ADVERTISEMENT

ಬಾಂಗ್ಲಾವನ್ನು ಸೋಲಿಸಿ ‘ನಾಗಿಣಿ‌ ಡ್ಯಾನ್ಸ್‌’ಗೆ ಪ್ರತೀಕಾರ ತೀರಿಸಿಕೊಂಡ ಶ್ರೀಲಂಕಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಸೆಪ್ಟೆಂಬರ್ 2022, 7:22 IST
Last Updated 2 ಸೆಪ್ಟೆಂಬರ್ 2022, 7:22 IST
   

ದುಬೈ: ನಾಲ್ಕು ವರ್ಷಗಳ ಹಿಂದೆ ಬಾಂಗ್ಲಾದೇಶ ತಂಡದ ಆಟಗಾರರಿಂದ ಎದುರಾಗಿದ್ದ 'ನಾಗಿಣಿ ಡ್ಯಾನ್ಸ್' ಅವಮಾನಕ್ಕೆ ಶ್ರೀಲಂಕಾ ತಂಡವು ಗುರುವಾರ ಅದೇ ಧಾಟಿಯಲ್ಲಿ ಸೇಡು ತೀರಿಸಿಕೊಂಡಿದೆ.

ದುಬೈನಲ್ಲಿ ಸಾಗುತ್ತಿರುವ ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ 'ಬಿ' ಗುಂಪಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದ ಬಳಿಕ ಶ್ರೀಲಂಕಾದ ಆಟಗಾರರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಈ ವೇಳೆ ಲಂಕಾ ಆಟಗಾರ ಚಮಿಕ ಕರುಣಾರತ್ನೆ ನಾಗಿಣಿ ಡ್ಯಾನ್ಸ್ ಮಾಡುವ ಮೂಲಕ ಬಾಂಗ್ಲಾದೇಶಕ್ಕೆ ತಿರುಗೇಟು ನೀಡಿದರು.

ಏನಿದು ಘಟನೆ?
2018ರಲ್ಲಿ ದ್ವೀಪ ರಾಷ್ಟ್ರದಲ್ಲಿ ಆಯೋಜನೆಗೊಂಡಿದ್ದ ನಿದಾಸ್ ಟ್ರೋಫಿ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದ ಬಾಂಗ್ಲಾದೇಶ ತಂಡದ ಆಟಗಾರರು ನಾಗಿಣಿ ಡ್ಯಾನ್ಸ್ ಮೂಲಕ ಗೇಲಿ ಮಾಡಿದ್ದರು.

ಟೂರ್ನಿಯಿಂದಲೇ ನಿರ್ಗಮಿಸಿದ್ದ ಸಿಂಹಳೀಯರಿಗೆ ತವರು ನಾಡಿನಲ್ಲೇ ತೀವ್ರ ಅವಮಾನ ಎದುರಾಗಿತ್ತು. ಬಳಿಕ ಫೈನಲ್‌ನಲ್ಲಿ ಶ್ರೀಲಂಕಾದ ಅಭಿಮಾನಿಗಳು ಭಾರತ ತಂಡವನ್ನು ಬೆಂಬಲಿಸಿದ್ದು ವಿಶೇಷವೆನಿಸಿತ್ತು.

ಪ್ರಸ್ತುತ ಏಷ್ಯಾ ಕಪ್ 2022 ಕ್ರಿಕೆಟ್ ಟೂರ್ನಿಯಿಂದಲೇ ಬಾಂಗ್ಲಾದೇಶ ತಂಡವನ್ನು ಲಂಕಾ ಹೊರದಬ್ಬಿದೆ. ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 183 ರನ್‌ ಗಳಿಸಿತು. ಬಳಿಕ ಲಂಕಾ ತಂಡ ಇನ್ನೆರಡು ಎಸೆತಗಳು ಬಾಕಿ ಉಳಿದಿರುವಂತೆಯೇ 19.2 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿತು.

ಕುಸಾಲ್‌ ಮೆಂಡಿಸ್‌ (60) ನಾಯಕ ದಸುನ್‌ ಶನಕ (45) ಹಾಗೂ ಕೊನೆಯಲ್ಲಿ ಅಸಿತ್‌ ಫರ್ನಾಂಡೊ (10*) ಲಂಕಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.