ವಾಚಕರ ವಾಣಿ
ಸಂಗಾತಿ ಆಯ್ಕೆ: ಮಸೂದೆ ದುರ್ಬಳಕೆ ಬೇಡ
ಮರ್ಯಾದೆಗೇಡು ಹತ್ಯೆ ತಡೆಯಲು ರಾಜ್ಯ ಸರ್ಕಾರ ಮಸೂದೆ ರೂಪಿಸಿರುವುದು ಸ್ವಾಗತಾರ್ಹ. ಆದರೆ, ಇದರ ದುರುಪಯೋಗ ತಡೆಯುವ ಕಡೆಗೂ ಗಮನ ಹರಿಸಬೇಕಿದೆ. 18 ವರ್ಷಕ್ಕೆ ಪ್ರಬುದ್ಧತೆ ಗಳಿಸಬಹುದಾಗಿದ್ದರೂ, ಆ ವಯಸ್ಸಿನ ಪ್ರೀತಿಯ ಉದ್ವೇಗದಲ್ಲಿ ಮಕ್ಕಳು ದುಡುಕಿನ ನಿರ್ಧಾರ ತೆಗೆದುಕೊಳ್ಳಬಹುದು. ಹೆಣ್ಣಿನ ಅಥವಾ ಗಂಡಿನ ಪೋಷಕರ ಆಸ್ತಿಯ ಮೇಲೆ ಕಣ್ಣಿಟ್ಟು ದುರುದ್ದೇಶದಿಂದ ಈ ವಯಸ್ಸಿನ ತುಮುಲಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇದೆ. ಮಸೂದೆಯಲ್ಲಿ ಪ್ರಸ್ತಾಪಿಸಿರುವ ಜಿಲ್ಲಾ ವಿಶೇಷ ಘಟಕದಲ್ಲಿ ಸೂಕ್ತ ಸಂಗಾತಿಯ ಆಯ್ಕೆ ಮಾಡಿಕೊಳ್ಳುವಲ್ಲಿ ವಿಫಲರಾಗುವ ಹದಿಹರೆಯದವರಿಗೆ ತಿಳಿವಳಿಕೆಯ ಜೊತೆಗೆ ಪೋಷಕರು ಅಜ್ಞಾನದಿಂದಾಗಿ ಅಥವಾ ನಿಂದಕರಿಂದಾಗಿ ಕುಗ್ಗಿಹೋಗಿದ್ದರೆ ಅವರಲ್ಲಿ ಧೈರ್ಯ, ಜಾಗೃತಿ ಉಂಟು ಮಾಡುವ ಕೆಲಸವನ್ನೂ ಮಾಡಬೇಕಿದೆ.
-ಕೆ.ಎಂ. ನಾಗರಾಜು, ಮೈಸೂರು
**
ಬಿಗ್‌ಬಾಸ್: ಮಕ್ಕಳಿಗೆ ಜಗಳವೇ ರಂಜನೆ!
‘ಬಿಗ್‌ಬಾಸ್’ ಫಿನಾಲೆಯಲ್ಲಿ ನಿರೂಪಕ ಸುದೀಪ್ ಅವರು ಕೆಲವು ಪುಟಾಣಿಗಳನ್ನು ವೇದಿಕೆಗೆ ಕರೆದು ಮಾತಾಡಿಸಿದರು. ಈ ರಿಯಾಲಿಟಿ ಶೋ ಏಕಿಷ್ಟ ಎಂದು ಕೇಳಿದರು. ಆಘಾತಕಾರಿ ಸಂಗತಿ ಎಂದರೆ ಮಕ್ಕಳು, ಈ ಕಾರ್ಯಕ್ರಮದಲ್ಲಿ ನಡೆಯುವ ಜಗಳವೇ ನಮಗಿಷ್ಟ ಎಂದರು! ಜಗಳದಲ್ಲಿ ಆಡುವ ಅಣಿಮುತ್ತು ಗಳನ್ನೂ ಉದುರಿಸಿದರು. ಮನರಂಜನೆ ಯಾವ ಮಟ್ಟಕ್ಕೆ ಬಂದಿದೆ? ಅದೂ ಪುಟ್ಟಮಕ್ಕಳ ಪಾಲಿಗೆ? ನಮ್ಮ ಮಟ್ಟಕ್ಕೆ ಸರಿಯಾಗಿ ಮನರಂಜನೆ ಕಾರ್ಯಕ್ರಮ ಗಳಿವೆಯೋ ಅಥವಾ ಮನರಂಜನೆ ಕೊಡುವವರ ಮಟ್ಟಕ್ಕೆ ನಾವಿದ್ದೇವೆಯೋ?
-ಮಧುಸೂದನ್ ಬಿ.ಎಸ್., ಬೆಂಗಳೂರು
**
ಮಾದಕವಸ್ತು ಮಾರಾಟ: ಕಡಿವಾಣ ಹಾಕಿ
ಆಧುನಿಕ ಜಗತ್ತಿನಲ್ಲಿ ಸಮಾಜವನ್ನು ಗೆದ್ದಲಿನಂತೆ ತಿನ್ನುತ್ತಿರುವ ಬಹುದೊಡ್ಡ ಸಮಸ್ಯೆ ಮಾದಕ ವ್ಯಸನ. ದೇಶದ ಭವಿಷ್ಯವಾಗಬೇಕಾದ ಯುವಶಕ್ತಿ ಅಮಲಿಗೆ ಸಿಲುಕಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಐ.ಟಿ ಉದ್ಯೋಗಿಗಳವರೆಗೆ ಈ ವಿಷಜಾಲ ಹಬ್ಬಿದೆ. ಮಾದಕ ವಸ್ತುಗಳ ಸೇವನೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವ್ಯಸನಿಗಳು ಖಿನ್ನತೆಯಿಂದ ಬಳಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಸಂಭವ ಉಂಟು. ಇದರಿಂದ ಇಡೀ ಕುಟುಂಬ ಮಾನಸಿಕ ಯಾತನೆ ಅನುಭವಿಸಬೇಕಾಗುತ್ತದೆ. ಮಾದಕವಸ್ತುಗಳ ಜಾಲದ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಬೇಕಿದೆ.
-ವಿನಾಯಕ ಡಿ.ಎಲ್., ಚಿತ್ರದುರ್ಗ
**
ನಾಟಕೋತ್ಸವ: ಸರ್ಕಾರದ ನಡೆ ಪ್ರಶ್ನಾರ್ಹ
ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ‘ಕರ್ವಾಲೊ’ ಕಾದಂಬರಿಯನ್ನು ನಾನು ನಾಟಕರೂಪಕ್ಕೆ ತಂದಿದ್ದು, ಆ ಕೃತಿ ಈವರೆಗೆ ನಾಲ್ಕು ಮುದ್ರಣ ಕಂಡಿದೆ. ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನದ ಅಂಗವಾಗಿ ತೋಟಗಾರಿಕೆ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತೇಜಸ್ವಿ ಪ್ರತಿಷ್ಠಾನದಿಂದ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಭಾನುವಾರ ತೇಜಸ್ವಿ ನಾಟಕೋತ್ಸವ ನಡೆದಿದೆ. ನಾನು ಬರೆದ ‘ಕರ್ವಾಲೊ’ ನಾಟಕವೂ ಅಲ್ಲಿ ಪ್ರದರ್ಶನ ಕಂಡಿದೆ. ಆದರೆ, ಈ ಕುರಿತು ನನಗೆ ಮಾಹಿತಿಯಾಗಲಿ, ಆಹ್ವಾನವಾಗಲಿ ನೀಡಿಲ್ಲ. ಸರ್ಕಾರದ ಕಾರ್ಯಕ್ರಮದಲ್ಲಿ ಹೀಗೆ ಅಸಡ್ಡೆಯಿಂದ ನಡೆದುಕೊಳ್ಳುವುದು ಸರಿಯೆ? ಬಹುಶಃ ಇಂಥ ನಡವಳಿಕೆಯನ್ನು ಸ್ವತಃ ತೇಜಸ್ವಿಯವರೂ ಒಪ್ಪುತ್ತಿರಲಿಲ್ಲ.
-ಅ.ನಾ. ರಾವ್ ಜಾದವ್, ಬೆಂಗಳೂರು
**
ಡೊನಾಲ್ಡ್ ಟ್ರಂಪ್‌ರ ಕುಚೋದ್ಯದ ನಡೆ
ಜಾಗತಿಕ ಮಟ್ಟದಲ್ಲಿ ಹಲವು ಯುದ್ಧಗಳನ್ನು ನಿಲ್ಲಿಸಿರುವ ತನಗೇ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಲವತ್ತುಕೊಂಡಿದ್ದರು. ಆದರೆ, ನಾರ್ವೆಯ ನೊಬೆಲ್ ಸಮಿತಿಯು ವೆನೆಜುವೆಲಾದ ವಿಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ಶಾಂತಿ ಪುರಸ್ಕಾರ ನೀಡಿತು. ಈ ಹಿಂದೆ ಟ್ರಂಪ್ ಅವರು, ಮಾರಿಯಾ ಅವರನ್ನು ಹಿಗ್ಗಾಮುಗ್ಗ ಬೈದಿದ್ದರು. ಆದರೆ, ಆಕೆ ತಮಗೆ ಲಭಿಸಿದ ಪುರಸ್ಕಾರವನ್ನು ಟ್ರಂಪ್‌ಗೆ ಹಸ್ತಾಂತರಿಸಿರುವುದು ಬಾಲಿಶ ನಡೆ. ಇದು ಒಂದು ರೀತಿಯಲ್ಲಿ ಚಿಕ್ಕಮಕ್ಕಳು ಹಟ ಮಾಡಿದಾಗ ಅದು ಸುಲಭಕ್ಕೆ ಸಿಗದಿದ್ದರೆ ಅದರ ಬದಲಿಗೆ ಇನ್ನೇನನ್ನೋ ಕೊಟ್ಟು ಸಮಾಧಾನಪಡಿಸುವ ಹಾಗಿದೆ. ಮತ್ತೊಂದೆಡೆ, ಮರಿಯಾ ಅವರನ್ನು ಒಬ್ಬ ಅದ್ಭುತವಾದ ಮಹಿಳೆಯೆಂದು ಟ್ರಂಪ್ ಹೊಗಳಿರುವುದು ಕೂಡ ತಮಾಷೆಯಾಗಿದೆ. ಈ ಪ್ರಶಸ್ತಿ ಪ್ರಹಸನದಲ್ಲಿ ನೊಬೆಲ್ ಶಾಂತಿ ಪುರಸ್ಕಾರದ ಘನತೆಗೆ ಕುಂದುಬಂದಂತಾಗಿದೆ.
-ರವಿಕಿರಣ್ ಶೇಖರ್, ಬೆಂಗಳೂರು
**
ಪಂಚಾಯಿತಿ ಚುನಾವಣೆ ವಿಳಂಬ ಬೇಡ
ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗೆ ಕೊನೆಗೂ ಕಾಲ ಕೂಡಿಬಂದಂತಿದೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ‘ಒಂದು ಗ್ರಾಮ ಒಂದು ಚುನಾವಣೆ’ ಸೂತ್ರದಡಿ ಚುನಾವಣೆ ನಡೆಸಲು ತಯಾರಿ ನಡೆಸಿರುವುದಾಗಿ ಹೇಳಿದ್ದಾರೆ. ಈ ಮಾದರಿಯಲ್ಲಿ ಚುನಾವಣೆ ನಡೆದರೆ ಸಾರ್ವಜನಿಕ ಹಣ ಮತ್ತು ಸಮಯ ವ್ಯರ್ಥವಾಗದಂತೆ ತಡೆಯಬಹುದು.
ಮೂರು ಸ್ಥಳೀಯ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸಿದರೆ ಒಂದೂವರೆ ವರ್ಷ ಚುನಾವಣಾ ಪ್ರಕ್ರಿಯೆಯಲ್ಲಿಯೇ ಕಳೆದುಹೋಗುತ್ತದೆ. ಇದರಿಂದ ಅಭಿವೃದ್ಧಿ ಕೆಲಸಗಳೇ ಆಗುವುದಿಲ್ಲ. ಸಕಾಲದಲ್ಲಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಬೇಕು. ವಿಳಂಬ ಮಾಡಿದರೆ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ಧಕ್ಕೆಯಾಗಲಿದೆ.
-ನಾಗಾರ್ಜುನ ಹೊಸಮನಿ, ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.