ADVERTISEMENT

ಸೂಪರ್ ಓವರ್‌ನಲ್ಲಿ ಅರ್ಷದೀಪ್ ಕಮಾಲ್: ಇಲ್ಲಿದೆ ಬಾಲ್ ಟು ಬಾಲ್ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2025, 10:32 IST
Last Updated 27 ಸೆಪ್ಟೆಂಬರ್ 2025, 10:32 IST
<div class="paragraphs"><p>ಅರ್ಷದೀಪ್ ಸಿಂಗ್</p></div>

ಅರ್ಷದೀಪ್ ಸಿಂಗ್

   

ದುಬೈ: ಶುಕ್ರವಾರ ನಡೆದ ಏಷ್ಯಾ ಕಪ್‌ನ ಕೊನೆಯ ಸೂಪರ್–4 ಪಂದ್ಯದಲ್ಲಿ ಭಾರತ ತಂಡ ಸೂಪರ್ ಓವರ್‌ನಲ್ಲಿ ಶ್ರೀಲಂಕಾ ವಿರುದ್ಧ ರೋಚಕವಾಗಿ ಗೆಲ್ಲುವ ಮೂಲಕ ಟೂರ್ನಿಯಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ಆ ಮೂಲಕ ನಾಳೆ (ಭಾನುವಾರ) ನಡೆಯಲಿರುವ ಫೈನಲ್ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನಿಗದಿ 20 ಓವರ್‌ಗಳಲ್ಲಿ 202 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಈ ದೊಡ್ಡ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡದ ಪರವಾಗಿ ಆರಂಭಿಕ ಬ್ಯಾಟರ್ ಪಥುಮ್ ನಿಸ್ಸಾಂಕ ಅವರ ಸ್ಫೋಟಕ ಶತಕ ಹಾಗೂ ಕುಸಾಲ್ ಪೆರೇರಾ ಅವರ ಅರ್ಧಶತಕದ ನೆರವಿನಿಂದ 202 ರನ್ ಗಳಿಸುವ ಮೂಲಕ ಪಂದ್ಯವನ್ನು ಟೈ ಮಾಡಿಕೊಂಡರು.

ADVERTISEMENT

ಸೂಪರ್‌ ಓವರ್‌ನಲ್ಲಿ ಆಗಿದ್ದೇನು?

ನಾಯಕ ಸೂರ್ಯಕುಮಾರ್ ಯಾದವ್ ಅವರು ಭಾರತ ಪರ ಸೂಪರ್ ಓವರ್‌ ಬೌಲಿಂಗ್ ಮಾಡಲು ವೇಗಿ ಅರ್ಷದೀಪ್ ಸಿಂಗ್ ಅವರಿಗೆ ನೀಡುತ್ತಾರೆ. ಇತ್ತ ಶ್ರೀಲಂಕಾ ಪರ ಕುಸಾಲ್ ಪೆರೇರಾ ಹಾಗೂ ದಸುನ್ ಶನಕ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬರುತ್ತಾರೆ.

ತಮ್ಮ ಕೋಟಾದ ಮೊದಲ ಎಸೆತ ಎದುರಿಸಿದ ಕುಸಾಲ್ ಪೆರೇರಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ರಿಂಕು ಸಿಂಗ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸುತ್ತಾರೆ. ನಂತರ ಬಂದ ಕಮಿಂದು ಮೆಂಡಿಸ್ 2ನೇ ಎಸೆತದಲ್ಲಿ ಒಂದು ರನ್ ಕದಿಯುವಲ್ಲಿ ಯಶಸ್ವಿಯಾಗುತ್ತಾರೆ. ಬಳಿಕ ಶನಕ ಮೂರನೇ ಎಸೆತದಲ್ಲಿ ಬೀಟನ್ ಆಗುತ್ತಾರೆ.

ನಾಲ್ಕನೇ ಎಸೆತ ವೈಡ್ ಆಗುವ ಮೂಲಕ ಶ್ರೀಲಂಕಾ ತಂಡದ ಸ್ಕೋರ್ 2 ರನ್‌ಗಳಿಗೆ ಏರಿಕೆಯಾಗುತ್ತದೆ. ಮತ್ತೆ ಎಸೆದ 4ನೇ ಎಸೆತವನ್ನು ಕೂಡ ಶನಕ ಡಾಟ್ ಮಾಡುತ್ತಾರೆ. ಆಗ ಅವರು ಒಂದು ರನ್ ಕದಿಯಲು ಯತ್ನಿಸಿ ರನ್ ಔಟ್ ಆಗುತ್ತಾರೆ. ಆದರೆ, ಕ್ರಿಕೆಟ್ ನಿಯಮದ ಅನುಸಾರ ಅವರು ನಾಟೌಟ್ ಎಂದು ತೀರ್ಪು ನೀಡಲಾಗುತ್ತದೆ.

ಜೀವದಾನ ಪಡೆದ ಅವರು 5ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಜಿತೇಶ್ ಶರ್ಮಾ ಅವರಿಗೆ ಕ್ಯಾಚ್ ಕೊಟ್ಟು ಔಟ್ ಆಗುತ್ತಾರೆ. ಆ ಮೂಲಕ ಸೂಪರ್ ಓವರ್‌ನಲ್ಲಿ ಭಾರತಕ್ಕೆ 3 ರನ್‌ಗಳ ಸುಲಭ ಟಾರ್ಗೆಟ್ ನೀಡುತ್ತಾರೆ.

ಭಾರತದ ಪರ ಸೂಪರ್ ಓವರ್‌ನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಶುಭಮನ್ ಗಿಲ್ ಬ್ಯಾಟರ್‌ಗಳಾಗಿ ಕ್ರೀಸ್‌ಗೆ ಆಗಮಿಸಿದರೆ, ಶ್ರೀಲಂಕಾ ಪರ ವನಿಂದು ಹಸರಂಗ ಬೌಲಿಂಗ್ ಮಾಡಲು ಬರುತ್ತಾರೆ.

ಹಸರಂಗ ಎಸೆದ ಮೊದಲ ಎಸೆತವನ್ನು ನಾಯಕ ಸೂರ್ಯಕುಮಾರ್ ಯಾದವ್ ಕಟ್ ಮಾಡುವ ಮೂಲಕ ಮೂರು ಓಟಗಳನ್ನು ಗಳಿಸಿಕೊಂಡು ಸೂಪರ್ ಓವರ್‌ನಲ್ಲಿ ಟೀಂ ಇಂಡಿಯಾ ಸುಲಭ ಜಯ ದಾಖಲಿಸುತ್ತದೆ. ಆ ಮೂಲಕ ಏಷ್ಯಾ ಕಪ್‌ನಲ್ಲಿ ತನ್ನ ಅಜೇಯ ಓಟ ಮುಂದುವರೆಸಿದ್ದು, ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.