ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಎದುರು ಅಭಿಷೇಕ್ ಶರ್ಮಾ ಬ್ಯಾಟಿಂಗ್ ವೈಖರಿ
ಪಿಟಿಐ ಚಿತ್ರ
ಭಾರತ ಕ್ರಿಕೆಟ್ ತಂಡವು ಈ ಬಾರಿಯ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಸುಲಭ ಜಯ ಸಾಧಿಸಿದೆ.
ದುಬೈನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಾಯಕನ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ಆಡಿದ ಬೌಲರ್‌ಗಳು, ಯುಎಇ ಬ್ಯಾಟರ್‌ಗಳನ್ನು ಕೇವಲ 57 ರನ್‌ಗೆ ಕಟ್ಟಿಹಾಕಿದರು.
'ಚೈನಾಮನ್' ಕುಲದೀಪ್ ಯಾದವ್ 2.1 ಓವರ್‌ಗಳಲ್ಲಿ 7 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಆಲ್‌ರೌಂಡರ್ ಶಿವಂ ದುಬೆ 4 ರನ್‌ಗೆ ಮೂರು ವಿಕೆಟ್ ಕಿತ್ತರು. ಜಸ್‌ಪ್ರೀತ್ ಬೂಮ್ರಾ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಒಂದೊಂದು ವಿಕೆಟ್ ಹಂಚಿಕೊಂಡರು. ಹೀಗಾಗಿ, ಯುಎಇ ಇನಿಂಗ್ಸ್ 13.1 ಓವರ್‌ಗಳಲ್ಲೇ ಮುಗಿಯಿತು.
ಈ ಗುರಿ ಟೀಂ ಇಂಡಿಯಾಗೆ ಸವಾಲೇ ಆಗಲಿಲ್ಲ. ಇನಿಂಗ್ಸ್‌ನ ಮೊದಲೆರಡು ಎಸೆತಗಳನ್ನು ಕ್ರಮವಾಗಿ ಸಿಕ್ಸರ್ ಹಾಗೂ ಬೌಂಡರಿಗಟ್ಟಿದ ಅಭಿಷೇಕ್ ಶರ್ಮಾ, ಬಿರುಸಿನ ಬ್ಯಾಟಿಂಗ್ ಆರಂಭಿಸಿದರು. ಅವರು 16 ಎಸೆತಗಳಲ್ಲಿ 30 ರನ್ ಬಾರಿಸಿ ಔಟಾದರು.
ಶುಭಮನ್ ಗಿಲ್ 9 ಎಸೆತಗಳಲ್ಲೇ 20 ರನ್ ಚಚ್ಚಿದರು. ನಾಯಕ ಸೂರ್ಯ 2 ಎಸೆತಗಳಲ್ಲಿ 7 ರನ್ ಗಳಿಸಿ ಜಯದ ಲೆಕ್ಕ ಚುಕ್ತಾ ಮಾಡಿದರು.
ನಾಲ್ಕನೇ ಬ್ಯಾಟರ್ ಶರ್ಮಾ
ಭಾರತದ ಪರ ಟಿ20 ಪಂದ್ಯದ ಇನಿಂಗ್ಸ್‌ವೊಂದರ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ ನಾಲ್ಕನೇ ಬ್ಯಾಟರ್ ಎಂಬ ಶ್ರೇಯಕ್ಕೆ ಅಭಿಷೇಕ್ ಶರ್ಮಾ ಭಾಜನರಾದರು.
ಈ ಸಾಧನೆ ಮಾಡಿದ ಮೊದಲ ಭಾರತೀಯ ರೋಹಿತ್ ಶರ್ಮಾ. ಅವರು ಇಂಗ್ಲೆಂಡ್ ವಿರುದ್ಧ 2021ರಲ್ಲಿ ನಡೆದ ಪಂದ್ಯದಲ್ಲಿ ಮೊದಲ ಎಸೆತವನ್ನೇ ಬೌಂಡರಿಯಾಚೆಗೆ ಬಾರಿಸಿದ್ದರು.
ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಭಾರತದ ಬ್ಯಾಟರ್‌ಗಳು
ರೋಹಿತ್ ಶರ್ಮಾ vs ಆದಿಲ್ ರಶೀದ್ (ಇಂಗ್ಲೆಂಡ್): 2021
ಯಶಸ್ವಿ ಜೈಸ್ವಾಲ್ vs ಸಿಕಂದರ್ ರಾಜಾ (ಜಿಂಬಾಬ್ವೆ): 2024
ಸಂಜು ಸ್ಯಾಮ್ಸನ್ vs ಜೋಫ್ರಾ ಆರ್ಚರ್ (ಇಂಗ್ಲೆಂಡ್): 2025
ಅಭಿಷೇಕ್ ಶರ್ಮಾ vs ದುಬೈ (ಯುಎಇ): 2025
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.