ಹಬ್ಬಗಳಲ್ಲಿ ಮನೆಯ ಮುಂದೆ ಅಂದವಾಗಿ ರಂಗೋಲಿ ಹಾಕುವುದು ಸಾಮಾನ್ಯ. ರಂಗೋಲಿ ಹಾಕುವುದು ಶುಭ ಸಂಕೇತವೆಂದು ಹೇಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ ದೀಪಾವಳಿಯಲ್ಲಿ ಯಾವೆಲ್ಲ ರಂಗೋಲಿಗಳನ್ನು ಹಾಕಬಹುದು ಎಂಬುದನ್ನು ನೋಡೋಣ.
ರಂಗೋಲಿ ಬಿಡಿಸಲು ಪ್ರಮುಖವಾಗಿ ರಂಗೋಲಿ ಪುಡಿ ಬೇಕು. ಆದರೆ ರಂಗೋಲಿ ಪುಡಿ ಬಳಸದೆ ಮನೆಯಲ್ಲಿ ಸಿಗುವ ಕೆಲವು ವಸ್ತುಗಳನ್ನು ಬಳಸಿಕೊಂಡು ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಹೂಗಳ ರಂಗೋಲಿ:
ವಿವಿಧ ಬಗೆಯ ಹೂವುಗಳನ್ನು ಬಳಸಿಕೊಂಡು ಸುಂದರವಾದ ಹಾಗೂ ಪರಿಸರ ಸ್ನೇಹಿ ರಂಗೋಲಿಯನ್ನು ಹಾಕಬಹುದು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ಹಲವು ಬಗೆಯ ಹೂ ಹಾಗೂ ಎಲೆಗಳನ್ನು ಬಳಕೆ ಮಾಡಬಹುದು. ಈ ರಂಗೋಲಿಯು ಹೆಚ್ಚು ನೈಜತೆ ಹಾಗೂ ಆಕರ್ಷಣೀಯವಾಗಿರುತ್ತದೆ.
ನೈಸರ್ಗಿಕ ಬಣ್ಣಗಳ ರಂಗೋಲಿ:
ಮನೆಯಲ್ಲಿ ಸಿಗುವ ವಿವಿಧ ರೀತಿಯ ಹಿಟ್ಟುಗಳನ್ನು ಬಳಸಿಕೊಂಡು ರಂಗೋಲಿಯನ್ನು ಹಾಕಬಹುದು. ಬಿಳಿಯ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ನಾನಾ ಬಣ್ಣಗಳನ್ನು ಸೇರಿಸಬಹುದು. ಅರಿಶಿಣ, ಕುಂಕುಮ, ಹಸಿರು ತರಕಾರಿಗಳನ್ನು ಬಳಸಿಕೊಂಡು ಹಿಟ್ಟಿಗೆ ಕೆಲವು ಸೀಮಿತ ಬಣ್ಣಗಳನ್ನು ನೀಡಬಹುದಾಗಿದೆ. ಈ ರಂಗೋಲಿಯು ನೈಸರ್ಗಿಕವಾಗಿ ಕೂಡಿರುತ್ತದೆ.
ಅಕ್ಕಿಯ ರಂಗೋಲಿ:
ಅಕ್ಕಿಯಿಂದ ಸುಂದರವಾದ ರಂಗೋಲಿಯನ್ನು ಬಿಡಿಸಬಹುದು. ಅಕ್ಕಿಯಿಂದ ಬಿಡಿಸಿದ ರಂಗೋಲಿ ಎಲ್ಲರನ್ನು ಆಕರ್ಷಿಸುತ್ತದೆ. ಜೊತೆಗೆ ಅರಿಶಿಣ, ಕುಂಕುಮದಂತಹ ಬಣ್ಣಗಳನ್ನು ಬೇರೆಸಿ ಬಿಡಿಸಬಹುದು. ಅಕ್ಕಿ ರಂಗೋಲಿಯು ಮಂಗಳಕರ ಎಂದು ಜ್ಯೋತಿಷ ಹೇಳುತ್ತದೆ. ಗೇರು ಪುಡಿಯನ್ನು ಇದರೊಂದಿಗೆ ಬಳಸಬಹುದಾಗಿದೆ.
ದೀಪದ ರಂಗೋಲಿ:
ಹಣತೆಯ ರಂಗೋಲಿಯನ್ನು ರಾತ್ರಿ ವೇಳೆಯಲ್ಲಿ ಹಾಕುವುದರಿಂದ ಹೆಚ್ಚು ಆಕರ್ಷಣೀಯವಾಗಿ ಕಾಣುತ್ತದೆ. ಹಣತೆಯ ಜೊತೆಗೆ ಹೂ, ಬಳೆ, ಇತರೆ ಅಲಂಕಾರಿಕ ವಸ್ತುಗಳನ್ನು ಬಳಸಿಕೊಂಡು ಹಣತೆ ರಂಗೋಲಿಯನ್ನು ರಚಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.