
ನವದೆಹಲಿ: ಹೊಟ್ಟೆನೋವಿನಿಂದ ಚೇತರಿಸಿಕೊಳ್ಳುತ್ತಿರುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಭಾನುವಾರ ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಆಡುವುದು ಖಚಿತವಾಗಿಲ್ಲ.
ಮೂರು ದಿನಗಳ ನಂತರ ಅವರು ಗುರುವಾರ ತಂಡದೊಂದಿಗೆ ಕಾಣಿಸಿಕೊಂಡರು. ಇದು ತಂಡಕ್ಕೆ ಆಶಾದಾಯಕವಾಗಿದೆ. ಅವರು ಸೋಮವಾರ ಹೊಟ್ಟೆನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಮತ್ತೆ ತಂಡಕ್ಕೆ ಮರಳಿದ್ದರು.
ಆದರೆ ಯಾವುದೇ ತರಬೇತಿ, ತಾಲೀಮಿನಲ್ಲಿ ಭಾಗಿಯಾಗಲಿಲ್ಲ. ನಮಿಬಿಯಾ ಎದುರಿನ ಪಂದ್ಯಕ್ಕೂ ಮುನ್ನ ಅವರು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ನಿಧಾನಗತಿಯಲ್ಲಿ ಮತ್ತು ಎಚ್ಚರಿಕೆಯಿಂದ ನಡೆಯುತ್ತಿದ್ದರು. ನಿಸ್ತೇಜರಾಗಿ ಕಾಣುತ್ತಿದ್ದರು. ರಾಷ್ಟ್ರಗೀತೆ ನುಡಿಸುವಾಗ ಅವರು ತಂಡದೊಂದಿಗೆ ಸೇರಿಕೊಳ್ಳಲಿಲ್ಲ.
‘ಅಭಿಷೇಕ್ ಶರ್ಮಾ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಇಂದಿನ ಪಂದ್ಯಕ್ಕೆ ಅವರು ಆಯ್ಕೆಗೆ ಲಭ್ಯರಿರಲಿಲ್ಲ. ಬಿಸಿಸಿಐ ವೈದ್ಯಕೀಯ ತಂಡವು ನಿಗಾ ವಹಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಟಾಸ್ ಸಂದರ್ಭದಲ್ಲಿ ಕಾಮೆಂಟೆಟರ್ ರವಿಶಾಸ್ತ್ರಿ ಅವರೊಂದಿಗೆ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ‘ಅವರು (ಅಭಿಷೇಕ್) ಒಂದು ಅಥವಾ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆಯಬಹುದು. ಆ ಮೂಲಕ ಪೂರ್ಣ ಚೇತರಿಸಿಕೊಳ್ಳಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.