ADVERTISEMENT

ವ್ಯಕ್ತಿ ವಿಶೇಷ | ಗುಮ್ಮಡಿ ನರಸಯ್ಯ: ಕಗ್ಗತ್ತಲಲ್ಲೊಂದು ಕೋಲ್ಮಿಂಚು

ಬಿ.ವಿ. ಶ್ರೀನಾಥ್
Published 20 ಡಿಸೆಂಬರ್ 2025, 0:30 IST
Last Updated 20 ಡಿಸೆಂಬರ್ 2025, 0:30 IST
ಶಿವರಾಜ್‌ಕುಮಾರ್ ಅವರೊಂದಿಗೆ ಗುಮ್ಮಡಿ ನರಸಯ್ಯ
ಶಿವರಾಜ್‌ಕುಮಾರ್ ಅವರೊಂದಿಗೆ ಗುಮ್ಮಡಿ ನರಸಯ್ಯ   

ತೆಲುಗಿನ ಪ್ರಮುಖ ನಟ ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ 2’ ಚಿತ್ರ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಅರ್ಥಹೀನ ಕಥೆ, ಅನರ್ಥಕಾರಿ ಶೈಲಿ, ಅತಿಮಾನುಷ ಸಾಹಸ ದೃಶ್ಯಗಳಿರುವ ಆ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೊಳಗಾಗುತ್ತಿದೆ. ಇದೇ ವೇಳೆ, ತೆಲುಗಿನಲ್ಲಿ ಹೊಸ ಚಿತ್ರವೊಂದು ಆರಂಭವಾಗಿದೆ. ಆ ಚಿತ್ರದ ವಸ್ತು ಮತ್ತು ಅದರ ಮಹತ್ವದ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಆ ಚಿತ್ರ ಗುಮ್ಮಡಿ ನರಸಯ್ಯ. ಗುಮ್ಮಡಿ ನರಸಯ್ಯ ಆಗಿ ಕನ್ನಡದ ಶಿವರಾಜ್‌ಕುಮಾರ್ ಅವರು ನಟಿಸುತ್ತಿರುವುದರಿಂದ ಚಿತ್ರದ ಬಗ್ಗೆ ಕನ್ನಡಿಗರಲ್ಲೂ ಕುತೂಹಲ ಮೂಡಿದೆ. 

ಗುಮ್ಮಡಿ ನರಸಯ್ಯ ಅವರು ಭದ್ರಾದಿ ಕೊತ್ತಗೂಡೆಂ ಜಿಲ್ಲೆಯ ಇಲ್ಲಂದು ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದವರು. ಜನರ ನಡುವಿನಿಂದಲೇ ನಾಯಕನಾಗಿ ರೂಪುಗೊಂಡ ನರಸಯ್ಯ, ಶಾಸಕರಾಗಿ, ಬುಡಕಟ್ಟು ಮುಖಂಡರಾಗಿ ಮಾಡಿದ ಕೆಲಸ, ಅವರು ಬದುಕಿದ, ಬದುಕುತ್ತಿರುವ ರೀತಿಯೇ ಸಿನಿಮಾ ನಿರ್ಮಾಣವಾಗಲು ಕಾರಣವಾಗಿದೆ.          

ಸ್ವಾತಂತ್ರ್ಯಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಅನೇಕ ಭಾಗಗಳಲ್ಲಿ ದೊಡ್ಡ ಭೂಮಾಲೀಕರು ಗೇಣಿದಾರರನ್ನು, ರೈತರನ್ನು, ಕೂಲಿ ಕಾರ್ಮಿಕರನ್ನು ಶೋಷಣೆ ಮಾಡುವುದು ಸಾಮಾನ್ಯವಾಗಿತ್ತು. ಸಹಜವಾಗಿಯೇ ಅವರ ವಿರುದ್ಧ ಹಲವು ರೀತಿಯ ಹೋರಾಟಗಳು ಹುಟ್ಟುಪಡೆದಿದ್ದವು. ಅವುಗಳಲ್ಲಿ ಸಿಪಿಐ (ಎಂಎಲ್‌) ಹೋರಾಟ ಪ್ರಮುಖವಾದುದು. ಸಶಸ್ತ್ರ ಹೋರಾಟಗಾರರನ್ನು ಮಣಿಸಲು ಪೊಲೀಸರು ಎನ್‌ಕೌಂಟರ್‌ಗಳನ್ನು ಮಾಡುತ್ತಿದ್ದರು. 1978ರಲ್ಲಿ ಕಾಡಿಗೆ ಕಟ್ಟಿಗೆ ತರಲು ಹೋಗಿದ್ದ ಆಗ ಯುವಕನಾಗಿದ್ದ ನರಸಯ್ಯ ಹಾಗೆ ನಡೆದ ‘ಎನ್‌ಕೌಂಟರ್’ ಒಂದನ್ನು ಆಕಸ್ಮಿಕವಾಗಿ ನೋಡಿದರು. ತಮ್ಮ ಜೀವನವನ್ನು ಹೋರಾಟಕ್ಕಾಗಿ ಮುಡಿಪಿಡಲು ಅವರು ಅಂದೇ ನಿರ್ಧರಿಸಿದರು. 

ADVERTISEMENT

ಖಮ್ಮಂ ಜಿಲ್ಲೆಯ ಸಿಂಗರೇಣಿ ಮಂಡಲ್‌ನ ಟೇಕುಲಗೂಡೆಂ ಗ್ರಾಮದ ನರಸಯ್ಯ, ಕೋಯಾ (ಎಸ್‌ಟಿ) ಬುಡಕಟ್ಟಿಗೆ ಸೇರಿದವರು. ಅಲ್ಪಸ್ವಲ್ಪ ಭೂಮಿ ಇದ್ದ ಬಡ ಕುಟುಂಬ ಅವರದ್ದು. ಸುತ್ತಲಿನ ಬದುಕೇ ಅವರನ್ನು ಹೋರಾಟಗಾರನನ್ನಾಗಿ ರೂಪಿಸಿತು. ಆದಿವಾಸಿ ಹಕ್ಕುಗಳಿಗಾಗಿ, ರೈತರ ಸಮಸ್ಯೆಗಳಿಗಾಗಿ ಹೋರಾಡತೊಡಗಿದ ನರಸಯ್ಯ ಚುನಾವಣೆಗೂ ಸ್ಪರ್ಧಿಸಿ ಗೆದ್ದರು; ಟೇಕುಲಗೂಡೆಂ ಮಂಡಲ್‌ನ ಸರಪಂಚ್‌ (ಅಧ್ಯಕ್ಷ) ಕೂಡ ಆದರು (1981).   

ನರಸಯ್ಯ ಅವರದ್ದು ಸರಳ ಬದುಕು. ಜನರಿಗೆ ಮಿಡಿಯುವ ಮನಸ್ಸು. ಇದರಿಂದ ರಾಜಕಾರಣದಲ್ಲಿ ಅವರು ಬಹುಬೇಗ ಜನಪ್ರಿಯತೆ ಗಳಿಸಿದರು. 1983ರಲ್ಲಿ ಅವಿಭಜಿತ ಆಂಧ್ರ ಪ್ರದೇಶದ ಇಲ್ಲಂದು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಪ್ರಥಮ ಪ್ರಯತ್ನದಲ್ಲಿಯೇ ಜನ ಅವರನ್ನು ಗೆಲ್ಲಿಸಿದರು. 1985, 1989ರ ಚುನಾವಣೆಗಳಲ್ಲಿಯೂ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಿದರು. ನಂತರ 1999, 2004ರ ಚುನಾವಣೆಗಳಲ್ಲಿಯೂ ಜಯ ಗಳಿಸಿದರು. ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಎರಡು ಚುನಾವಣೆಗಳಲ್ಲಿ ಸೋಲನುಭವಿಸಿದರು.

ಪುಟ್ಟ, ಹಳೆಯ ಮನೆಯಲ್ಲಿ ವಾಸ. ಸಾಮಾನ್ಯರಲ್ಲಿ ಸಾಮಾನ್ಯನಂತಹ ಉಡುಪು. ಸಾಮಾನ್ಯರು ಆಡುವಂಥದ್ದೇ ಭಾಷೆ. ಸೈಕಲ್, ಆಟೊ, ಬಸ್‌ಗಳಲ್ಲಿಯೇ ಹೆಚ್ಚಾಗಿ ಓಡಾಟ. 20ಕ್ಕೂ ಹೆಚ್ಚು ವರ್ಷ ಶಾಸಕರಾಗಿದ್ದರೂ ಅವರು ಬದಲಾಗಲಿಲ್ಲ. ಕ್ಷೇತ್ರದ ಜನ ನರಸಯ್ಯ ಅವರನ್ನು ‘ಪ್ರಜೆಗಳ ಪ್ರತಿನಿಧಿ’ ಎಂದೇ ಕರೆಯುತ್ತಿದ್ದರು. ಶಾಸಕರಾಗಿ ಇರಲಿ, ಇಲ್ಲದಿರಲಿ ಅವರ ದಿನಚರಿ, ಸ್ವಭಾವ, ಕೆಲಸ ಯಾವುದೂ ಬದಲಾಗಲಿಲ್ಲ. ಸುತ್ತಲಿನ ಜನರ ಸಮಸ್ಯೆಯನ್ನು ಹೊತ್ತು ಸರ್ಕಾರಿ ಕಚೇರಿಗಳ ಬಾಗಿಲಲ್ಲಿ ಹೋಗಿ ನಿಲ್ಲುತ್ತಿದ್ದರು. 

ಆದಿವಾಸಿ ಹಕ್ಕುಗಳಿಗಾಗಿ, ರೈತರ ಪರವಾಗಿ, ಪೊಲೀಸ್ ದೌರ್ಜನ್ಯದ ವಿರುದ್ಧ ದಶಕಗಳಿಂದಲೂ ಹೋರಾಡುತ್ತಲೇ ಇರುವ ಗುಮ್ಮಡಿ ನರಸಯ್ಯ ಅವರಿಗೆ ಈಗ ಸುಮಾರು 68ರ ಪ್ರಾಯ. ಅವರ ಮೂವರು ಮಕ್ಕಳಲ್ಲಿ ಮಗಳು ಗುಮ್ಮಡಿ ಅನುರಾಧ ತೆಲಂಗಾಣದ ಮೊದಲ ಆದಿವಾಸಿ ಮಹಿಳಾ ಸಹಾಯಕ ಪ್ರಾಧ್ಯಾಪಕಿ (ಕಾನೂನು ಅಧ್ಯಯನ). ಅವರು ಕೂಡ 2023ರಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡರು.

ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜದಂತೆ ಗುಮ್ಮಡಿ ನರಸಯ್ಯ ಅವರಂಥ ಬದುಕುಗಳನ್ನು ಆಧರಿಸಿ ಪರದೆ ಮೇಲೆ ಮೂಡುವ ಬಿಂಬಗಳು ಭವಿಷ್ಯದ ತಲೆಮಾರುಗಳಲ್ಲಿ ಬದಲಾವಣೆಗೆ ಪ್ರೇರಣೆ ಆಗಬಲ್ಲವು.

ರಾಜ್ ಪರಂಪರೆಯ ಪ್ರತಿನಿಧಿ

ರೀಮೇಕ್ ಚಿತ್ರಗಳಲ್ಲಿ, ಪರಭಾಷಾ ಚಿತ್ರಗಳಲ್ಲಿ ನಟಿಸುವುದನ್ನು ಇಷ್ಟಪಡದ ನಟ ಶಿವರಾಜ್‌ಕುಮಾರ್ ಈ ಚಿತ್ರ ಒಪ್ಪಿಕೊಳ್ಳಲು ಕಾರಣವಿದೆ. ಜನರಿಗಾಗಿ ನರಸಯ್ಯ ಅವರು ಮಾಡಿರುವ ತ್ಯಾಗ, ಸಲ್ಲಿಸುತ್ತಿರುವ ಸೇವೆ, ಸರಳ ಬದುಕು ಕಂಡಾಗ ಅವರಿಗೆ ಅವರ ತಂದೆ ರಾಜ್‌ಕುಮಾರ್ ಅವರೇ ನೆನಪಾದರಂತೆ. ‘ನರಸಯ್ಯ ಅಪ್ಪನ ಪರಂಪರೆಯ ಪ್ರತಿನಿಧಿ. ಹಾಗಾಗಿಯೇ ನಾನು ಈ ಚಿತ್ರ ಮಾಡಲು ಒಪ್ಪಿಕೊಂಡೆ’ ಎಂದಿದ್ದಾರೆ.

ರಾಜ್‌ಕುಮಾರ್ ತಮ್ಮ ಸರಳತೆ, ಮೌಲ್ಯಗಳನ್ನು ಎಂದೂ ಬಿಟ್ಟುಕೊಡದವರು. ಅಪಾರ ಜನಪ್ರಿಯತೆ, ಹಣ ಬಂದರೂ ಅವರು ತಮ್ಮ ವಿನಯವನ್ನು ಬಿಡದವರು. ಆ ಕಾರಣಕ್ಕಾಗಿ ಅವರು ಯಾವತ್ತೂ ಆದರ್ಶಪ್ರಾಯರಾಗಿದ್ದಾರೆ. ರಾಜಕಾರಣದಲ್ಲಿ ಅಂಥವೇ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ನರಸಯ್ಯ ಅವರ ಬದುಕು ಶಿವರಾಜ್‌ಕುಮಾರ್ ಅವರನ್ನು ಸೆಳೆದಿರುವುದು ಸಹಜವೇ ಆಗಿದೆ. ಪ್ರೇಕ್ಷಕರನ್ನು ಅಭಿಮಾನಿ ದೇವರು ಎನ್ನುತ್ತಿದ್ದ ರಾಜ್‌ಕುಮಾರ್, ಪ್ರಜೆಗಳನ್ನು ದೊರೆಗಳಂತೆ ಕಾಣುವ ನರಸಯ್ಯ– ಇವರೆಲ್ಲ ರಾಜಕಾರಣ, ಸಿನಿಮಾ, ಸಾರ್ವಜನಿಕ ಜೀವನಕ್ಕೆ ಅಗತ್ಯವಾದ– ಆದರೆ ಪ್ರಸ್ತುತ ಅಪರೂಪವಾಗಿರುವ– ಸಂದೇಶವನ್ನು ಬಿತ್ತರಿಸುತ್ತಿದ್ದಾರೆ.

ಅಪರೂಪದ ಮಾದರಿ 

ರಾಜಕಾರಣಿಗಳ ಬಯೋಪಿಕ್‌ಗಳು ಯಶಸ್ವಿಯಾಗುವುದು ಕಡಿಮೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಮನಮೋಹನ್‌ಸಿಂಗ್, ತಮಿಳಿನ ಕರುಣಾನಿಧಿ, ಎಂಜಿಆರ್‌, ತೆಲುಗಿನಲ್ಲಿ ಎನ್‌ಟಿಆರ್, ವೈಎಸ್‌ಆರ್, ನಟಿ ಸಾವಿತ್ರಿ ಮುಂತಾದವರ ಜೀವನ ಆಧರಿಸಿ ಚಿತ್ರಗಳು ಬಂದಿವೆ. ಈ ಪೈಕಿ ಸಾವಿತ್ರಿ ಅವರನ್ನು ಕುರಿತ ‘ಮಹಾನಟಿ’ ಯಶಸ್ಸು ಗಳಿಸುವ ಜತೆಗೆ ಹಲವು ಪ್ರಶಸ್ತಿಗಳನ್ನೂ ಪಡೆಯಿತು. 

ರಾಜಕಾರಣಿಗಳ ಬಯೋಪಿಕ್‌ಗಳ ನಡುವೆ ಗುಮ್ಮಡಿ ನರಸಯ್ಯ ಚಿತ್ರಕ್ಕೆ ವಿಶೇಷ ಸ್ಥಾನವಿದೆ. ಅವರು ಶಾಸಕರಾಗಿದ್ದನ್ನು ಹೊರತುಪಡಿಸಿದರೆ ಇತರೆ ಅಧಿಕಾರ ಪಡೆದವರಲ್ಲ.ಆದರೆ, ರಾಜಕಾರಣಕ್ಕೆ ಅತ್ಯಗತ್ಯವಾದ ಜನಪರ ಮಾದರಿಯನ್ನು ಕಟ್ಟಿಕೊಟ್ಟವರು. ಹೀಗಾಗಿ ವ್ಯಾಪಾರಿ ದೃಷ್ಟಿಯಿಂದಲ್ಲವಾದರೂ ವಸ್ತುವಿಷಯದ ದೃಷ್ಟಿಯಿಂದ ಗಮನಾರ್ಹ ಸಿನಿಮಾ ಆಗಬಹುದು ಎನ್ನುವ ನಿರೀಕ್ಷೆ ಇದೆ.

ಶಿವರಾಜ್‌ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.