ADVERTISEMENT

ಅಮೋಘ ಬೌಲಿಂಗ್ ಶ್ರೇಯವನ್ನು ಕ್ಯಾನ್ಸರ್‌ಪೀಡಿತ ಸಹೋದರಿಗೆ ಅರ್ಪಿಸಿದ ಆಕಾಶ್ ದೀಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜುಲೈ 2025, 5:48 IST
Last Updated 7 ಜುಲೈ 2025, 5:48 IST
   

'ಪ್ರತಿ ಬಾರಿ ಚೆಂಡನ್ನು ಕೈಯಲ್ಲಿ ಹಿಡಿದಾಗಲೂ, ಅವಳದ್ದೇ ಆಲೋಚನೆ, ಚಿತ್ರಗಳು ತಲೆಯಲ್ಲಿ ಸುಳಿಯುತ್ತಿದ್ದವು. ಈ ಪ್ರದರ್ಶನದ ಶ್ರೇಯವನ್ನು ಅವಳಿಗೆ ಅರ್ಪಿಸುತ್ತೇನೆ'

ಇಂಗ್ಲೆಂಡ್‌ ವಿರುದ್ಧದ ಎಜ್‌ಬಾಸ್ಟನ್‌ನಲ್ಲಿ ಟೆಸ್ಟ್‌ ಹೀರೋ ಆಕಾಶ್ ದೀಪ್ ಅವರು ತಮ್ಮ ಅಮೋಘ ಪ್ರದರ್ಶನದ ಶ್ರೇಯವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ತನ್ನ ಸಹೋದರಿಗೆ ಅರ್ಪಿಸಿ ಹೇಳಿದ ಮಾತಿದು.

ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲೇ ಸೋತು ಹಿನ್ನಡೆ ಅನುಭವಿಸಿದ್ದ ಹಾಗೂ ಪರಿಣತ ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರ ಅನುಪಸ್ಥಿತಿಯಿಂದ ಕುಗ್ಗಿದ್ದ ಟೀಂ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ ಆಕಾಶ್‌, ಪಂದ್ಯದಲ್ಲಿ ಒಟ್ಟು 10 ವಿಕೆಟ್‌ ಉರುಳಿಸಿದರು. ಅವರ ಆಟದ ನೆರವಿನಿಂದ, ಶುಭಮನ್‌ ಗಿಲ್‌ ಪಡೆ 336 ರನ್‌ ಅಂತರದ ಜಯ ಗಳಿಸಿ ಸರಣಿಯಲ್ಲಿ 1–1 ಅಂತರದ ಸಮಬಲ ಸಾಧಿಸಲು ಸಾಧ್ಯವಾಯಿತು.

ADVERTISEMENT

ಪಂದ್ಯದ ಬಳಿಕ ಮಾತನಾಡಿರುವ ಚೇತೇಶ್ವರ ಪೂಜಾರ ಅವರೊಂದಿಗೆ ಮಾತನಾಡಿದ ಆಕಾಶ್‌, 'ನಾನು ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಎರಡು ತಿಂಗಳ ಹಿಂದೆ ನನ್ನ ಸಹೋದರಿಗೆ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ. ನನ್ನ ಪ್ರದರ್ಶನವು ಆಕೆಯಲ್ಲಿ ಖುಷಿ ಮೂಡಿಸಲಿದೆ. ಆಕೆ ತುಂಬಾ ಸಂತೋಷಪಡುತ್ತಾಳೆ' ಎಂದು ಹೇಳಿದ್ದಾರೆ.

ಕಣ್ಣಾಲಿ ತುಂಬಿ, ಗಂಟಲು ಬಿಗಿದುಕೊಂಡರೂ ನಗುತ್ತಲೇ ಮಾತನಾಡಿದ ಅವರು, 'ನಾವೆಲ್ಲರೂ ನಿನ್ನೊಂದಿಗಿದ್ದೇವೆ ಎಂದು ಹೇಳಲು ಬಯಸುತ್ತೇನೆ' ಎಂದು ಸಹೋದರಿಗೆ ಧೈರ್ಯ ಹೇಳಿದ್ದಾರೆ.

ಬೂಮ್ರಾ ಅನುಪಸ್ಥಿತಿಯಲ್ಲಿ ಮಿಂಚಿದ ಆಕಾಶ್
ಪರಿಣತ ವೇಗಿ ಜಸ್‌ಪ್ರೀತ್‌ ಬೂಮ್ರಾ ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಆಕಾಶ್‌, ಟೀ ಇಂಡಿಯಾದ ಬೌಲಿಂಗ್‌ಗೆ ಬಲ ತುಂಬಿದರು. ಬೂಮ್ರಾ ಇದ್ದರೂ, ಮೊದಲ ಪಂದ್ಯದಲ್ಲಿ ಸೋಲಿನ ಪೆಟ್ಟು ತಿಂದಿದ್ದ ಭಾರತಕ್ಕೆ, ಎರಡನೇ ಪಂದ್ಯದಲ್ಲಿ ಗೆಲುವಿನ ಮುಲಾಮು ಹಚ್ಚಿದರು.

ಮೊದಲ ಇನಿಂಗ್ಸ್‌ನಲ್ಲಿ 88 ರನ್‌ ನೀಡಿ 4 ವಿಕೆಟ್‌ ಪಡೆದಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಗೊಂಚಲು ಸಾಧನೆ ಮಾಡಿದರು. 99 ರನ್‌ ನೀಡಿ ಪ್ರಮುಖ 6 ವಿಕೆಟ್‌ ಕಿತ್ತರು.

'ಕಾಶಿ'ಯಲ್ಲಿ ಮೂರನೇ ಪಂದ್ಯ
ತೆಂಡೂಲ್ಕರ್‌–ಆ್ಯಂಡರ್ಸನ್‌ ಟೆಸ್ಟ್‌ ಸರಣಿಯ ಮೂರನೇ ಪಂದ್ಯವು ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಜುಲೈ 10ರಂದು ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.