
ಚಿತ್ರ: ಗೆಟ್ಟಿ
ಸಾಮಾನ್ಯವಾಗಿ ಜನರು ಹೊಸ ವರ್ಷವನ್ನು ದೀರ್ಘ ಆಸೆಗಳ ಪಟ್ಟಿಯೊಂದಿಗೆ, ನಿರ್ಣಯಗಳೊಂದಿಗೆ, ಸಾಧಿಸಬೇಕಾದ ಗುರಿಗಳೊಂದಿಗೆ ಅಥವಾ ಪೂರೈಸಬೇಕಾದ ಬಯಕೆಗಳೊಂದಿಗೆ ಸ್ವಾಗತಿಸುತ್ತಾರೆ. ಆದರೆ ಈ ವರ್ಷ, ನಿಮ್ಮ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಲು ನಾನು ನಿಮಗೆ ಆಹ್ವಾನ ನೀಡುತ್ತೇನೆ.
2026ನೇ ವರ್ಷ ಭಾಗ್ಯಶಾಲಿ. ಯಾಕೆಂದರೆ ನೀವು ಈ ಸಮಯದಲ್ಲಿ ಜೀವಿಸುತ್ತಿದ್ದೀರಿ. ನೀವು ಲೋಕದ ಹಿತಕ್ಕಾಗಿ ಬದುಕುತ್ತಿದ್ದರೆ, ಆ ಲೋಕವೇ ಭಾಗ್ಯಶಾಲಿ. ಕಾಲವೇ ನಿಮ್ಮ ಅಸ್ತಿತ್ವವನ್ನು ಸಂಭ್ರಮಿಸಲಿ. ನೀವು ಎಂದಿನಂತೆ ನಗುತಿರಲಿ.
ಬಡವನು ವರ್ಷಕ್ಕೊಮ್ಮೆ ಹೊಸ ವರ್ಷವನ್ನು ಸಂಭ್ರಮಿಸುತ್ತಾನೆ. ಶ್ರೀಮಂತನು ಪ್ರತಿದಿನವನ್ನು ಸಂಭ್ರಮಿಸುತ್ತಾನೆ. ಆದರೆ ಅತೀ ಶ್ರೀಮಂತನು ಪ್ರತಿಕ್ಷಣವನ್ನು ಸಂಭ್ರಮಿಸುತ್ತಾನೆ. ನೀವು ಎಷ್ಟು ಶ್ರೀಮಂತರು? ವರ್ಷಕ್ಕೊಮ್ಮೆ? ತಿಂಗಳಿಗೆ ಒಮ್ಮೆ? ಅಥವಾ ಪ್ರತಿದಿನವೇ?
ನೀವು ಪ್ರತಿಕ್ಷಣವನ್ನು ಸಂಭ್ರಮಿಸುತ್ತಿದ್ದರೆ, ಸೃಷ್ಟಿಯ ಕರ್ತನೊಂದಿಗೆ ನೀವು ಏಕತ್ವದಲ್ಲಿದ್ದೀರಿ. ಇದು ಭೌತಿಕ ಸಂಪತ್ತಿನ ಬಗ್ಗೆ ಅಲ್ಲ. ಇದು ಜಾಗೃತಿಯ ಸಂಪತ್ತು, ಪ್ರಸ್ತುತ ಕ್ಷಣದಲ್ಲಿ ಸಂಪೂರ್ಣವಾಗಿ ಇರುವ ಶ್ರೀಮಂತಿಕೆಯ ಬಗ್ಗೆ.
ನೀವು ಸದಾ ‘ಒಳ್ಳೆಯ ಸಮಯ ಬರಲಿ’ ಎಂದು ಕಾಯುತ್ತಿದ್ದರೆ, ಕಾಲ ನಿಧಾನವಾಗಿ ಸಾಗುತ್ತದೆ. ಆದರೆ ನೀವು ಆಧ್ಯಾತ್ಮಿಕ ಮಾರ್ಗದಲ್ಲಿದ್ದರೆ, ಕಾಲವೇ ವೇಗವಾಗಿ ಹರಿಯುವಂತೆ ಅನುಭವವಾಗುತ್ತದೆ. ಶುದ್ಧ ಹೃದಯ ಮತ್ತು ತೀಕ್ಷ್ಣ ಬುದ್ಧಿ ಯಾವುದೇ ಸಮಯವನ್ನೂ ಶುಭ ಸಮಯವಾಗಿಸಬಲ್ಲದು. ಕಾಲವನ್ನೇ ರೂಪಾಂತರಗೊಳಿಸುವ ಶಕ್ತಿ ನಿಮ್ಮೊಳಗಿದೆ.
ವರ್ಷ ಮುಗಿಯುವಾಗ, ಸಂಭ್ರಮಿಸುತ್ತಲೇ ಕಳೆದ ವರ್ಷವನ್ನು ವಿಮರ್ಶಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಒಂದು ಗಂಟೆ ಕುಳಿತು, ವಾರದಿಂದ ವಾರಕ್ಕೆ ನಿಮ್ಮ ಜೀವನವನ್ನು ನೆನಪಿಸಿಕೊಳ್ಳಿ. ನೀವು ಹೇಗೆ ಬೆಳೆದಿರಿ? ಏನು ಮಾಡಿದ್ದಿರಿ ? ಸುತ್ತಮುತ್ತಲವರಿಗೆ ಎಷ್ಟು ಉಪಯುಕ್ತರಾಗಿದ್ದಿರಿ?
ಕಳೆದ ವರ್ಷ ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ಏನು ಮಾಡಬೇಕು, ಏನು ಮಾಡಬಾರದು ಎಂಬ ಅರಿವನ್ನು ನೀಡಿದೆ. ಒಳ್ಳೆಯ ಘಟನೆಗಳು ಪುನರಾವರ್ತಿಸಬೇಕಾದುದನ್ನು ತೋರಿಸಿವೆ. ಕಠಿಣ ಅನುಭವಗಳು ಏನು ತಪ್ಪಿಸಬೇಕು ಎಂಬುದನ್ನು ಕಲಿಸಿವೆ ಮತ್ತು ನಮ್ಮೊಳಗಿನ ಶಕ್ತಿಗಳನ್ನು ಹೊರತಂದಿವೆ.
ಈ ಅರ್ಥದಲ್ಲಿ, ಸಂಪೂರ್ಣ ಜಗತ್ತೇ ನಿಮ್ಮ ಸ್ನೇಹಿತ ಮತ್ತು ಗುರು. ನೀವು ಶತ್ರುಗಳೆಂದು ಭಾವಿಸುವವರೂ ಸಹ ನಿಮ್ಮ ಸ್ನೇಹಿತರೇ, ಅವರು ಎಚ್ಚರಿಕೆ ಕಲಿಸಿದ್ದಾರೆ. ನಿಮ್ಮ ಒಳಗಿನ ಸಾಮರ್ಥ್ಯವನ್ನು ಹೊರತಂದಿದ್ದಾರೆ.
ಹೊಸ ವರ್ಷದ ದಿನ, ಕಳೆದ ವರ್ಷವನ್ನು ಒಂದು ಹೂವಿನೊಂದಿಗೆ ದೈವಕ್ಕೆ ಅರ್ಪಿಸಿ. ಪಾಠಗಳನ್ನು ಮಾತ್ರ ಜೊತೆಗೂಡಿಸಿಕೊಂಡು, ಪಶ್ಚಾತ್ತಾಪವಿಲ್ಲದೆ, ಕೋಪವಿಲ್ಲದೆ, ಒತ್ತಡವಿಲ್ಲದೆ ಮುಂದೆ ಸಾಗಿರಿ.
ನಮ್ಮ ಬಯಕೆಗಳು ಮತ್ತು ಕ್ರಿಯೆಗಳು ಜ್ಞಾನದ ಶಕ್ತಿಯಿಂದ ಬೆಂಬಲಿತವಾಗಿದ್ದರೆ, ಜೀವನದಲ್ಲಿ ಆನಂದ ಮತ್ತು ಸುಖವಷ್ಟೇ ಇರುತ್ತದೆ. ಜ್ಞಾನವಿಲ್ಲದೆ ಇದ್ದರೆ, ಬಯಕೆಗಳು ದುರ್ಬಲವಾಗುತ್ತವೆ, ಯೋಜನೆಗಳು ಸಾಮಾನ್ಯವಾಗುತ್ತವೆ, ಅನಿಶ್ಚಿತತೆ ಆವರಿಸುತ್ತದೆ.
ಸಾಮಾನ್ಯವಾಗಿ ನೀವು ಸಂಭ್ರಮದಲ್ಲಿ ಮುಳುಗಿರುತ್ತೀರಿ. ಆದರೆ ಕಾಲವೇ ನಿಮ್ಮನ್ನು ಸಂಭ್ರಮಿಸಿದಾಗ, ನೀವು ಸಂಭ್ರಮದ ಮಧ್ಯೆ ಸಾಕ್ಷಿಯಾಗಿ ನಿಂತಿರುತ್ತೀರಿ. ಮೂಲದೊಂದಿಗೆ ಸಂಪರ್ಕದಲ್ಲಿದ್ದರೆ, ಜೀವನವೇ ಸಂಭ್ರಮವಾಗುತ್ತದೆ.
ಜ್ಞಾನದಲ್ಲಿ ಸಮಯ ಕಳೆಯಿರಿ. ನಿಮ್ಮ ಎಲ್ಲಾ ಕೆಲಸಗಳು ಮತ್ತು ಯೋಜನೆಗಳು ಆಗ ಹೆಚ್ಚು ಶಕ್ತಿಯುತವಾಗುತ್ತವೆ. ಧ್ಯಾನ ಮತ್ತು ಜ್ಞಾನ ಮೂಲಕ ಮೂಲದೊಂದಿಗೆ ಸಂಪರ್ಕದಲ್ಲಿರುವಾಗ, ಜೀವನವೇ ನಿರಂತರ ಹಬ್ಬವಾಗುತ್ತದೆ.
ಆದ್ದರಿಂದ ಈ ಹೊಸ ವರ್ಷ, ವರ್ಷವನ್ನು ಮಾತ್ರ ಸಂಭ್ರಮಿಸಬೇಡಿ. ಹೊಸ ವರ್ಷವೇ ನಿಮ್ಮನ್ನು ಸಂಭ್ರಮಿಸಲಿ. ಅದು ನಿಮಗೆ ಇನ್ನೂ ಉತ್ತಮವಾದುದನ್ನು ತಂದುಕೊಡಲು ಬಯಸಿದರೆ, ಅದನ್ನು ಬಿಡಿ, ಅದು ಅದರ ಕೆಲಸ. ನಿಮ್ಮ ಕೆಲಸ ಒಂದೇ, ಪ್ರಸ್ತುತವಾಗಿರುವುದು, ಲೋಕಕ್ಕೆ ಕೊಡುಗೆ ನೀಡುವುದು, ಮತ್ತು ನಗುತಿರಲು ಪ್ರತಿಕ್ಷಣವನ್ನೂ ಸಂಭ್ರಮವಾಗಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.