ADVERTISEMENT

ಸಂಗತ: ಸೌಖ್ಯಕ್ಕೆ ತೊಡಕಾಗದಿರಲಿ ಸಂಪ್ರದಾಯ

ಸಂಪ್ರದಾಯದ ನೆಪ ಹೂಡಿ ಗರ್ಭಿಣಿಯರ ತವರಿನ ಮೇಲೆ ಆರ್ಥಿಕ ಹಾಗೂ ಆರೈಕೆಯ ಹೊರೆ ಹೊರಿಸುವುದು ಎಷ್ಟು ಸರಿ?

ಎಚ್.ಕೆ.ಶರತ್
Published 9 ಜೂನ್ 2022, 19:32 IST
Last Updated 9 ಜೂನ್ 2022, 19:32 IST
   

ಅವಧಿಗೂ ಮುನ್ನವೇ ಜನಿಸಿದ ತನ್ನ ಮಗುವನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಮೇಲೆ ಒಂದಷ್ಟು ದಿನಗಳಾದರೂ ತನ್ನೊಂದಿಗೆ ಮನೆಯಲ್ಲಿ ಇರಿಸಿಕೊಳ್ಳುವ ಅಪೇಕ್ಷೆ ಸ್ನೇಹಿತನದ್ದಾಗಿತ್ತು. ಗ್ರಾಮೀಣ ಪ್ರದೇಶದಲ್ಲಿರುವ ಹೆಂಡತಿಯ ತವರು ಮನೆಗೆ ಕಳಿಸಿದ ನಂತರ ಮಗುವಿನ ಆರೋಗ್ಯದಲ್ಲಿ ಏರುಪೇರಾದರೆ ಏನು ಮಾಡುವುದು ಎನ್ನುವ ಆತಂಕ ಅವನಲ್ಲಿ ನೆಲೆಯೂರಿತ್ತು.

‘ಸಂಪ್ರದಾಯದ ಪ್ರಕಾರ, ಹೆರಿಗೆಯ ನಂತರ ಬಾಣಂತಿ- ಮಗುವನ್ನು ತವರು ಮನೆಗೆ ಕಳಿಸಿಕೊಡಬೇಕು. ಹೀಗೆ ಮಾಡುವ ಬದಲು ನಮ್ಮ ಮನೆಗೆ ಕರೆದುಕೊಂಡು ಬಂದರೆ ಸುತ್ತಮುತ್ತಲಿನವರು ಏನೆಂದುಕೊಳ್ಳುತ್ತಾರೆ? ಯಾವುದೇ ಕಾರಣಕ್ಕೂ ಮನೆಗೆ ಕರೆದುಕೊಂಡು ಬರುವುದು ಬೇಡ’ ಎಂಬ ನಿಲುವಿಗೆ ಸ್ನೇಹಿತನ ತಾಯಿ ಜೋತು ಬಿದ್ದಿದ್ದರು. ಬೇರೆ ದಾರಿ ಕಾಣದೆ, ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಹೆಂಡತಿ- ಮಗುವನ್ನು ಹೆಂಡತಿಯ ತವರು ಮನೆಗೆ ಬಿಟ್ಟು ಬಂದ. ಇದಾದ ಒಂದು ವಾರಕ್ಕೆ ಮೊದಲೇ ನಿರೀಕ್ಷಿಸಿದಂತೆ ಮಗುವಿನ ಆರೋಗ್ಯದಲ್ಲಿ ಏರುಪೇರಾಯಿತು. ಹೆಂಡತಿ ಮನೆಯಿಂದ ಇಪ್ಪತ್ತು ಕಿಲೊಮೀಟರ್ ದೂರದಲ್ಲಿದ್ದ ತಾಲ್ಲೂಕು ಕೇಂದ್ರದ ಆಸ್ಪತ್ರೆಗೆ ಮೊದಲು ಮಗುವನ್ನು ದಾಖಲಿಸಲಾಯಿತು. ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯುವ ಭರವಸೆ ದೊರೆಯದೇ ಹೋದಾಗ ಕೊನೆಗೆ ಸ್ನೇಹಿತ ತಾನು ನೆಲೆಸಿರುವ ನಗರದ ಸುಸಜ್ಜಿತ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ. ‘ಮಗುವಿನ ಪ್ರಾಣಕ್ಕಿಂತ ನಿಮಗೆ ನಿಮ್ಮ ಸಂಪ್ರದಾಯವೇ ಮುಖ್ಯವಾಯಿತಾ’ ಎಂಬ ಪ್ರಶ್ನೆಯನ್ನು ತಾಯಿಯ ಮುಂದಿರಿಸಿ, ಈಗಲಾದರೂ ಪರಿಸ್ಥಿತಿಯ ತೀವ್ರತೆ ಅರ್ಥ ಮಾಡಿಕೊಳ್ಳಿ ಎಂದು ವಿನಂತಿಸಿದ. ಕೊನೆಗೂ ಮಗುವಿನ ಆರೋಗ್ಯದಲ್ಲಿ ಚೇತರಿಕೆಯಾಯಿತು. ಆಸ್ಪತ್ರೆಯಿಂದ ಡಿಸ್‌ಚಾರ್ಜ್‌
ಆದ ನಂತರ ಸ್ನೇಹಿತನ ಹೆಂಡತಿ- ಮಗು ತವರು ಮನೆ ಸೇರಿದ್ದಾರೆ.

ಮದುವೆ ನಂತರ ದಂಪತಿ ಯಾರೊಂದಿಗೆ ನೆಲೆಸಿರಬೇಕು? ಗರ್ಭಿಣಿಯ ಆರೈಕೆಯನ್ನು ಯಾರು ನೋಡಿಕೊಳ್ಳಬೇಕು ಮತ್ತು ಎಲ್ಲಿರಬೇಕು? ಹೆರಿಗೆ ನಂತರ ಬಾಣಂತಿ- ಮಗು ಯಾರ ಮನೆಯಲ್ಲಿರಬೇಕು?... ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮಾನದಂಡವಾಗುವುದು ಸಂಪ್ರದಾಯವೋ ಅಥವಾ ಸೌಲಭ್ಯಗಳ ಲಭ್ಯತೆಯೋ?

ADVERTISEMENT

ಮೇಲೆ ಉಲ್ಲೇಖಿಸಿದ ಸ್ನೇಹಿತನ ಮನೆಯವರ ಹಾಗೆ ಬಹುತೇಕರು ಸಂಪ್ರದಾಯದ ಮೊರೆ ಹೋಗುವುದು ಕಣ್ಣೆದುರಿನ ವಾಸ್ತವವೇ ಆಗಿದೆ. ಸೌಲಭ್ಯಗಳ ಲಭ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೆ ಸಂಪ್ರದಾಯದ ನೆಪ ಹೂಡಿ ಹೆಣ್ಣು ಮಕ್ಕಳ ಪೋಷಕರ ಮೇಲೆ ಆರ್ಥಿಕ ಹಾಗೂ ಆರೈಕೆಯ ಹೊರೆ ಹೊರಿಸುವುದು ಈಗಲೂ ಮುಂದುವರಿದಿದೆ. ಇಂತಹದ್ದೊಂದು ಪರಿಪಾಟ ಜಾರಿಯಲ್ಲಿರುವ ಕಾರಣಕ್ಕೆ ತಾಯಿ ಇಲ್ಲದ ಹೆಣ್ಣು ಮಕ್ಕಳು ಅಗಾಧ ನೋವು, ಅವಮಾನ, ತಳಮಳ ಅನುಭವಿಸಬೇಕಾದ ಸಂದರ್ಭಗಳು ಎದುರಾಗುತ್ತಲೇ ಇರುತ್ತವೆ. ಎಷ್ಟೋ ಮದುವೆ ಮಾತುಕತೆ ಇದೇ ಕಾರಣಕ್ಕೆ ಮುರಿದು ಬೀಳುವುದೂ ಇದೆ.

ಯುವತಿ ಹೆರಿಗೆಗೂ ಮುನ್ನ ಮತ್ತು ನಂತರ ಎಲ್ಲಿರಬೇಕು ಎಂಬ ಪ್ರಶ್ನೆಗೆ, ಎಲ್ಲಿ ಆರೈಕೆ ಮಾಡಲು ಜನ ಮತ್ತು ಅಗತ್ಯ ಸೌಲಭ್ಯಗಳಿವೆಯೋ ಅಲ್ಲಿ ಎಂಬ ಸಹಜ ಉತ್ತರ ಕಂಡುಕೊಳ್ಳುವಂತಹ ಮನಃಸ್ಥಿತಿ ರೂಪುಗೊಳ್ಳಬೇಕಲ್ಲವೇ? ಮೊದಲ ಹೆರಿಗೆಯ ಜವಾಬ್ದಾರಿ ಯುವತಿಯ ಪೋಷಕರದ್ದು ಎಂಬ ಕಾರಣಕ್ಕೆ ವೈದ್ಯಕೀಯ ಸೌಲಭ್ಯಗಳೂ ಲಭ್ಯವಿರದ ಊರಾದರೂ ಸರಿ, ಅಲ್ಲಿಯೇ ಹೆರಿಗೆ ಮಾಡಿಸಬೇಕೆಂಬ ಜಿದ್ದಿಗೆ ಬೀಳುವ ಸಂಪ್ರದಾಯವಾದಿಗಳು ಕಾಣಸಿಗುವುದು ಅಪರೂಪವೇನಲ್ಲ. ಹುಡುಗ ಮತ್ತವನ ತಂದೆ- ತಾಯಿ ನೆಲೆಸಿರುವ ಮನೆಯಲ್ಲಿ ಬಾಣಂತಿ- ಮಗುವಿನ ಆರೈಕೆಗೆ ಬೇಕಾದ ಸಕಲ ಸೌಲಭ್ಯಗಳಿದ್ದೂ ಸುಸಜ್ಜಿತ ಆಸ್ಪತ್ರೆ ಕೂಗಳತೆಯ ದೂರದಲ್ಲೇ ಇದ್ದರೂ ಗರ್ಭಿಣಿಯನ್ನು ಆಕೆಯ ತವರು ಮನೆಗೆ ದೂಡುವುದು ಕ್ರೌರ್ಯವಲ್ಲವೇ? ಸಂಪ್ರದಾಯದ ಹೆಸರಿನಲ್ಲಿ ಇಂತಹ ಕ್ರೌರ್ಯವೇ ಸಹಜ ಪ್ರಕ್ರಿಯೆಯಾಗಬೇಕೆ?

ಒಂದೆಡೆ ಹೆರಿಗೆಯಾದ ನಂತರ ತವರು ಮನೆ ಸೇರುವ ಮಹಿಳೆ, ಮಗುವಿನ ಆರೈಕೆಗೆ ತನ್ನೆಲ್ಲ ಸಮಯ ಮೀಸಲಿರಿಸಿದರೆ, ಮತ್ತೊಂದೆಡೆ, ಮಗುವಿನ ತಂದೆ ಎನಿಸಿಕೊಂಡವನಿಗೆ ಇದು ಮದುವೆ ನಂತರ ಒಂದಷ್ಟು ತಿಂಗಳುಗಳ ಕಾಲ ಆರಾಮಾಗಿರಲು ಸಿಕ್ಕ ಸದವಕಾಶವಾಗಿ ತೋರುವುದು ಸಹಜವೇ ಆಗಿರುವ ಸಮಾಜ ನಮ್ಮದಲ್ಲವೇ?

ಅನಗತ್ಯ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುವ ಜೊತೆಗೆ ಹೆಣ್ಣು ಮಕ್ಕಳೆಡೆಗೆ ತಾತ್ಸಾರ ಮೂಡಲು ಕಾರಣವಾಗುವ ಇಂತಹ ನಡವಳಿಕೆಗಳಿಗೆ ಸಂಪ್ರದಾಯದ ಮುಸುಕು ತೊಡಿಸಿ, ಇನ್ನೂ ಎಷ್ಟು ದಿನ ಸಹಜವೆಂದೇ ಸ್ವೀಕರಿಸಬೇಕು? ಕೆಲ ಸಂದರ್ಭಗಳಲ್ಲಿ ಗರ್ಭಿಣಿ ಮತ್ತು ಮಗುವಿನ ಜೀವವನ್ನೇ ಪಣಕ್ಕೊಡ್ಡುವ ಇಂತಹ ಧೋರಣೆಗಳ ವಿರುದ್ಧ ಜಾಗೃತಿ ಮೂಡಿಸುವುದು ಕೂಡ ಆಳುವವರ ಆದ್ಯತೆ
ಯಾಗಬೇಕಲ್ಲವೇ? ಇಂತಹ ಸಂಪ್ರದಾಯಗಳನ್ನೇ ಸನಾತನ ಮೌಲ್ಯವೆಂದು ಪರಿಭಾವಿಸಿ, ಅವುಗಳ ಮುಂದುವರಿಕೆಗೆ ತಾವು ಬದ್ಧರಾಗಿದ್ದೇವೆಂದು ಬಿಂಬಿಸಿಕೊಳ್ಳುವಲ್ಲಿ ಇನ್ನಿಲ್ಲದ ಉತ್ಸಾಹ ತೋರುತ್ತಿರುವವರ ದೃಷ್ಟಿಯು ಸಂಪ್ರದಾಯಗಳ ತೆಕ್ಕೆಗೆ ಸಿಲುಕಿ ನರಳುವವರತ್ತ ಹರಿಯುವುದೇ?

ಶಾಲಾ ಪಠ್ಯಪುಸ್ತಕಗಳ ಪುನರ್‌ಪರಿಷ್ಕರಣೆ ವೇಳೆ ಸೇರಿಸಲಾದ ಪಠ್ಯವೊಂದು ಹೆಣ್ಣನ್ನು ಬಿಂಬಿಸುವ ರೀತಿ ಗಮನಿಸಿದರೂ ಸಾಕು, ಆಳುವವರ ಆದ್ಯತೆ ಯಾವ ಕಡೆ ವಾಲತೊಡಗಿದೆ ಎಂಬುದಕ್ಕೆ ಪುರಾವೆ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.