ಏಷ್ಯಾಕಪ್ ಟ್ರೋಫಿ ಮಾದರಿಯೊಂದಿಗೆ ಭಾರತ ಹಾಗೂ ಪಾಕಿಸ್ತಾನ ಅಭಿಮಾನಿಗಳು
ಕೃಪೆ: ಪಿಟಿಐ
ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು 41 ವರ್ಷಗಳ ಇತಿಹಾಸವಿರುವ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.
ದುಬೈನಲ್ಲಿ ಗುರುವಾರ ನಡೆದ ಸೂಪರ್–4 ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾ ಪಡೆಯನ್ನು ಮಣಿಸುವ ಮೂಲಕ ಪಾಕ್ ತಂಡ, ಏಷ್ಯಾಕಪ್ ಟೂರ್ನಿಗಳಲ್ಲಿ 6ನೇ ಸಲ ಅಂತಿಮ ಸುತ್ತಿಗೆ ತಲುಪಿದ ಸಾಧನೆ ಮಾಡಿದೆ.
3ನೇ ಮುಖಾಮುಖಿ
ಪ್ರಸ್ತುತ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನಕ್ಕೆ ಇದು ಮೂರನೇ ಮುಖಾಮುಖಿಯಾಗಲಿದೆ. ಗುಂಪು ಹಂತ, ಸೂಪರ್–4 ಹಂತದ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತ್ತು. ಹೀಗಾಗಿ, ಫೈನಲ್‌ನಲ್ಲಿ ಗೆಲುವು ಯಾರಿಗೆ ಎಂಬುದು ಕುತೂಹಲ ಕೆರಳಿಸಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಟೂರ್ನಿಯಲ್ಲಿ ಆಡಿರುವ ಐದೂ ಪಂದ್ಯಗಳಲ್ಲಿ ಗೆದ್ದು, ಅಜೇಯಿಯಾಗಿ ಫೈನಲ್ ತಲುಪಿದೆ. 6 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಪಾಕ್ ಪಡೆ, ಭಾರತ ವಿರುದ್ಧದ ಎರಡು ಪಂದ್ಯಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಜಯಿಸಿ ಅಂತಿಮ ಸುತ್ತಿಗೆ ಲಗ್ಗೆ ಇಟ್ಟಿದೆ.
ಭಾರತ ಜಯದ ಓಟ ಮುಂದುವರಿಸುವ ಲೆಕ್ಕಾಚಾರದಲ್ಲಿದ್ದರೆ, ಪಾಕಿಸ್ತಾನ ತಿರುಗೇಟು ನೀಡುವ ಯೋಜನೆಯಲ್ಲಿದೆ.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸೆಪ್ಟೆಂಬರ್ 28ರಂದು ಫೈನಲ್ ನಡೆಯಲಿದೆ.
ಸದ್ಯ ನಡೆಯುತ್ತಿರುವ ಟೂರ್ನಿಯನ್ನು ಹೊರತುಪಡಿಸಿ ಏಷ್ಯಾಕಪ್‌ನ 16 ಆವೃತ್ತಿಗಳು ಈವರೆಗೆ ನಡೆದಿವೆ. ಅದರಲ್ಲಿ, ಭಾರತ 8 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಉಳಿದಂತೆ ಶ್ರೀಲಂಕಾ 6 ಸಲ, ಪಾಕಿಸ್ತಾನ ಎರಡು ಸಲ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಭಾರತ vs ಪಾಕಿಸ್ತಾನ: 6ನೇ ಫೈನಲ್
ಭಾರತ ಹಾಗೂ ಪಾಕಿಸ್ತಾನ ತಂಡಗಳು ಬಹುರಾಷ್ಟ್ರೀಯ ತಂಡಗಳ ಟೂರ್ನಿಗಳಲ್ಲಿ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು 6ನೇ ಬಾರಿ.
ಇದಕ್ಕೂ ಮೊದಲು 5 ಸಲ ಮುಖಾಮುಖಿಯಾದಾಗ ಭಾರತ ಎರಡು ಸಲ ಮತ್ತು ಪಾಕಿಸ್ತಾನ ಮೂರು ಬಾರಿ ಮೇಲುಗೈ ಸಾಧಿಸಿದೆ.
1985ರಲ್ಲಿ ವಿಶ್ವ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಮೊದಲ ಬಾರಿ ಸೆಣಸಾಟ ನಡೆಸಿದ್ದಾಗ ಭಾರತ ಗೆದ್ದಿತ್ತು. ಆದರೆ, ಕೊನೇ ಸಲ ಮುಖಾಮುಖಿಯಾಗಿದ್ದಾಗ ಅಂದರೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ಜಯದ ನಗೆ ಬೀರಿತ್ತು.
ಈ ಪಂದ್ಯಗಳೂ ಸೇರಿದಂತೆ ಐದೂ ಫೈನಲ್‌ಗಳ ಫಲಿತಾಂಶ ಏನಾಗಿತ್ತು ಎಂಬ ಮಾಹಿತಿ ಇಲ್ಲಿದೆ;
ವರ್ಲ್ಡ್ ಚಾಂಪಿಯನ್‌ಷಿಪ್: 1984
ಉಭಯ ತಂಡಗಳು ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಯ ಫೈನಲ್‌ವೊಂದರಲ್ಲಿ ಮೊದಲ ಸಲ ಮುಖಾಮುಖಿಯಾದದ್ದು 1985ರಲ್ಲಿ. ಮೆಲ್ಬರ್ನ್‌ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಷಿಪ್ ಏಕದಿನ ಟೂರ್ನಿಯ ಫೈನಲ್‌ನಲ್ಲಿ ಭಾರತ, 8 ವಿಕೆಟ್‌ಗಳ ಜಯ ಸಾಧಿಸಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 176 ರನ್ ಗಳಿಸಿತ್ತು. ಈ ಗುರಿಯನ್ನು ಭಾರತ 47.1 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿತ್ತು.
ಆಸ್ಟ್ರಲ್ – ಏಷ್ಯಾಕಪ್: 1986
ಯುಎಇಯಲ್ಲಿ ನಡೆದ ಈ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ, ಪಾಕಿಸ್ತಾನ ಪಾಲ್ಗೊಂಡಿದ್ದವು. ಫೈನಲ್‌ನಲ್ಲಿ ಭಾರತ ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 245 ರನ್ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಪಾಕ್, ಕೊನೇ ಎಸೆತದಲ್ಲಿ ಗೆಲುವಿನ ರನ್ ಹೊಡೆದಿತ್ತು. 9 ವಿಕೆಟ್‌ಗೆ 248 ರನ್ ಗಳಿಸಿ ಟ್ರೋಫಿ ಗೆದ್ದಿತ್ತು.
ಆಸ್ಟ್ರಲ್ – ಏಷ್ಯಾಕಪ್: 1994
ಈ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ, ಪಾಕಿಸ್ತಾನ ಜೊತೆಗೆ ಆತಿಥೇಯ ಯುಎಇ ಕೂಡ ಕಣಕ್ಕಿಳಿದಿತ್ತು. ಫೈನಲ್‌ನಲ್ಲಿ ಭಾರತದ ಎದುರು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್, 50 ಓವರ್‌ಗಳಲ್ಲಿ 6 ವಿಕೆಟ್‌ಗೆ 250 ರನ್ ಕಲೆಹಾಕಿತ್ತು. ಭಾರತ 47.4 ಓವರ್‌ಗಳಲ್ಲಿ 211 ರನ್ ಗಳಿಸಿ ಸರ್ವಪತನ ಕಂಡಿತ್ತು.
ಟಿ20 ವಿಶ್ವಕಪ್: 2007
ಟಿ20 ಕ್ರಿಕೆಟ್‌ನ ಚೊಚ್ಚಲ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಏಷ್ಯಾದ ಈ ತಂಡಗಳೇ ಪ್ರಶಸ್ತಿಗಾಗಿ ಸೆಣಸಾಟ ನಡೆಸಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 5 ವಿಕೆಟ್‌ಗೆ 157 ರನ್ ಕಲೆಹಾಕಿತ್ತು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕ್, ಇನ್ನೂ ಮೂರು ಎಸೆತಗಳಿರುವಂತೆಯೇ 152 ರನ್ ಗಳಿಸಿ ಆಲೌಟ್ ಆಗಿತ್ತು. ಇದರೊಂದಿಗೆ, ಭಾರತ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿತ್ತು.
ಚಾಂಪಿಯನ್ಸ್ ಟ್ರೋಫಿ: 2017
2017ರ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿದ್ದ ಭಾರತಕ್ಕೆ, ಫೈನಲ್‌ನಲ್ಲಿ ಆಘಾತವಾಗಿತ್ತು.
ಫಕರ್ ಜಮಾನ್ ಸಿಡಿಸಿದ ಅಮೋಘ ಶತಕದ (114 ರನ್) ನೆರವಿನಿಂದ ಪಾಕಿಸ್ತಾನ ತಂಡ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ಗೆ 338 ರನ್ ಪೇರಿಸಿತ್ತು. ಈ ಗುರಿ ಎದುರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಭಾರತ, ಕೇವಲ 158 ರನ್‌ಗಳಿಗೆ ಆಲೌಟ್ ಆಗಿತ್ತು. ಪಾಕ್ ಪಡೆ, 180 ರನ್‌ಗಳ ಬೃಹತ್ ಜಯದೊಂದಿಗೆ ಚಾಂಪಿಯನ್ ಎನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.