
ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್, ಸ್ಟೀವ್ ಸ್ಮಿತ್ ಮತ್ತು ಖವಾಜ
ಚಿತ್ರ ಕೃಪೆ: @19_11_nightmare
ಕ್ಯಾನ್‌ಬೆರಾ: ಬೆನ್ನು ನೋವಿನಿಂದ ಬಳಲುತ್ತಿರುವ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಆ್ಯಷಸ್ ಟೆಸ್ಟ್‌ನ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದು, ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ.
ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಈ ವರ್ಷದ ಜುಲೈನಿಂದ ಮೈದಾನದಿಂದ ದೂರವೇ ಉಳಿದಿದ್ದಾರೆ. ಈ ನಡುವೆ ನವೆಂಬರ್ 21ರಿಂದ ಪರ್ತ್‌ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಅವರು ಲಭ್ಯವಿರುವುದಿಲ್ಲ ಎಂದು ತಂಡದ ಮುಖ್ಯ ಕೋಚ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಸೀಸ್ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್, ‘ಕಮಿನ್ಸ್ ಮತ್ತೆ ಮೈದಾನಕ್ಕಿಳಿಯಲು ಕನಿಷ್ಠ ನಾಲ್ಕು ವಾರ ಸಮಯ ಬೇಕಾಗಬಹುದು ಎಂದು ವಾರದ ಹಿಂದೆಯೇ ನಾವು ಹೇಳಿದ್ದೆವು. ಅದರೆ, ಅವರಿಗೆ ಇನ್ನೂ ಹೆಚ್ಚು ಸಮಯ ಬೇಕು. ದುರದೃಷ್ಟವಶಾತ್ ಅವರು ಮೊದಲ ಆ್ಯಷಸ್ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ. ಎರಡನೇ ಟೆಸ್ಟ್ ಒಳಗಾಗಿ ಅವರು ತಂಡ ಸೇರಿಕೊಳ್ಳಲಿದ್ದಾರೆ ಎಂಬ ಆಶಾವಾದ ಇದೆ’ ಎಂದು ಅವರು ತಿಳಿಸಿದ್ದಾರೆ.
‘ಕಮಿನ್ಸ್ ಈ ವಾರದಿಂದ ಬೌಲಿಂಗ್ ಅಭ್ಯಾಸ ಆರಂಭಿಸಲಿದ್ದಾರೆ ಮತ್ತು ಡಿಸೆಂಬರ್ 4 ರಿಂದ ಬ್ರಿಸ್ಬೇನ್‌ನಲ್ಲಿ ಆರಂಭವಾಗುವ ಎರಡನೇ ಟೆಸ್ಟ್ ಒಳಗಾಗಿ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ. ಮೊದಲ ಟೆಸ್ಟ್‌ನಲ್ಲಿ ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡೆಸುತ್ತಾರೆ’ ಎಂದು ಮೆಕ್‌ಡೊನಾಲ್ಡ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.