯಕನಿಗೆ ದೂರವಾಣಿ ಕರೆ ಮಾಡಿ, ‘ಬಾರ್ಹಸ್ಪತ್ಯ ಗ್ರಂಥ ಎಲ್ಲಿದೆ ತಿಳಿಸಿ’ ಎಂದೆ. ನಾಲ್ಕೈದು ದಿನಗಳಲ್ಲಿ ತಿಳಿಸುತ್ತೇನೆ ಎಂದರು. ಮತ್ತೆ ಫೋನಾಯಿಸಿದೆ. ‘ಆ ಗ್ರಂಥ ಮೈಸೂರಿನಲ್ಲಿದೆ. ಸೋಂದಾ ಶಾಸ್ತ್ರಿಗಳು ತಾನು ನೋಡಿದ್ದೇನೆ ಎಂದಿದ್ದಾರೆ’ ಎಂದರು. ನನಗೆ ಸಿಟ್ಟು ನೆತ್ತಿಗೇರಿತು. ‘ಬಾರ್ಹಸ್ಪತ್ಯ ಹೆಸರಿನ ಗ್ರಂಥ ಇರಲು ಸಾಧ್ಯವೇ ಇಲ್ಲ. ಅದು ಅಪ್ಪಟ ಸುಳ್ಳು. ಸಾವರ್ಕರ್‌ ಎನ್ನುವವರೊಬ್ಬರು ಇದ್ದರು, ಗೊತ್ತೇ ನಿಮಗೆ’ ಎಂದು ಕೇಳಿದೆ. ‘ಗೊತ್ತು, ಅವರು ನಮ್ಮ ಗುರು ಸಮಾನರು’ ಎಂದರು. ‘ಅವರು ಬರೆದ ‘ಆತ್ಮಾಹುತಿ’ ಪುಸ್ತಕ ಗೊತ್ತೇ’ ಎಂದು ಕೇಳಿದೆ. ‘ಅದು ನನ್ನಲ್ಲಿದೆ’ ಎಂದರು. ‘ಪುಸ್ತಕ ಇದ್ದರಾಗಲಿಲ್ಲ, ಅದನ್ನು ಓದಿ ಮಸ್ತಕಕ್ಕೆ ಏರಿಸಿಕೊಳ್ಳಬೇಕು. ಆ ಪುಸ್ತಕದಲ್ಲಿ ಈ ಶ್ಲೋಕವನ್ನು ನಾನು ಈ ಅರ್ಥದಲ್ಲಿ ರಚಿಸಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂತಿರುವಾಗ ಈ ಶ್ಲೋಕ ಎರಡೂವರೆ ಸಾವಿರ ವರ್ಷಗಳ ಹಿಂದೆ ರಚಿಸಿದ್ದಾದರೆ, ಸಾವರ್ಕರರು ಈ ಶ್ಲೋಕವನ್ನು ಕದ್ದಿದ್ದಾರೆ ಎನ್ನಬಹುದಲ್ಲವೇ? ಇಂಥ ಅಪ್ಪಟ ಸುಳ್ಳುಗಳನ್ನು ಹೇಳುತ್ತಲೇ ಜನರನ್ನು ಯಾಮಾರಿಸುತ್ತಿದ್ದೀರಿ’ ಎಂದು ಫೋನಿಟ್ಟೆ.

ಗಾಂಧೀಜಿಯವರನ್ನು ಕೊಂದ ನಾಥೂರಾಮ್‌ ಗೋಡ್ಸೆ ತನ್ನ ಆತ್ಮಕಥೆಯಲ್ಲಿ (ಗಾಂಧಿ ಹತ್ಯೆ ಮತ್ತು ನಾನು) ಸಂಘದವರ ನೈಜ ಮನಃಸ್ಥಿತಿಯನ್ನು ತೆರೆದಿಟ್ಟಿದ್ದಾನೆ. ಮುಸ್ಲಿಮನಂತೆ ವೇಷ ಧರಿಸಿ ಒಂದು ಗುಂಡನ್ನು ಗಾಂಧೀಜಿಯವರಿಗೆ ಹೊಡೆದು, ಮತ್ತೊಂದು ಗುಂಡನ್ನು ತನ್ನ ಮುಖಕ್ಕೆ ಹೊಡೆದುಕೊಳ್ಳಬೇಕು ಎಂದುಕೊಂಡಿದ್ದನಂತೆ. ಆಗ ಗಾಂಧೀಜಿಯವರನ್ನು ಕೊಂದವರು ಮುಸ್ಲಿಂ ಎಂದು, ಮುಸ್ಲಿಮರನ್ನು ಹಿಂದೂಗಳು ಕಗ್ಗೊಲೆ ಮಾಡುತ್ತಾರೆಂದು ಯೋಚಿಸಿದ್ದನಂತೆ. ಕೊನೆಗೆ ಹಾಗೆ ಮಾಡಲಾಗದೆ, ಗಾಂಧೀಜಿಯವರಿಗೆ ಗುಂಡು ಹಾರಿಸಿದ್ದಾನೆ. ಇದು ಅವನೇ ಹೇಳಿಕೊಂಡಿರುವ ಸತ್ಯ.

ಆರ್‌ಎಸ್‌ಎಸ್‌ ಎಲ್ಲ ಕ್ಷೇತ್ರಗಳಲ್ಲೂ ತನ್ನ ಉಪಸಂಘಗಳನ್ನು ರಚಿಸಿಕೊಂಡಿದೆ. ಸಾಹಿತ್ಯಕ್ಕೆ ಅಖಿಲ ಭಾರತ ಸಾಹಿತ್ಯ ಪರಿಷತ್, ರಾಷ್ಟ್ರೋತ್ಥಾನ ಸಾಹಿತ್ಯ ಬಳಗ, ಶಿಕ್ಷಣ ಕ್ಷೇತ್ರಕ್ಕೆ ಹಿಂದೂ ಸೇವಾ ಪ್ರತಿಷ್ಠಾನ, ಸಂಘರ್ಷಕ್ಕೆ ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಎಂದೆಲ್ಲ ನೂರಾರು ಉಪಸಂಘಗಳಿವೆ. ಅವೆಲ್ಲವನ್ನೂ ಸೇರಿಸಿ ‘ಸಂಘ ಪರಿವಾರ’ ಎನ್ನಲಾಗುತ್ತದೆ. ಈ ಪರಿವಾರದವರು ಮುಸ್ಲಿಮರ ಮೇಲೆ ಈಗ ದ್ವೇಷ ಕಾರುತ್ತಾರೆ. ಒಂದೊಮ್ಮೆ ಮುಸ್ಲಿಮರು ದೇಶದಿಂದ ಹೊರಗೆ ಹೋದರೆ ಆ ದ್ವೇಷ ಕ್ರಿಶ್ಚಿಯನ್ನರ ಮೇಲೆ ತಿರುಗುತ್ತದೆ. ಅವರನ್ನು ದೇಶದಿಂದ ಹೊರಹಾಕಿದರೆ, ಸಿಖ್ಖರ ಮೇಲೆ, ಬೌದ್ಧರ ಮೇಲೆ ಎರಗುತ್ತದೆ. ಹೀಗೆ ಆ ದುಷ್ಟ ಮನಃಸ್ಥಿತಿ ನಾಶವಾಗುವುದಿಲ್ಲ.

ಸಂಘದಲ್ಲಿ ನಲವತ್ತು ವರ್ಷ ದುಡಿದು ಬೌದ್ಧಿಕ ಪ್ರಮುಖರಾಗಿದ್ದ ಹನುಮೇಗೌಡರು ಹೊರ ಬಂದು ಈಗ ಪ್ರಚುರಪಡಿಸುತ್ತಿರುವ ವಿಚಾರಗಳು ನನ್ನ ಮಾತನ್ನು ಪುಷ್ಟೀಕರಿಸುತ್ತವೆ. ಭ್ರಷ್ಟಾಚಾರ, ಲೈಂಗಿಕ ದೌರ್ಜನ್ಯ, ಕಳ್ಳತನದಲ್ಲಿ ಆಸ್ತಿಯನ್ನು ಹೆಚ್ಚಿಸುವುದು ಎಲ್ಲವೂ ಸಂಘದ ನಾಯಕರಲ್ಲಿದೆ ಎಂಬುದನ್ನು ಅವರು ನಿಖರವಾಗಿ ಹೇಳುತ್ತಿದ್ದಾರೆ. ಸಂಘದವರ ದುಷ್ಟ ಮನಃಸ್ಥಿತಿಯ ಬಗ್ಗೆ ಸಾಕಷ್ಟು ಸಾಕ್ಷಿಗಳಿದ್ದರೂ, ಅವುಗಳನ್ನು ಸುಳ್ಳುಗಳ ಮೂಲಕ ಮರೆಮಾಚುವ ಪ್ರಯತ್ನ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.