ADVERTISEMENT

ಸಂಗತ: ‘ಎಸ್‌ಐಆರ್’ ಜೊತೆ ಸಲ್ಲಾಪ ಅಪಾಯಕಾರಿ

ಕೆ.ಫಣಿರಾಜ್
Published 22 ಜನವರಿ 2026, 23:30 IST
Last Updated 22 ಜನವರಿ 2026, 23:30 IST
   

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಜಿಲ್ಲೆಯ ನಂದವಾಡಿಯಲ್ಲಿ ‘ಎಸ್‌ಐಆರ್‌ ಅನ್ನು ರಾಜಕೀಯ ವಿಷಯ ಮಾಡಲು ಕಾಂಗ್ರೆಸ್‌ ಇಚ್ಛಿಸುವುದಿಲ್ಲ. ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳುವ ಕಾಳಜಿಯನ್ನು ಮಾತ್ರ ಪಕ್ಷ ಹೊಂದಿದೆ’ ಎಂಬ ಹೇಳಿಕೆ ನೀಡಿದ್ದಾರೆ (ಪ್ರ.ವಾ., ಜ. 21). ಈ ಹೇಳಿಕೆ ಗಮನಿಸಿದರೆ, ಒಕ್ಕೂಟ ಸರ್ಕಾರವು ರಾಜಕೀಯ ತಂತ್ರವಾಗಿ ಹರಿಬಿಟ್ಟಿರುವ ಎಸ್‌ಐಆರ್‌ ನಡಾವಳಿಯ ಹಿಂದೆ ಅಡಗಿರುವ ಕರಾಳತೆಯನ್ನು ಮುಖ್ಯಮಂತ್ರಿ ಅವರು ಹಗುರವಾಗಿ ಪರಿಗಣಿಸಿದಂತೆ ಕಾಣುತ್ತದೆ.

ರಾಜ್ಯದಲ್ಲಿ 2002ರ ಮತದಾರರ ಪಟ್ಟಿಯನ್ನು ಆಧಾರ ವಾಗಿ ಇಟ್ಟುಕೊಂಡು ರಾಜ್ಯ ಚುನಾವಣಾ ಆಯೋಗವು ‘ಮತದಾರರ ಪಟ್ಟಿ’ ತಯಾರಿ ಶುರುಮಾಡಿರುವ ಹೊತ್ತಲ್ಲಿ ಬಂದಿರುವ ಮುಖ್ಯಮಂತ್ರಿಗಳ ಹೇಳಿಕೆಯು ನಿಜಕ್ಕೂ ಆತಂಕ ಕಾರಿಯಾಗಿದೆ. ಆತಂಕಕ್ಕೆ ಕಾರಣಗಳು ವಾಸ್ತವಿಕವಾಗಿವೆ.

ಎಸ್‌ಐಆರ್‌ ಸಾಮಾನ್ಯ ಮತದಾರರ ಪಟ್ಟಿಯ ಪರಿಷ್ಕರಣೆ ಆಗಿರದೆ, ‘ಈ ದೇಶದಲ್ಲಿ ಯಾರು ಅಧಿಕೃತ ಪ್ರಜೆಗಳು, ಯಾರು ಅಲ್ಲ’ ಎಂಬ ರಾಜಕೀಯ ತತ್ತ್ವದ ಆಧಾರದಲ್ಲಿ ಮತದಾರರನ್ನು ಅಧಿಕೃತಗೊಳಿಸುವ, ಆ ಮೂಲಕ ದೇಶವಾಸಿಗಳ ಪೌರತ್ವವನ್ನು ನಿರ್ಣಯಿಸುವ ರಾಜಕೀಯ ಕಾರ್ಯಾಚರಣೆ ಆಗಿದೆ.

ADVERTISEMENT

ಭಾರತದ ಸಂವಿಧಾನವು, ಸ್ವಾತಂತ್ರ್ಯ ಕಾಲಕ್ಕೆ ಜಾತಿ ಮತ್ತು ಮತಾತೀತವಾಗಿ ಈ ದೇಶದಲ್ಲಿ ವಾಸಿಸುತ್ತಿರುವ ಎಲ್ಲರೂ ಈ ದೇಶದ ಪ್ರಜೆಗಳು ಎಂಬ ಅತ್ಯಂತ ಪುರೋಗಾಮಿ ರಾಷ್ಟ್ರ ರಾಜಕೀಯ ತತ್ತ್ವವನ್ನು ಅಂಗೀಕರಿಸಿತು. ಆ ತತ್ತ್ವದ ಅನುಸಾರ, ದೇಶದಲ್ಲಿ ವಾಸಿಸುವ ಪ್ರತಿ ವ್ಯಕ್ತಿಗೂ ಮತದಾನದ ಮೌಲ್ಯಯುತ ಹಕ್ಕನ್ನು ನೀಡಬೇಕೆಂದು, ದೇಶದ ಪ್ರಥಮ ಚುನಾವಣಾ ಆಯೋಗವು ಕಾಡು, ಬೆಟ್ಟ, ಹಳ್ಳಕೊಳ್ಳಗಳನ್ನು ಲೆಕ್ಕಿಸದೆ ದೇಶದಾದ್ಯಂತ ಮಹಾಯಾನಗೈದು ಮತದಾರರ ಯಾದಿ ತಯಾರಿಸಿತು. ಬಹುತೇಕ ಮತದಾರರು ಅನಕ್ಷರಸ್ಥರಾಗಿದ್ದ ಕಾರಣ, ಪಕ್ಷಗಳನ್ನು ಗುರುತಿಸಿ ಮತದಾನದ ಹಕ್ಕನ್ನು ಚಲಾಯಿಸಲು ಚಿತ್ರರೂಪದ ‘ಪಕ್ಷ ಚಿಹ್ನೆ’ಗಳನ್ನು ರೂಪಿಸಿತು. ಅದು ಯಾರನ್ನೂ ಪ್ರಜಾಪ್ರಭುತ್ವ ನಡಾವಳಿಗಳಿಂದ ಹೊರಗುಳಿಸದೆ ‘ಒಳಗೊಳ್ಳುವಿಕೆ’ಯ ಮಹತ್ವದ ಮಹಾನಡೆಯಾಗಿತ್ತು. ಆ ತತ್ತ್ವದ ಆಧಾರದಲ್ಲಿಯೇ ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟಲಾಯಿತು. ಪ್ರಸ್ತುತ ಎಸ್‌ಐಆರ್‌, ಆ ಮಹಾನ್ ತತ್ತ್ವವನ್ನು ಹಿನ್ನಡೆಗೆ ಸರಿಸಿ, ಮತ ಹಾಗೂ ಪಕ್ಷಪಾತದ ಆಧಾರದಲ್ಲಿ ಮತದಾರರನ್ನು ‘ಹೊರಗಿಡುವ’ ನಿಯಮಾವಳಿಗಳ ಮೂಲಕ ಬುಡಮೇಲು ಮಾಡುವ ಸಕಲ ಸೂಚನೆಗಳನ್ನೂ ಪ್ರದರ್ಶಿಸುತ್ತಿದೆ.

ಒಕ್ಕೂಟ ಸರ್ಕಾರ ಹಾಗೂ ಚುನಾವಣಾ ಆಯೋಗ ಬಿಂಬಿಸುತ್ತಿರುವಂತೆ, ಎಸ್‌ಐಆರ್‌ ನಡಾವಳಿಗೆ ನೈಜವಾದ ಸಂವಿಧಾನದ ಮಾನ್ಯತೆ ಇಲ್ಲ. ಸಂವಿಧಾನಾತ್ಮಕವಾಗಿ ಚುನಾವಣಾ ಆಯೋಗಕ್ಕೆ ಕಾಲಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಅಧಿಕಾರವಿದೆ. ಅಗತ್ಯ ಸಮಯದಲ್ಲಿ ‘ತೀವ್ರ ಪರಿಷ್ಕರಣೆ’ ಮಾಡುವ ಅಧಿಕಾರವೂ ಇದೆ.ಇವುಗಳನ್ನು ಹಿಂದಿನ ಆಯೋಗಗಳು ಮಾಡಿಕೊಂಡು ಬಂದಿವೆ. ಆದರೆ, ಸಾಂವಿಧಾನಿಕ ನಡಾವಳಿ ಅನ್ವಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್‌) ಅನ್ನು ದೇಶದಾದ್ಯಂತ ಬೇಷರತ್ತಾಗಿ ನಡೆಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿಲ್ಲ. ಮತದಾರರ ‘ಪೌರತ್ವ’ವನ್ನು ನಿರ್ಣಯಿಸುವ ಅಧಿಕಾರವೂ ಆಯೋಗಕ್ಕೆ ಇಲ್ಲ. ಇದನ್ನೆಲ್ಲ ಲೆಕ್ಕಿಸದೆ, ಹಾಲಿ ಒಕ್ಕೂಟ ಸರ್ಕಾರವು, ಕೆಲವು ವರ್ಷಗಳ ಹಿಂದೆ ನಡೆಸಲು ಯತ್ನಿಸಿದ್ದ ‘ರಾಷ್ಟ್ರೀಯ ಪೌರತ್ವ ನೋಂದಣಿ’ಯ (ಎನ್‌ಆರ್‌ಸಿ) ವಿಫಲ ನಡೆಯನ್ನು ‘ಎಸ್‌ಐಆರ್‌’ ಮೂಲಕ ಸಾಧಿಸಲು ಹೊರಟಿದೆ. ಎನ್‌ಆರ್‌ಸಿಯ ಉದ್ದೇಶವು ಅಲ್ಪಸಂಖ್ಯಾತರ ಪೌರತ್ವದ ಹಕ್ಕುಗಳನ್ನು ಕಿತ್ತುಕೊಳ್ಳುವುದಾಗಿತ್ತು. ಎಸ್‌ಐಆರ್‌ ನಿರೂಪಣೆ, ನಡೆಗಳೂ ಅದೇ ಉದ್ದೇಶವನ್ನು ಹೊಂದಿವೆ. ಇದು ರಾಜಕೀಯವೇ ಹೊರತು, ಪ್ರಜಾಪ್ರಭುತ್ವದ ಸಾಮಾನ್ಯ ನಡಾವಳಿಯಲ್ಲ.

ಇದುವರೆಗೂ ಎಸ್‌ಐಆರ್‌ ನಡೆದಿರುವ ಹಾಗೂ ನಡೆ ಯುತ್ತಿರುವ ರಾಜ್ಯಗಳ ವಿದ್ಯಮಾನಗಳು ಮೇಲೆ ತಿಳಿಸಿರುವ ಅಂಶಗಳನ್ನು ಪುಷ್ಟೀಕರಿಸುತ್ತವೆ. ಈ ನಡಾವಳಿಗಳ ಹಲವು ಹಂತಗಳಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯವು ಮಧ್ಯ ಪ್ರವೇಶಿಸಿ ಚುನಾವಣಾ ಆಯೋಗವನ್ನು ಎಚ್ಚರಿಸುತ್ತಿದೆ. ಪ್ರಸ್ತುತ ಎಸ್‌ಐಆರ್‌ ನಡೆಯುತ್ತಿರುವ ಪಶ್ಚಿಮ ಬಂಗಾಳ ರಾಜ್ಯದಲ್ಲಿ, ಎಸ್‌ಐಆರ್‌ ನಿಯಮಾನುಸಾರ ಎಲ್ಲ ದಾಖಲೆ ಗಳನ್ನು ಸಲ್ಲಿಸಿದ ನಂತರವೂ, 1.3 ಕೋಟಿ ಜನರನ್ನು ‘ತಾರ್ಕಿಕ ಲೋಪ’ವೆಂಬ ಹೊಸ ಅಸ್ತ್ರದ ಮೂಲಕ ಹಿಂಸಿಸು ತ್ತಿರುವ ಕುರಿತು ಸುಪ್ರೀಂ ಕೋರ್ಟ್ ದಿಗ್ಭ್ರಮೆ ವ್ಯಕ್ತಪಡಿಸಿದೆ.

ಎಸ್‌ಐಆರ್‌ ಹಿಂದಿನ ರಾಜಕೀಯ ಉದ್ದೇಶಗಳನ್ನು ಅರಿತು ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ಎಸ್‌ಐಆರ್‌ ಅನ್ನು ‘ರಾಜಕೀಯ ಸವಾಲು’ ಎಂದು ಪರಿಗಣಿಸಿ ಪ್ರತಿರೋಧ ತೋರುತ್ತಿವೆ. ಈ ರಾಜ್ಯ ಗಳಲ್ಲಿ ಅಧಿಕಾರದಲ್ಲಿ ಇರುವ ಪಕ್ಷಗಳು ತಮ್ಮ ಸಂಘಟನಾ ಹಂದರವನ್ನು ಜನಜಾಗೃತಿಗೆ ಹುರಿಗೊಳಿಸುತ್ತಿವೆ. ಈ ಹಾದಿಯಲ್ಲಿ ನಡೆಯುವ ಇಚ್ಛಾಶಕ್ತಿಯನ್ನು ನಮ್ಮ ಮುಖ್ಯಮಂತ್ರಿ ಅವರು ತೋರದೆ ಇರುವುದು ಒಂದು ಕಡೆ ಯಾದರೆ, ಮತ್ತೊಂದು ಕಡೆ ತಮ್ಮ ಪಕ್ಷವು ರಾಜಕೀಯವಾಗಿ ನಿರ್ಲಿಪ್ತವಾಗಿ ನಿಷ್ಕ್ರಿಯವಾಗಿ ಇರುತ್ತದೆ ಎಂಬ ಸೂಚನೆ ಕೊಡುತ್ತಿದ್ದಾರೆ.

ಎಸ್‌ಐಆರ್‌ ಜೊತೆಗಿನ ಸಲ್ಲಾಪ ಬಹಳ ಅಪಾಯಕಾರಿ ಎನ್ನುವ ಎಚ್ಚರದ ತಿಳಿವಳಿಕೆಯನ್ನು ರಾಜ್ಯ ಕಾಂಗ್ರೆಸ್‌ ಹಾಗೂ ಸರ್ಕಾರಕ್ಕೆ ನಾಡಿನ ಜನ ಚಳವಳಿಗಳು ನೀಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.