ADVERTISEMENT

ರಣಜಿ ಟ್ರೋಫಿಗೂ ಮುನ್ನ ಮುಂಬೈ ತಂಡದ ನಾಯಕತ್ವ ತ್ಯಜಿಸಿದ ಅಜಿಂಕ್ಯ ರಹಾನೆ

ಪಿಟಿಐ
Published 21 ಆಗಸ್ಟ್ 2025, 11:33 IST
Last Updated 21 ಆಗಸ್ಟ್ 2025, 11:33 IST
ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ   

ಮುಂಬೈ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಅಜಿಂಕ್ಯ ರಹಾನೆ ಅವರು ಮುಂಬೈ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಆದರೆ ಅವರು ಬ್ಯಾಟರ್ ಆಗಿ ತಂಡದಲ್ಲಿ ಮುಂದವರಿಯಲಿದ್ದಾರೆ. 

‘ಮುಂಬೈ ತಂಡದ  ನಾಯಕತ್ವ ವಹಿಸಿದ್ದು ಮತ್ತು ಚಾಂಪಿಯನ್‌ಷಿಪ್ ಗೆದ್ದಿದ್ದು ನನಗೆ ಸಂದ ದೊಡ್ಡ ಗೌರವ’ ಎಂದು ಅಜಿಂಕ್ಯ ಅವರು ‘ಎಕ್ಸ್‌’ನಲ್ಲಿ ಬರದಿದ್ದಾರೆ.

‘ದೇಶಿ ಕ್ರಿಕೆಟ್‌ನ ಹೊಸ ಋತು ಆರಂಭವಾಗಲಿದೆ. ಹೊಸ ನಾಯಕನನ್ನು ಬೆಳೆಸಲು ಇದು ಸೂಕ್ತ ಸಮಯ. ಆದ್ದರಿಂದ ನಾನು ನಾಯಕತ್ವದ ಸ್ಥಾನವನ್ನು ಬಿಟ್ಟುಕೊಡಲು ನಿರ್ಧರಿಸಿರುವೆ. ತಂಡಕ್ಕೆ ಸನ್ನ ಸಂಪೂರ್ಣ ಸಾಮರ್ಥ್ಯವನ್ನು ವಿನಿಯೋಗಿಸಿ ಆಡುತ್ತೇವೆ. ಮುಂಬೈ ತಂಡವು ಮತ್ತಷ್ಟು ಟ್ರೋಫಿಗಳನ್ನು ಜಯಿಸಲು ನೆರವಾಗುವೆ’ ಎಂದೂ ಉಲ್ಲೇಖಿಸಿದ್ದಾರೆ. 

ADVERTISEMENT

ಅಜಿಂಕ್ಯ ಅವರು ಭಾರತ ತಂಡದಲ್ಲಿ ಆಡಿರುವ ಅನುಭವಿ. 37 ವರ್ಷದ ಅಜಿಂಕ್ಯ ಅವರು 201 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ 14 ಸಾವಿರ ರನ್‌ ಗಳಿಸಿದ್ದಾರೆ. 

ರಹಾನೆ ನಾಯಕತ್ವದಲ್ಲಿ ಮುಂಬೈ ತಂಡವು 2023–24ರ ರಣಜಿ ಟ್ರೋಫಿ ಜಯಿಸಿತ್ತು. 2024–25ರಲ್ಲಿ ರೆಸ್ಟ್ ಆಫ್ ಇಂಡಿಯಾ (ಆರ್‌ಒಐ) ಎದುರು ಇರಾನಿ ಕಪ್ ಕೂಡ ಗೆದ್ದಿತ್ತು. 2022–23ರಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯನ್ನೂ ಮುಂಬೈ ಗೆದ್ದಿತ್ತು. 

2021ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಭಾರತ ತಂಡವನ್ನೂ ಅಜಿಂಕ್ಯ ಮುನ್ನಡೆಸಿದ್ದರು. ಅದರ ನಂತರ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಭಾರತ ತಂಡವನ್ನು ಅವರು 85 ಟೆಸ್ಟ್, 90 ಏಕದಿನ ಮತ್ತು 20 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಅವರು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದರು. 

ರಹಾನೆ ಮತ್ತು ಮತ್ತೊಬ್ಬ ಅನುಭವಿ ಬ್ಯಾಟರ್ ಚೇತೇಶ್ವರ್ ಪೂಜಾರ ಅವರು ಭಾರತ ತಂಡಕ್ಕೆ ಮರಳುವ ಗುರಿಯೊಂದಿಗೆ ದೇಶಿ ಟೂರ್ನಿಗಳಲ್ಲಿ ಆಟ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.