ವಿಮಾನ ಪ್ರಯಾಣ ಎಂದರೇನೆ ಮನಸ್ಸಿನಲ್ಲಿ ಎಲ್ಲಿಲ್ಲದ ಪುಳಕ ಆವರಿಸುತ್ತದೆ. ವಿಮಾನವೇರುವ ಬಂಧು
ಮಿತ್ರರನ್ನು ಬೀಳ್ಕೊಡುವುದು, ಇಳಿದು ಬರುವವರನ್ನು ಬರಮಾಡಿಕೊಳ್ಳುವುದು ಕೂಡ ಸಂಭ್ರಮವೆ. ಅಲ್ಲಿ ಮಿಶ್ರ ಭಾವನೆಗಳ ಮದುವೆ ಮನೆಯ ವಾತಾವರಣ. ವಿಮಾನದಲ್ಲಿ ಕಿಟಕಿ ಪಕ್ಕದ ಸೀಟಿನಲ್ಲಿ ಕೂತರಂತೂ ಬೆಟ್ಟ, ಗುಡ್ಡ, ನದಿ, ಹಸಿರು, ಸಮುದ್ರದ ಪಕ್ಷಿನೋಟ ಸವಿಯುವ ಖುಷಿಗೆ ಸಾಟಿಯಿಲ್ಲ. ರಸ್ತೆ, ರೈಲು ಮಾರ್ಗ
ದಲ್ಲಿ ದಿನಗಟ್ಟಲೆಯ ದೂರವನ್ನು ವಿಮಾನವು ಕೆಲವೇ ತಾಸುಗಳಲ್ಲಿ ಕ್ರಮಿಸಬಲ್ಲದು. ದರ ಬಲು ದುಬಾರಿ, ಆದರೆ ಅನುಕೂಲ?
ಚಲನೆಯ ವೇಗ ಹೆಚ್ಚಿದಂತೆ ಕಾಲವು ಮೊಟಕಾಗುತ್ತದೆ ಎನ್ನುವುದು ಆಲ್ಬರ್ಟ್ ಐನ್‌ಸ್ಟೀನ್ ಸಿದ್ಧಾಂತ. ವಿವಿಧ ಕಾರಣಗಳಿಂದ ಒಂದೆಡೆಯಿಂದ ಇನ್ನೊಂದೆಡೆಗೆ ತಲುಪಬೇಕಾದ ಜರೂರಿನಲ್ಲಿ ಸಮಯವು ಹಣಕ್ಕಿಂತ ಅಮೂಲ್ಯವಾಗುತ್ತದೆ. ವಿಮಾನ ಹೊರಡುವ ಮೂರು ತಾಸು ಮೊದಲೇ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಇರಬೇಕು ಎಂಬುದು ಸರಿಯೆ. ಬೆಂಗಳೂರಿನ ಯಾವುದೇ ಬಡಾವಣೆಯಿರಲಿ, ಮನೆಯಿಂದ ಹೊರಟು ವಿಮಾನ ನಿಲ್ದಾಣ ತಲುಪಲು ಕನಿಷ್ಠ ಒಂದೂವರೆ ತಾಸು ಬೇಕು. ಅಲ್ಲಂತೂ ಹೆಚ್ಚಿನವರು ಅಲ್ಪ ಉಪಾಹಾರವಿರಲಿ, ಕಾಫಿಯನ್ನೂ ಕೊಳ್ಳಲಾಗದು. ಆ ಮಟ್ಟಿಗೆ ಕೈಗೆಟುಕದ ಬೆಲೆ. ಮನೆಯಿಂದ ಎಷ್ಟೇ ಗಾತ್ರದ ಬುತ್ತಿ ತೆಗೆದುಕೊಂಡು ಹೋದರೂ ಬೇಗ ಕರಗಿರುತ್ತದೆ. ಮುಖ್ಯ ದ್ವಾರದಲ್ಲಲ್ಲದೆ ಒಳಗೆ ಅಲ್ಲಲ್ಲಿ ಅಗತ್ಯ ದಾಖಲೆಗಳನ್ನು ತೋರಿಸಬೇಕಾದದ್ದನ್ನು ಒಪ್ಪೋಣ. ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಗಾಲಿಕುರ್ಚಿಯ ಏರ್ಪಾಟಿರುತ್ತದೆ. ಭದ್ರತೆಯ ದೃಷ್ಟಿಯಿಂದ ನೀರು ಸೇರಿದಂತೆ ಯಾವ ಆಹಾರ ವಸ್ತುವನ್ನೂ ವಿಮಾನದಲ್ಲಿ ಒಯ್ಯುವಂತಿಲ್ಲ. ಬಾಟಲಿಯಲ್ಲಿ ಅರ್ಧ ಕಪ್ ನೀರು ಉಳಿದಿದ್ದರೂ ಅದನ್ನು ಸೇವಿಸಿ ಬರಿದಾಗಿಸಬೇಕು.
ಅಂತರ್ದೇಶಿ ಫ್ಲೈಟ್‌ಗಳಲ್ಲಿ ನೀರು ಬೇಕೆಂದರೆ ಕೊಡುತ್ತಾರೆ. ಆದರೆ ದೇಶಿ ಫ್ಲೈಟ್‌ಗಳಲ್ಲಿ ತಾತ್ಸಾರವೆ. ಹಣ ತೆತ್ತು ಅದೂ ಚಿಕ್ಕ ಬಾಟಲಿ ನೀರು ಖರೀದಿಸಬೇಕು ಇಲ್ಲವೆ ಯಾವಾಗ ವಿಮಾನ ಭೂಸ್ಪರ್ಶವಾಗುತ್ತದೆ ಎಂದು ಎದುರು ನೋಡಬೇಕು. ಕೋವಿಡ್- 19ಕ್ಕೆ ಮೊದಲು ಪರಿಸ್ಥಿತಿ ಹೀಗಿರಲಿಲ್ಲ. ಬೆಂಗಳೂರಿನಿಂದ ಹೊರಟು ಒಂದು ಅಥವಾ ಒಂದೂವರೆ ತಾಸಿನಲ್ಲಿ ಮುಟ್ಟಬಹುದಾದ ಚೆನ್ನೈ, ಹೈದರಾಬಾದ್, ತಿರುವನಂತಪುರದಂತಹ ವಿಮಾನಗಳಲ್ಲಿ ಕೂಡ ಲಘು ಉಪಾಹಾರ ನೀಡುತ್ತಿದ್ದರು. ಅಂತರದ ಅಂತರ್ದೇಶಿ ವಿಮಾನಗಳಲ್ಲಂತೂ ಪ್ರಯಾಣಿಕರಿಗೆ ಸಾಕೆನಿಸುವಷ್ಟು ಊಟ, ತಿಂಡಿ, ಕಾಫಿ, ಜ್ಯೂಸ್ ಉಪಚಾರ ಇರುತ್ತಿತ್ತು. ಆಗ ವಿಮಾನ ಪ್ರಯಾಣದ ಅನುಭವ ಹೇಳಿಕೊಳ್ಳುವುದೇ ಹೆಮ್ಮೆ ಎನಿಸುತ್ತಿತ್ತು. ಈಗ ಆ ವಿಮಾನಗಳಲ್ಲೂ ಒದಗಿಸುವ ಆಹಾರದ ಪ್ರಮಾಣವೂ ಕಡಿಮೆ, ಅದರ ಗುಣಮಟ್ಟವೂ ಸಾಲದು.
ಇಲ್ಲಿ ಹೇಳಲೇಬೇಕಾದ ಒಂದು ಸೂಕ್ಷ್ಮವಿದೆ. ಪ್ರಯಾಣಿಕರ ಸೀಟುಗಳ ನಡುವಿನ ಕಿರುದಾರಿಯಲ್ಲಿ ಕೈಗಾಡಿಯೊಂದು ಬರುತ್ತದೆ. ಅದು ಆಹಾರ, ಪಾನೀಯ ಮಾರಾಟದ್ದು. ದರ ಕೇಳುವಂತೆಯೇ ಇಲ್ಲ, ಐದಾರು ಪಟ್ಟಿಗೂ ಅಧಿಕ. ಸುಮಾರು 35,000 ಅಡಿ ಎತ್ತರದಲ್ಲಿ ಇನ್ನೇನು ಕೊಟ್ಟಾರು ಅಂತ ಕಾಸು ತುಸು ಹೆಚ್ಚಾದರೆ ಖರೀದಿಸಬಹುದು. ಆದರೆ ಡಾಲರ್‌ಗಳ ಲೆಕ್ಕದೊಂದಿಗೆ ಸ್ಪರ್ಧೆ ಸಾಧ್ಯವೇ? ಪ್ರಯಾಣಿಕರ ಹಸಿವು, ದಾಹವನ್ನು ಅಲ್ಲಿ ನಗದಾಗಿಸಿಕೊಳ್ಳುವ ವ್ಯಾಪಾರಿ ಮನೋಭಾವ ಕೂಡದು. ಪ್ರಯಾಣಿಕರ ಅಸಹಾಯಕತೆಯನ್ನು ಮನಗಾಣಬೇಕು.
ವಿಮಾನದಲ್ಲಿ ಅಡುಗೆ ಮನೆ ಇರದು. ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಕೇಟರಿಂಗ್ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ನೀರಿನ ಬಾಟಲಿಗಳ ಸಮೇತ ತಿಂಡಿ, ತಿನಿಸು, ಊಟ ತಯಾರಿಸಿ ಕೊಡುತ್ತವೆ. ಅವು ವಿಮಾನದಲ್ಲಿ ದಾಸ್ತಾನಾಗುತ್ತವೆ.
ಭಾರತದ ಸಂದರ್ಭದಲ್ಲಿ ಸೊಗಸಾದ ಸುಭಾಷಿತವೊಂದಿದೆ: ‘ಭೂಮಿಯಲ್ಲಿ ಜಲ, ಅನ್ನ, ಒಳ್ಳೆಯ ಮಾತು ಎಂಬ ಮೂರು ರತ್ನಗಳಿವೆ’. ನಮ್ಮ ದೇಶದೊಳಗಿನ ವಿಮಾನ ಪ್ರಯಾಣದಲ್ಲಾದರೂ ಇದು ಮಾರ್ದನಿಸಬೇಕಲ್ಲವೇ? ವೆಚ್ಚ ಕಡಿತ, ಸ್ವಚ್ಛತೆಯ ದೃಷ್ಟಿಯಂತಹ ಕಾರಣಗಳಿಗೆ ಊಟ, ತಿಂಡಿ ನೀಡಲಾಗುತ್ತಿಲ್ಲ ಎಂದು ವಿಮಾನಯಾನ ಸಂಸ್ಥೆಗಳು ವಾದಿಸಬಹುದು. ಆದರೆ ಹೊಟ್ಟೆ ತುಂಬಿರುವುದು ಸಂತೃಪ್ತಿಯ ಮೂಲ ರೂಪ. ಹಸಿದ ಹೊಟ್ಟೆಗೆ ಸಮರ್ಥನೆಗಳು ನಾಟವು, ಸರಿ-ತಪ್ಪು ಕಾಣದು.
ಮನುಷ್ಯರನ್ನು ಒಗ್ಗೂಡಿಸುವುದು ನೀರು, ಆಹಾರವೇ ತಾನೆ? ಅಸಮರ್ಪಕ ವ್ಯವಸ್ಥೆಯಿಂದ ವೃದ್ಧರು ಹಾಗೂ ಮಕ್ಕಳು ವಿಪರೀತ ಬಾಧೆಗೆ ಒಳಗಾಗುತ್ತಾರೆ. ರಕ್ತದೊತ್ತಡ ಮತ್ತು ಮಧುಮೇಹ ಬಾಧಿತರ ಪಾಡು ಹೇಳತೀರದು. ಪ್ರಯಾಣ ಒಂದು ತಾಸಿನೊಳಗೆ ಇದ್ದರೂ ಉಪಾಹಾರ ಅಗತ್ಯವಾಗುತ್ತದೆ. ಮೂರರಿಂದ ಐದು ತಾಸುಗಳಾದರೆ ಒಂದು ಉಪಾಹಾರ ಹಾಗೂ ಊಟ ಒದಗಿಸಿದರೆ ಪ್ರಯಾಣ ಕಳೆಗಟ್ಟುತ್ತದೆ. ನೀರನ್ನು ಉಚಿತವಾಗಿ ಕೊಡುವ ವ್ಯವಸ್ಥೆ ಇರಲೇಬೇಕು. ವಿಮಾನದಲ್ಲಿ ನೀರನ್ನು ವ್ಯರ್ಥ ಮಾಡುವ ಪ್ರಶ್ನೆಯೇ ಇರದು. ವಿಮಾನಯಾನ ಸಂಸ್ಥೆಯವರು ಒಂದೆರಡು ಸೀಟುಗಳನ್ನು ಕಡಿಮೆ ಮಾಡಿದರೂ ಆ ತೂಕದ ಬದಲಿಗೆ ಅಷ್ಟು ಆಹಾರ, ನೀರು ಶೇಖರಿಸಿ ಪ್ರಯಾಣಿಕರಿಗೆ ಧಾರಾಳವಾಗಿಯೇ ಉಪಚರಿಸಬಹುದಲ್ಲ. ಪ್ರಯಾಣಿಕರಿಗೆ ಹೀಗೆ ಮಾನವೀಯತೆಯಿಂದ ಆದ್ಯತೆ ನೀಡಿದರೆ ಸಿಬ್ಬಂದಿಯ ನಗೆಮುಖದ ಸ್ವಾಗತ ಮತ್ತು ‘ನಿಮ್ಮ ಹಾರಾಟ
ಉಲ್ಲಾಸಕರ ಆಗಿತ್ತೆಂದು ಭಾವಿಸುತ್ತೇವೆ’ ಎಂಬ ವಿದಾಯವು ಮೌಲಿಕ ಎನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.