ADVERTISEMENT

Asia Cup Final: ಸ್ಪಿನ್ ಸುಳಿಯಲ್ಲಿ ಸಿಲುಕಿದ ಪಾಕ್; ಭಾರತಕ್ಕೆ 147 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2025, 16:23 IST
Last Updated 28 ಸೆಪ್ಟೆಂಬರ್ 2025, 16:23 IST
<div class="paragraphs"><p>ವಿಕೆಟ್‌ ಪಡೆದ ಸಂಭ್ರಮದಲ್ಲಿ ಭಾರತದ ಆಟಗಾರರು</p><p></p></div>

ವಿಕೆಟ್‌ ಪಡೆದ ಸಂಭ್ರಮದಲ್ಲಿ ಭಾರತದ ಆಟಗಾರರು

   

ಕೃಪೆ: X / @BCCI

ADVERTISEMENT

ದುಬೈ: ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆರಂಭಿಕ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದರೂ, ಭಾರತದ ಎದುರು ಬೃಹತ್‌ ಮೊತ್ತ ಕಲೆಹಾಕಲು ಪಾಕಿಸ್ತಾನ ತಂಡಕ್ಕೆ ಸಾಧ್ಯವಾಗಲಿಲ್ಲ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ಪಂದ್ಯದಲ್ಲಿ, ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟರ್‌ಗಳು ಸ್ಪಿನ್‌ ಸುಳಿಯಲ್ಲಿ ಸಿಲುಕಿದ ಪರಿಣಾಮ ದಿಢೀರ್‌ ಕುಸಿತ ಕಂಡ ಪಾಕ್‌ ಪಡೆ, 146 ರನ್‌ಗಳಿಗೆ ಸರ್ವಪತನ ಕಂಡಿದೆ.

ಟಾಸ್‌ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್‌ ಬೌಲಿಂಗ್‌ ಆಯ್ದುಕೊಂಡರು. ಪಾಕ್‌ ಪಡೆಯ ಆರಂಭಿಕ ಬ್ಯಾಟರ್‌ಗಳಾದ ಸಾಹಿಬ್‌ಝಾದಾ ಫರ್ಹಾನ್ ಮತ್ತು ಫಖರ್‌ ಜಮಾನ್‌ ಭಾರತದ ನಾಯಕನ ನಿರ್ಧಾರವನ್ನು ತಲೆಕೆಳಗಾಗಿಸುವಂತಹ ಆಟವಾಡಿದರು.

ಈ ಜೋಡಿ ಮೊದಲ ವಿಕೆಟ್‌ಗೆ 9.4 ಓವರ್‌ಗಳಲ್ಲಿ 84 ರನ್‌ ಕಲೆಹಾಕುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟಿತು. ಆದರೆ, ಆ ಅಡಿಪಾಯದ ಮೇಲೆ ಬೃಹತ್‌ ಮೊತ್ತ ಪೇರಿಸಲು ಉಳಿದವರಿಗೆ ಸಾಧ್ಯವಾಗಲಿಲ್ಲ.

'ಮಿಸ್ಟರಿ ಸ್ಪಿನ್ನರ್‌' ವರುಣ್‌ ಚಕ್ರವರ್ತಿ, ಆರಂಭಿಕರಿಬ್ಬರನ್ನೂ ಪೆವಿಲಿಯನ್‌ಗೆ ಅಟ್ಟಿದರು. 38 ಎಸೆತಗಳಲ್ಲಿ 57 ರನ್ ಗಳಿಸಿದ್ದ ಫರ್ಹಾನ್ ಅವರನ್ನು ಔಟ್‌ ಮಾಡುವುದರೊಂದಿಗೆ ಪಾಕ್‌ ಪಡೆಯ ಕುಸಿತ ಆರಂಭವಾಯಿತು. ಜಮಾನ್‌ 35 ಎಸೆತಗಳಲ್ಲಿ 46 ರನ್ ಗಳಿಸಿದರು. ಉಳಿದ ಬ್ಯಾಟರ್‌ಗಳು ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ.

ಹೀಗಾಗಿ, ಪಾಕ್‌ ಪಡೆ 19.1 ಓವರ್‌ಗಳಲ್ಲೇ ಆಲೌಟ್ ಆಯಿತು.

ಪಾಕ್‌ ಪಡೆಯ ಎಂಟು ವಿಕೆಟ್‌ಗಳು ಭಾರತದ ಸ್ಪಿನ್ನರ್‌ಗಳ ಪಾಲಾದವು.

'ಚೈನಾಮನ್‌' ಕುಲದೀಪ್‌ ಯಾದವ್‌ 4 ಓವರ್‌ಗಳಲ್ಲಿ 30 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ವರುಣ್‌ ಚಕ್ರವರ್ತಿ, ಅಕ್ಷರ್‌ ಪಟೇಲ್‌ ಹಾಗೂ ವೇಗಿ ಜಸ್‌ಪ್ರೀತ್‌ ಬೂಮ್ರಾ ಎರಡೆರಡು ವಿಕೆಟ್‌ ಹಂಚಿಕೊಂಡರು.

ಮೂರನೇ ಮುಖಾಮುಖಿ

ಪ್ರಸ್ತುತ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ 3ನೇ ಸಲ ಮುಖಾಮುಖಿಯಾಗಿವೆ. ಲೀಗ್‌ ಹಂತ ಹಾಗೂ ಸೂಪರ್‌–4 ಸುತ್ತಿನಲ್ಲಿ ಎದುರಾದ ಟೀಂ ಇಂಡಿಯಾ ಜಯ ಸಾಧಿಸಿತ್ತು.

ಆದರೆ, 41 ವರ್ಷಗಳ ಇತಿಹಾಸ ಹೊಂದಿರುವ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇತ್ತಂಡಗಳು ಫೈನಲ್‌ನಲ್ಲಿ ಪರಸ್ಪರ ಕಾದಾಡುತ್ತಿರುವುದು ಇದೇ ಮೊದಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.