ADVERTISEMENT

ಚುರುಮುರಿ: ದಮ್ ಬೇಕು ದಮ್!

ಸುಮಂಗಲಾ
Published 14 ಮಾರ್ಚ್ 2022, 18:28 IST
Last Updated 14 ಮಾರ್ಚ್ 2022, 18:28 IST
.
.   

ಬೆಕ್ಕಣ್ಣ ಬೆಳಗ್ಗೆಯೇ ಚುನಾವಣೋತ್ತರ ಪ್ರಶ್ನಾವಳಿ ಹಿಡಿದು ನಿಂತಿತ್ತು.

‘ಸೋರುತಿಹುದು ಮನಿಯ ಮಾಳಗಿ... ಈಗ ಈ ಹಾಡು ಯಾರಿಗಿ ಸರಿಯಾಗೈತಿ?’

‘ಕೈ ಪಕ್ಷದ ಬ್ರ್ಯಾಂಡ್ ಹಾಡಿದು ಅಂತ ಬಾಲವಾಡಿ ಮಕ್ಕಳು ಸಹಿತ ಹೇಳ್ತಾವಲೇ. ಉತ್ತರಪ್ರದೇಶದಾಗೆ ಚುನಾವಣೆಗೆ ನಿಂತ 399 ಕಾಂಗಿಗಳಲ್ಲಿ ಬರೀ ಇಬ್ಬರೇ ಪಾಸ್ ಆಗ್ಯಾರೆ, ಪಾಪ 387 ಅಭ್ಯರ್ಥಿಗಳು ಠೇವಣಿನೂ ಕಳ್ಕಂಡಾರಂತ’ ಎಂದೆ.

ADVERTISEMENT

‘ಕಸ ಗುಡಿಸಿ ಬಿಸಾಕಾಕೆ ಯಾವ ಪೊರಕೆ ಶಕ್ತಿಶಾಲಿ... ಹಂಚಿಕಡ್ಡಿ ಪೊರಕೆ, ತೆಂಗಿನಕಡ್ಡಿ ಪೊರಕೆ...?’

‘ಅದ್ಯಾವುದೂ ಅಲ್ಲ... ಕೇಜ್ರಿಬ್ರ್ಯಾಂಡ್ ಪೊರಕೆನೇ ಗಟ್ಟಿ. ಪಂಜಾಬಿನಾಗೆ ಎಲ್ಲಾ ಪಕ್ಷಾನೂ ಗುಡಿಸಿ ಬಿಸಾಕೈತಿ. ಬಾಳಿಕಿ ಬರತೈತಾ ನೋಡಬೇಕಷ್ಟೆ’ ಎಂದೆ.

‘ಉತ್ತರಪ್ರದೇಶದ ಮಾಯಾವತಿ ಅಕ್ಕೋರ ಆನೆ ಈಗ ಎಲ್ಲೈತಂತ?’

‘ಆನೆ ಕಾಲು ಕೆಸರಿನಾಗೆ ಹೂತುಹೋಗೈತಿ, ಆದರೆ ಸೊಂಡಲಿನಾಗೆ ಕಮಲದ ಹೂ ಎತ್ತಿಹಿಡದೈತಿ’ ಎಂದೆ.

ಪ್ರಶ್ನಾವಳಿ ಪಕ್ಕಕ್ಕೆಸೆದ ಬೆಕ್ಕಣ್ಣ ‘ಆಪರೇಶನ್ ಗಂಗಾ ಯಶಸ್ವಿ, ಆಪರೇಶನ್ ಚುನಾವಣೆ- ನಾಲ್ಕು ರಾಜ್ಯದಾಗೆ ಯಶಸ್ವಿ, ಡಬಲ್ ಎಂಜಿನ್ ಅಜೆಂಡಾ ಯಶಸ್ವಿ... ನೋಡು ಹೆಂಗೈತೆ ಯಶೋಗಾಥೆ’ ಎನ್ನುತ್ತ ಮೀಸೆ ತಿರುವಿತು.

‘ಆಪರೇಶನ್ ಸಾಕು ಬಿಡಲೇ. ಕೇಳಿಯಿಲ್ಲೋ... ಮೊನ್ನೆ ನಮ್ಮದೊಂದು ಕ್ಷಿಪಣಿ ಪಾಕಿಸ್ತಾನದ ನೆಲಕ್ಕೆ ಹೋಗಿ ಬಿತ್ತಂತ. ತಾಂತ್ರಿಕ ತಪ್ಪಿನಿಂದಾಗಿ ಹಂಗಾಗೈತಿ, ಬೇಕಂತನೇ ಮಾಡಿಲ್ಲ ಅಂತ ನಮ್ಮೋರು. ಅದ್ ಹೆಂಗೆ ಇಂಥಾ ಗಂಭೀರ ತಪ್ಪು ಆಗತೈತಿ, ಜಂಟಿ ತನಿಖೆ ನಡೆಸಬಕು ಅಂತ ಪಾಕ್ ಪ್ರಧಾನಿ ಕ್ಯಾತೆ ತೆಗೆದಾರೆ...’

ನನ್ನ ಮಾತಿನ ನಡುವೆಯೇ ಬಾಯಿಹಾಕಿದ ಬೆಕ್ಕಣ್ಣ, ‘ಅದ್ ಬರೇ ತಾಂತ್ರಿಕ ತಪ್ಪು, ತಪ್ಪು ಮಾಡೇ ಮನಷ್ಯಾ ಕಲಿತಾನ. ತಪ್ ಮಾಡಾಕೂ ದಮ್ ಬೇಕು... ಮಾಡಿದ ತಪ್ಪನ್ನು ಸಮರ್ಥಿಸಿಕೊಳ್ಳಾಕೂ ದಮ್ ಬೇಕು. ಎಲ್ಲಾ ಥರಾ ಆಪರೇಶನ್ ಮಾಡಾಕೂ ಹಿಂಗ ದಮ್ ಬೇಕು ದಮ್’ ಎಂದು ತಡಬಡನೆ ಹೇಳುತ್ತ, ದಮ್ಮು ಹತ್ತಿ ಕೆಮ್ಮತೊಡಗಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.