ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು 24 ಜನವರಿ 2026

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ರಾಜ್ಯ‍ಪಾಲರ ನಡೆ ಸಂವಿಧಾನ ವಿರೋಧಿ

ಕರ್ನಾಟಕ ಮತ್ತು ತಮಿಳುನಾಡಿನ ರಾಜ್ಯಪಾಲರು ಶಾಸನಸಭೆಯಿಂದ ಹೊರ ಹೋದದ್ದು ಸಾಂವಿಧಾನಿಕ ನಿಯಮ ಮತ್ತು ಒಕ್ಕೂಟದ ಆಶಯವನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ. ರಾಜ್ಯಪಾಲರ ಈ ಕ್ರಮ ಸಂವಿಧಾನದ ಮೂಲತತ್ತ್ವ ಗಳ ಉಲ್ಲಂಘನೆಯಾಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ಮಾಡುವ ಔಪಚಾರಿಕ ಭಾಷಣ ಕುರಿತಂತೆ ರಾಜ್ಯಪಾಲರು ಚುನಾಯಿತ ಮಂತ್ರಿಮಂಡಲದ ಸಲಹೆಯಂತೆ ನಡೆಯುವುದು ಸಮಂಜಸ. ರಾಜ್ಯಪಾಲರಿಗೆ ಸಿದ್ಧಪಡಿಸಿದ ಭಾಷಣವನ್ನು ಏಕಪಕ್ಷೀಯವಾಗಿ ಸಂಪಾದಿಸುವ ಅಥವಾ ಓದಲು ನಿರಾಕರಿಸುವ ಅಧಿಕಾರ ಇಲ್ಲ. ಇದು ಜನಾಶಯದ ಇಚ್ಛೆಯನ್ನು ದುರ್ಬಲಗೊಳಿಸುತ್ತದೆ. ವೈಯಕ್ತಿಕ, ಪಕ್ಷಪಾತದ ದೃಷ್ಟಿಕೋನವನ್ನು ಹೇರುತ್ತದೆ ಮತ್ತು ರಾಜ್ಯಗಳ ಸ್ವಾಯತ್ತತೆಯನ್ನು ಕ್ಷೀಣಗೊಳಿಸು ತ್ತದೆ. ಕೇಂದ್ರ ಸರ್ಕಾರದ ಪ್ರತಿನಿಧಿಗಳಂತೆ ಕಾಣಿಸಿಕೊಳ್ಳುವ ರಾಜ್ಯಪಾಲರ ನಡೆಯು ಚುನಾಯಿತ ಸರ್ಕಾರವನ್ನು ಅವಮಾನಿಸಿದಂತೆಯೇ ಸರಿ.

ADVERTISEMENT

-ಕಲ್ಯಾಣ ರಾಮನ್ ಚಂದ್ರಶೇಖರನ್, ಬೆಂಗಳೂರು

**

ಅಂಗನವಾಡಿ ನೌಕರರ ಬಾಡಿದ ಬದುಕು

ಅಂಗನವಾಡಿ ಕಾರ್ಯಕರ್ತೆಯರು ಕೇವಲ ನೌಕರರಲ್ಲ. ಮಳೆ–ಬಿಸಿಲೆನ್ನದೆ ಹಸಿವು–ನೀರಡಿಕೆ ನೋಡದೆ ಗ್ರಾಮೀಣ ಮಕ್ಕಳ ಅಪೌಷ್ಟಿಕತೆ ನಿರ್ಮೂಲನೆ ಮತ್ತು ಶಿಕ್ಷಣಕ್ಕಾಗಿ ತಮ್ಮ ಬದುಕು ಸವೆಸುತ್ತಿದ್ದಾರೆ. ಈ ತಾಯಂದಿರ ಶ್ರಮವನ್ನು ಅಳೆಯ ಲಾಗದು. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಸಿಗುವ ಅತ್ಯಲ್ಪ ಗೌರವಧನವನ್ನು ನಂಬಿಕೊಂಡು ಜೀವನ ನಿರ್ವಹಿಸುವುದು ಅವರಿಗೆ ಕಷ್ಟಕರವಾಗಿದೆ. ಈ ಬಾರಿಯ ಕೇಂದ್ರ ಮತ್ತು ರಾಜ್ಯ ಬಜೆಟ್‌ನಲ್ಲಿ ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕಣ್ಣೀರು ಒರೆಸಿ, ಅವರ ಕುಟುಂಬಗಳಲ್ಲಿ ನೆಮ್ಮದಿಯ ದೀಪ ಹಚ್ಚುವ ಕೆಲಸಕ್ಕೆ ಸರ್ಕಾರಗಳು ಮುಂದಾಗಲಿ.

-ರಾಜೇಶ್ವರಿ ಅನಂತರೆಡ್ಡಿ, ಯಾದಗಿರಿ

**

ಸಂಪುಟದ ನಿರ್ಧಾರ: ನೇಮಕಾತಿಗೆ ಭಗ್ನ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ. ಈ ವರ್ಷದಲ್ಲಾದರೂ ಇವುಗಳ ಭರ್ತಿಗೆ ಅಧಿಸೂಚನೆ ಹೊರಡಿಸ ಲಾಗುತ್ತದೆ ಎಂದು ಸ್ಪರ್ಧಾರ್ಥಿಗಳು ಚಾತಕಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದರೆ, ಒಂದು ಬಾರಿಗೆ ಅನ್ವಯಿಸುವಂತೆ ಐದು ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ನಿರ್ಧರಿಸಿದೆ. ಇದರಿಂದ ನೇಮಕಾತಿ ಅಧಿಸೂಚನೆಗಳು ಮತ್ತಷ್ಟು
ವಿಳಂಬವಾಗುವುದು ಸ್ಪಷ್ಟ. ಬೆಂಗಳೂರು, ಧಾರವಾಡ, ವಿಜಯಪುರ ಸೇರಿದಂತೆ ವಿವಿಧ ನಗರಗಳಲ್ಲಿ ಕೋಚಿಂಗ್ ಪಡೆಯುತ್ತಿರುವ ಸ್ಪರ್ಧಾರ್ಥಿಗಳ ಕತೆ ಹೇಳ ತೀರದು. ಸರ್ಕಾರ ಇನ್ನಾದರೂ ಮೀಸಲಾತಿ ಗೊಂದಲವನ್ನು ಬಗೆಹರಿಸಿಕೊಂಡು ಹುದ್ದೆಗಳ ಭರ್ತಿಗೆ ಕ್ರಮವಹಿಸಲಿ.

-ರಾಮಚಂದ್ರ ಮಂಚಲದೊರೆ, ಗುಬ್ಬಿ

**

ನವರಸಪುರ ಉತ್ಸವ: ಮೀನಮೇಷ ಏಕೆ?

ವಿಜಯಪುರ ಜಿಲ್ಲೆಯ ಕಲೆ, ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಪರಂಪರೆ ಬಿಂಬಿಸುವ ‘ನವರಸಪುರ ರಾಷ್ಟ್ರೀಯ ಉತ್ಸವ’ವು 1990ರಲ್ಲಿ ಮೊದಲ ಬಾರಿಗೆ ಆರಂಭ ಗೊಂಡಿತು. 2015ರ ಫೆಬ್ರುವರಿ ಅಂತ್ಯದಲ್ಲಿ 13ನೇ ಉತ್ಸವ ಕೊನೆಯ ಬಾರಿಗೆ ನಡೆಯಿತು. ಬರ ಮತ್ತು ಅತಿವೃಷ್ಟಿ ಕಾರಣ ನೀಡಿ ಈ ಉತ್ಸವವನ್ನು ರದ್ದುಪಡಿಸುತ್ತಾ ಬರಲಾಗುತ್ತಿದೆ. ಆದರೆ, ಅಕ್ಕಪಕ್ಕದ ಜಿಲ್ಲೆಗಳಲ್ಲಿ ನಿಯಮಿತವಾಗಿ ವಿವಿಧ ಉತ್ಸವ
ಗಳನ್ನು ಆಯೋಜಿಸಲಾಗುತ್ತಿದೆ. ಉಳಿದೆಲ್ಲ ಉತ್ಸವಗಳಿಗೆ ಅಡ್ಡಿಯಾಗದ ಸಮಸ್ಯೆ ಗಳು ನವರಸಪುರ ಉತ್ಸವವನ್ನು ಕಾಡುವುದು ಸೋಜಿಗ. 

-ಸತೀಶ ಎಸ್. ಇಂಗಳೇಶ್ವರ, ವಿಜಯಪುರ 

**

‘ವಿಶ್ವಗುರು’ ವಿರುದ್ಧ ಸೆಟೆದು ನಿಂತ ಟ್ರಂಪ್

‘ವಿಶ್ವಗುರುವಿನ ಬಿಕ್ಕಟ್ಟುಗಳು’ ಲೇಖನವು (ಲೇ: ಪುರುಷೋತ್ತಮ ಬಿಳಿಮಲೆ, ಪ್ರ.ವಾ., ಜ. 23) ನೈಜ ವಿಷಯಗಳ ಮೇಲೆ ಕನ್ನಡಿ ಹಿಡಿದಿದೆ. 2014ರ ಲೋಕಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ನರೇಂದ್ರ ಮೋದಿ ಅವರು, ‘ವಿಶ್ವಗುರು’ವಿನ ಬಗ್ಗೆ ಉಲ್ಲೇಖಿಸಿದ್ದರು. ಕೆಲವರಂತೂ ಭಾರತ ವಿಶ್ವಗುರುವಾಗಿದೆ ಎಂಬ ಭ್ರಾಂತಿಯಲ್ಲಿ ದ್ದಾರೆ. ವಿಶ್ವಗುರು ಎಂದಾಕ್ಷಣ ನಮ್ಮ ಮಾತನ್ನು ಒಪ್ಪುವ ಒಂದಷ್ಟು ಶಿಷ್ಯ ದೇಶಗಳು ಬೇಕಲ್ಲವೆ? ಮಾತಿನಲ್ಲೆ ಮಂಟಪ ಕಟ್ಟುವ ಮೋದಿ, ಮತ್ತವರ ಶಿಷ್ಯರು ಈ ಸತ್ಯ ಅರಿಯಬೇಕಿದೆ. ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ‌‌ ‘ತಮ್ಮ ಗುರು’ ಎಂದಿದ್ದರು. ಇಂದು ಡೊನಾಲ್ಡ್‌ ಟ್ರಂಪ್‌ ಭಾರತದ ವಿರುದ್ಧವೇ ಸೆಟೆದು ನಿಂತಿದ್ದಾರೆ. ಅವರಿಗೆ ಸಮರ್ಥವಾಗಿ ಉತ್ತರಿಸುವ ಸ್ಥಿತಿಯಲ್ಲಿ ಭಾರತ ಇಲ್ಲ. ಹಾಗಿದ್ದರೆ ‘ವಿಶ್ವಗುರು’ವಾಗಲು ಹೇಗೆ ಸಾಧ್ಯ?

-ಪೃಥ್ವಿ ಹೋಳ್ಕರ್, ಹುಬ್ಬಳ್ಳಿ

**

ಸಹ್ಯಾದ್ರಿಯ ಧರೆ ಬಿರಿದು ಕುಸಿದೊಡೆ...

‘ನೀನೇರುವ ಮಲೆ ಸಹ್ಯಾದ್ರಿ, ನೀ ಮುಟ್ಟುವ ಮರ ಶ್ರೀಗಂಧದ ಮರ, ನೀ ಕುಡಿಯುವ ನೀರ್ ಕಾವೇರಿ...’ ಎಂದು ಕರ್ನಾಟಕದ ಗರಿಮೆಯನ್ನು ರಾಷ್ಟ್ರಕವಿ ಕುವೆಂಪು ಅವರು ಬಣ್ಣಿಸಿದ್ದಾರೆ. ಅವರು ಗತಿಸಿದ ಕೆಲವು ದಶಕಗಳಲ್ಲಿಯೇ ಅಭಿವೃದ್ಧಿಯ ಹೆಸರಿನಲ್ಲಿ ನಾವು ಸಹ್ಯಾದ್ರಿಯ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯವನ್ನು ಹಾಳುಗೆಡವುತ್ತಿದ್ದೇವೆ. ಇದರ ಪರಿಣಾಮ ಪರಿಸರದ ಅಸಮತೋಲನ ಉಂಟಾಗಿದೆ.

ಮಾರುತಗಳು ದಿಕ್ಕುಕೆಟ್ಟಂತಾಗಿ ಅತಿವೃಷ್ಟಿ, ಅನಾವೃಷ್ಟಿ ಉಂಟಾಗುತ್ತಿದೆ. ಈ ಪ್ರಾಕೃತಿಕ ಅಸಮತೋಲನ ದಿಂದ ರಾಜ್ಯದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಜೊತೆಗೆ ಮಾನವ ಮತ್ತು ವನ್ಯಜೀವಿ ಸಂಘರ್ಷ ತಾರಕಕ್ಕೇರಿದೆ. ಆದರೆ, ಸಮಾಜದ ನೀತಿ ನಿರೂಪಕರು, ಆಡಳಿತಗಾರರ ಗಮನ ಈ ಬಿಕ್ಕಟ್ಟಿನತ್ತ ಹರಿಯುತ್ತಿಲ್ಲ. ಈಗಲಾದರೂ ಅವರು ಎಚ್ಚತ್ತು ಪರಿಸರ ಸಂರಕ್ಷಣೆ ಹಾಗೂ ರೈತರ ಹಿತಾಸಕ್ತಿ ಕಾಪಾಡಬೇಕಿದೆ.

- ಎ.ಸಿ. ಲಕ್ಷ್ಮಣ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.