ADVERTISEMENT

ಕೊಹ್ಲಿಯನ್ನು ಮೀರಿಸುವ ಆಟಗಾರರನ್ನು ಪಾಕಿಸ್ತಾನ ನಿರ್ಲಕ್ಷಿಸಿದೆ: ಅಬ್ದುಲ್ ರಜಾಕ್

ಏಜೆನ್ಸೀಸ್
Published 23 ಜನವರಿ 2020, 14:39 IST
Last Updated 23 ಜನವರಿ 2020, 14:39 IST
   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗಿಂತಲೂ ಉತ್ತಮ ಆಟಗಾರರು ಪಾಕಿಸ್ತಾನದಲ್ಲಿ ಇದ್ದಾರೆ. ಆದರೆ ಅವರನ್ನು ನಮ್ಮ ವ್ಯವಸ್ಥೆ ನಿರ್ಲಕ್ಷಿಸಿದೆ ಎಂದು ಪಾಕಿಸ್ತಾನದ ಮಾಜಿ ಆಲ್ರೌಂಡರ್‌ಅಬ್ದುಲ್ ರಜಾಕ್‌ ಆರೋಪಿಸಿದ್ದಾರೆ.

ಪಾಕಿಸ್ತಾನದ ವೆಬ್‌ಸೈಟ್‌ವೊಂದರ ಜೊತೆ ಮಾತನಾಡಿರುವ ರಜಾಕ್, ‘ಅವರು (ಕೊಹ್ಲಿ) ಅದ್ಭುತವಾದ ಆಟಗಾರ. ಅದರಲ್ಲಿ ಯಾವುದೇ ಅನುಮಾನಗಳಿಲ್ಲ. ಆದಾಗ್ಯೂ ಅವರು ಬಿಸಿಸಿಐನಿಂದ ಎಲ್ಲ ರೀತಿಯ ಬೆಂಬಲ ಪಡೆದಿರುವ ಅದೃಷ್ಟವಂತರು. ಹಾಗಾಗಿ ಅವರಲ್ಲಿ ಅಷ್ಟು ಆತ್ಮವಿಶ್ವಾಸವಿದ್ದು, ಯಶಸ್ಸು ಗಳಿಸಲು ಅಂತಹ ಬೆಂಬಲ ಎಲ್ಲ ಆಟಗಾರರಿಗೂ ಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಕ್ರಿಕೆಟ್‌ ಮಂಡಳಿಯಿಂದ ಅವರಿಗೆ ಸಿಗುವ ಗೌರವವು, ಸಾಮಾನ್ಯವಾಗಿಯೇ ಅವರಿಗೆ ಸ್ಫೂರ್ತಿ ತುಂಬುತ್ತದೆ. ಅದರ ಫಲವೇ ಅವರು ಮೂರೂ ಮಾದರಿಲ್ಲಿ ಗಳಿಸಿರುವ ಯಶಸ್ಸು’ ಎಂದು ವ್ಯಾಖ್ಯಾನಿಸಿದ್ದಾರೆ.

ಒಂದು ವೇಳೆ ಅಷ್ಟು ಪ್ರಮಾಣದ ಸಹಕಾರ ಸಿಕ್ಕರೆ ಪಾಕಿಸ್ತಾನದ ಆಟಗಾರರೂ ಕೊಹ್ಲಿ ಸಾಧನೆಯನ್ನು ಮಿರಿ ನಿಲ್ಲಬಲ್ಲರು ಎಂದಿದ್ದಾರೆ.

‘ಕೊಹ್ಲಿಗಿಂತಲೂ ಶ್ರೇಷ್ಠ ಆಟಗಾರರು ಪಾಕಿಸ್ತಾನದಲ್ಲಿಯೂ ಇದ್ದಾರೆ ಎಂದು ನಂಬಿದ್ದೇನೆ. ಆದರೆ ಅವರನ್ನು ನಮ್ಮ ವ್ಯವಸ್ಥೆ ನಿರ್ಲಕ್ಷಿಸಿರುವುದು ದುರಂತ’ ಎಂದು ಬೇಸರಪಟ್ಟುಕೊಂಡಿರುವ ಅವರು, ‘ಕೊಹ್ಲಿಯ ವಿಚಾರದಲ್ಲಿ ಹಾಗಾಗಿಲ್ಲ. ಬಿಸಿಸಿಐ ಪ್ರತಿಭೆಯನ್ನು ಗುರುತಿಸಿರುವುದು ಕೊಹ್ಲಿಯ ಆತ್ಮವಿಶ್ವಾಸ, ಪ್ರದರ್ಶನದಲ್ಲಿಪ್ರತಿಫಲಿಸುತ್ತಿದೆ’ ಎಂದಿದ್ದಾರೆ.

ಸದ್ಯ ಕ್ರಿಕೆಟ್‌ ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬ ಎನಿಸಿರುವ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್ ಅವರೂ, ಕೊಹ್ಲಿಯನ್ನು ಬುಧವಾರವಷ್ಟೇ ಹೊಗಳಿದ್ದರು. ಮಾತ್ರವಲ್ಲದೆ ಕೊಹ್ಲಿ ಮತ್ತಷ್ಟು ದಾಖಲೆಗಳನ್ನು ಮುರಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.