
ದುಬೈ: ಏಷ್ಯಾ ಕಪ್ 2025 ರ ಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ರೋಚಕ ಜಯ ದಾಖಲಿಸಿ ಚಾಂಪಿಯನ್ ಆಗಿದೆ. ಪಂದ್ಯದ ಬಳಿಕ ಪಾಕ್ ನಾಯಕ ಸಲ್ಮಾನ್ ಅಲಿ ಆಘಾ, ಹ್ಯಾಂಡ್‌ಶೇಕ್ ನೀಡದ ಭಾರತೀಯ ತಂಡದ ನೀತಿಯನ್ನು ಹಾಗೂ ನಾಯಕ ಸೂರ್ಯಕುಮಾರ್ ವರ್ತನೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಫೈನಲ್ ಬಳಿಕ ಮಾತನಾಡಿದ ಸಲ್ಮಾನ್ ಅಲಿ ಆಘಾ, ‘ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಖಾಸಗಿಯಾಗಿ ನಮಗೆ ಸಿಕ್ಕಾಗ ಅವರು ಕೈಕುಲುಕಿ ಸಾಮಾನ್ಯವಾಗಿ ಇರುತ್ತಿದ್ದರು. ಆದರೆ, ಸಾರ್ವಜನಿಕವಾಗಿ ಅಥವಾ ಮಾಧ್ಯಮದ ಮುಂದೆ ಬಂದಾಗ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳುತ್ತಿದ್ದರು. ಅವರು ತಮ್ಮ ಸ್ವಂತ ನಿರ್ಧಾರಕ್ಕಿಂತ ಯಾರದ್ದೋ ಸೂಚನೆಯಂತೆ ನಡೆದುಕೊಳ್ಳುತ್ತಿದ್ದರು ಎಂಬುದು ಸ್ಪಷ್ಟವಾಗಿತ್ತು‘ ಎಂದರು.
ಹ್ಯಾಂಡ್‌ಶೇಕ್ ನೀಡದಿರುವುದಕ್ಕೂ ಆಕ್ರೋಶ
ಹ್ಯಾಂಡ್‌ಶೇಕ್ ನೀಡದಿರುವುದು ಆಟಕ್ಕೆ ಅಗೌರವ ತೋರುವುದಾಗಿದೆ. ಕ್ರಿಕೆಟಿಗರನ್ನು ಮಾದರಿಯಾಗಿ ನೋಡುವ ಯುವಕರಲ್ಲಿ ಇದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದ ಉದಾಹರಣೆಯಾಗಿ ಉಳಿಯಲಿದೆ ಎಂದು ಅಭಿಪ್ರಾಯಪಟ್ಟರು.
‘ಈ ಟೂರ್ನಮೆಂಟ್‌ನಲ್ಲಿ ಭಾರತದ ವರ್ತನೆ ತುಂಬಾ ನಿರಾಶಾದಾಯಕವಾಗಿತ್ತು. ಅವರು ಕೈಕುಲುಕದೆ ನಮಗೆ ಅಗೌರವ ತೋರಿಸಿಲ್ಲ, ಬದಲಾಗಿ ಅವರು ಕ್ರಿಕೆಟ್‌ಗೆ ಅಗೌರವ ತೋರಿಸಿದ್ದಾರೆ. ಉತ್ತಮ ತಂಡಗಳು ಅವರು ಮಾಡಿದ್ದನ್ನು ಮಾದರಿಯಾಗಿ ತೆಗೆದುಕೊಳ್ಳಲ್ಲ‘ ಎಂದರು.
ಜವಾಬ್ದಾರಿಗಳನ್ನು ಪೂರೈಸುವುದು ಕ್ರೀಡೆಯ ಒಂದು ಭಾಗ
‘ನಮ್ಮ ಜವಾಬ್ದಾರಿಯನ್ನು ಪೂರೈಸಲು ನಾವು ಟ್ರೋಫಿ ಜೊತೆ ಪೋಸ್ ಕೊಡಲು ಹೋದೆವು. ನಾವು ಅಲ್ಲಿ ನಿಂತು ನಮ್ಮ ಪದಕಗಳನ್ನು ಸಹ ಪಡೆದುಕೊಂಡೆವು. ನಾನು ಕೆಟ್ಟ ಪದಗಳನ್ನು ಬಳಸಲು ಬಯಸುವುದಿಲ್ಲ ಆದರೆ ಅವರು ತುಂಬಾ ಅಗೌರವ ತೋರಿದ್ದಾರೆ‘ ಎಂದು ಆಘಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.