ADVERTISEMENT

ಕ್ಯಾಚ್ ಬಿಟ್ಟ ಪಾಕ್ ಆಟಗಾರರ ವಿಡಿಯೊ ಜೊತೆ ಸುರಕ್ಷತೆ ಸಂದೇಶ ಸಾರಿದ ದೆಹಲಿ ಪೊಲೀಸ್

Asia Cup final

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2022, 11:06 IST
Last Updated 12 ಸೆಪ್ಟೆಂಬರ್ 2022, 11:06 IST
   

ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಸೆಣಸಾಟ ನಡೆಸಿದ್ದವು. ಭಾನುವಾರ ನಡೆದ ಈ ಪಂದ್ಯದಲ್ಲಿ ಪಾಕ್‌ ಪಡೆಯನ್ನು 23 ರನ್‌ಗಳಿಂದ ಮಣಿಸಿದಲಂಕಾ, ಈ ಟೂರ್ನಿಯಲ್ಲಿ ಆರನೇ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಪಂದ್ಯದಲ್ಲಿ ಪಾಕಿಸ್ತಾನದ ಫೀಲ್ಡರ್‌ಗಳು ಶ್ರೀಲಂಕಾ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾನುಕ ರಾಜಪಕ್ಸ ಅವರ ಕ್ಯಾಚ್‌ ಬಿಟ್ಟ ವಿಡಿಯೊವೈರಲ್‌ ಆಗಿದೆ. ಇದೀಗ ದೆಹಲಿ ಪೊಲೀಸರು ರಸ್ತೆ ಸುರಕ್ಷತೆ ಸಂದೇಶ ಸಾರಲು ಅದೇ ವಿಡಿಯೊವನ್ನು ಬಳಸಿಕೊಂಡಿದ್ದಾರೆ.

ದುಬೈನಲ್ಲಿ ನಡೆದಪಂದ್ಯದಲ್ಲಿಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಂಕಾ ಪಡೆ 58 ರನ್‌ ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ರಾಜಪಕ್ಸ ಮತ್ತು ವನಿಂದು ಹಸರಂಗ ತಮ್ಮ ತಂಡಕ್ಕೆ ಆಸರೆಯಾಗಿದ್ದರು. ಈ ಜೋಡಿ 6ನೇ ವಿಕೆಟ್‌ಗೆ 58 ರನ್ ಕಲೆಹಾಕಿ ಚೇತರಿಕೆ ನೀಡಿತ್ತು.

ADVERTISEMENT

ಹಸರಂಗ (21 ಎಸೆತಗಳಲ್ಲಿ 36 ರನ್‌) ಔಟಾದ ನಂತರವೂ ಉತ್ತಮ ಆಟವಾಡಿದ ರಾಜಪಕ್ಸ, ಅಜೇಯ 71 ರನ್‌ ಸಿಡಿಸಿ ಮಿಂಚಿದ್ದರು. ಅವರ ಆಟದ ಬಲದಿಂದ ಲಂಕನ್ನರು ಪಾಕ್‌ಗೆ 171 ರನ್‌ಗಳ ಸವಾಲಿನ ಗುರಿ ನೀಡಿದ್ದರು. ಈ ಗುರಿ ಬೆನ್ನತ್ತಿದ ಬಾಬರ್‌ ಅಜಂ ಬಳಗ ನಿಗದಿತ 20 ಓವರ್‌ಗಳಲ್ಲಿ 147ರನ್ ಗಳಿಸಿ ಆಲೌಟ್‌ ಆಗಿತ್ತು.

ಕ್ಯಾಚ್‌ ಬಿಟ್ಟ ವಿಡಿಯೊ ಬಳಸಿಕೊಂಡ ದೆಹಲಿ ಪೊಲೀಸ್
ಶ್ರೀಲಂಕಾ ಬ್ಯಾಟಿಂಗ್‌ ವೇಳೆ ಮೊಹಮ್ಮದ್‌ ಹಸನೈನ್‌ 19ನೇ ಓವರ್‌ ಬೌಲಿಂಗ್ ಮಾಡಿದರು. ಕ್ರೀಸ್‌ನಲ್ಲಿದ್ದ ರಾಜಪಕ್ಸ ಈ ಓವರ್‌ನ ಕೊನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಬರದಲ್ಲಿ ಬಲವಾಗಿ ಬಾರಿಸಿದರು. ಚೆಂಡು ಡೀಪ್‌ ಮಿಟ್‌ವಿಕೆಟ್‌ನತ್ತ ಆಕಾಶದೆತ್ತರಕ್ಕೆ ಹಾರಿತ್ತು.

ಅದನ್ನು ಹಿಡಿಯಲು ಬಂದ ಆಸಿಫ್‌ ಅಲಿ ಮತ್ತು ಶಾದಬ್‌ ಖಾನ್‌ ಪರಸ್ಪರ ಡಿಕ್ಕಿ ಹೊಡೆದುಕೊಂಡು ಕ್ಯಾಚ್‌ ಕೈ ಚೆಲ್ಲಿದ್ದರು. ಚೆಂಡು ಬೌಂಡರಿ ಗೆರೆ ದಾಟಿ ಸಿಕ್ಸರ್‌ಗೆ ಹೋಯಿತು. ಒಂದು ವೇಳೆ ಆ ಎಸೆತದಲ್ಲಿ ರಾಜಪಕ್ಸ ಔಟಾಗಿದ್ದರೆ, 19 ಓವರ್‌ಗಳ ಅಂತ್ಯಕ್ಕೆ ಲಂಕಾ ತಂಡದ ಮೊತ್ತ 7 ವಿಕೆಟ್‌ಗೆ 149ರನ್ ಆಗಿರುತ್ತಿತ್ತು. ಕೊನೆಯ ಓವರ್‌ನಲ್ಲಿ ಒತ್ತಡ ಹಾಕಿ ಗೆಲುವಿನ ಗುರಿಯನ್ನು ಕಡಿಮೆ ಮಾಡಿಕೊಳ್ಳಬಹುದಿತ್ತು.

ರಾಜಪಕ್ಸ ಕೊನೆಯ ಓವರ್‌ನಲ್ಲಿ ಐದು ಎಸೆತಗಳನ್ನುಎದುರಿಸಿ ತಲಾ ಒಂದು ಸಿಕ್ಸರ್‌ ಮತ್ತು ಬೌಂಡರಿ ಸಹಿತ 14 ರನ್‌ ಬಾರಿಸಿದ್ದರು. ಇದು ದುಬಾರಿಯಾಯಿತು.

ಪಂದ್ಯದ ಬಳಿಕ ಈ ವಿಡಿಯೊ ವೈರಲ್‌ ಆಗಿದೆ.

ಆಟಗಾರರ ನಡುವಣ ಹೊಂದಾಣಿಕೆ ಮತ್ತು ಜಾಗರೂಕತೆಯ ಕೊರತೆಯನ್ನು ತೋರುವ ಈ ವಿಡಿಯೊವನ್ನು ಬಳಸಿಕೊಂಡಿರುವ ದೆಹಲಿ ಪೊಲೀಸ್‌, ರಸ್ತೆಯಲ್ಲಿ ಸಾಗುವಾಗ ಸದಾ ಎಚ್ಚರದಿಂದ ಇರಬೇಕು ಎಂದು ಕಿವಿಮಾತು ಹೇಳಿದೆ.

ದಿವಂಗತ ನಟ ರಾಜ್‌ ಕಪೂರ್‌ ನಟನೆಯ ಹಾಗೂ 1970ರಲ್ಲಿ ತೆರೆಕಂಡ ಬಾಲಿವುಡ್‌ ಸಿನಿಮಾ 'ಮೆರಾ ನಾಮ್‌ ಜೋಕರ್'ನ 'ಏ ಭಾಯ್‌, ಜರಾ ದೇಖ್‌ ಕೆ ಚಲೊ' (ಏ ಅಣ್ಣಾ, ಒಂಚೂರು ನೋಡಿಕೊಂಡು ಹೋಗು) ಹಾಡಿನ ಸಾಲನ್ನು ಉಲ್ಲೇಖಿಸಿ ಅಧಿಕೃತಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಇಂದು (ಸೋಮವಾರ)ಬೆಳಿಗ್ಗೆ ಹಂಚಿಕೆಯಾಗಿರುವ ಈ ವಿಡಿಯೊವನ್ನು ಇದುವರೆಗೆ ಐದೂವರೆ ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್‌ ಮಾಡಿದ್ದಾರೆ. 30 ಸಾವಿರಕ್ಕೂ ಅಧಿಕ ಜನರು ಮೆಚ್ಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.