ADVERTISEMENT

AUS vs IND: ಮತ್ತೆ ಇನಿಂಗ್ಸ್ ಆರಂಭಿಸುವರೇ ರೋಹಿತ್? ರಾಹುಲ್‌ಗೆ ಯಾವ ಕ್ರಮಾಂಕ?

ಪಿಟಿಐ
Published 25 ಡಿಸೆಂಬರ್ 2024, 13:55 IST
Last Updated 25 ಡಿಸೆಂಬರ್ 2024, 13:55 IST
<div class="paragraphs"><p>ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌.ರಾಹುಲ್‌</p></div>

ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌.ರಾಹುಲ್‌

   

ಪಿಟಿಐ ಚಿತ್ರಗಳು

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದು, ಎರಡನೇಯದ್ದರಲ್ಲಿ ಮುಗ್ಗರಿಸಿದ್ದ ಭಾರತ ತಂಡ ನಂತರದ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಇದೀಗ, ಬಾಕ್ಸಿಂಗ್‌ ಡೇ ಪಂದ್ಯದಲ್ಲಿ ಆತಿಥೇಯರಿಗೆ ಸೋಲುಣಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ. ಆದರೆ, ನಾಯಕ ರೋಹಿತ್‌ ಶರ್ಮಾ ಅವರು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲಿದ್ದಾರೆ ಎಂಬುದು ಖಚಿತವಾಗಿಲ್ಲ.

ADVERTISEMENT

ರೋಹಿತ್‌, ವೈಯಕ್ತಿಕ ಕಾರಣದಿಂದಾಗಿ ಟೂರ್ನಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಹೀಗಾಗಿ, ಅವರ ಬದಲು ಕನ್ನಡಿಗ ಕೆ.ಎಲ್‌.ರಾಹುಲ್‌, ಯಶಸ್ವಿ ಜೈಸ್ವಾಲ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದರು. ಆ ಪಂದ್ಯದಲ್ಲಿ ತಂಡ ಮುನ್ನಡೆಸಿದ್ದ ವೇಗಿ ಜಸ್‌ಪ್ರೀತ್‌ ಬೂಮ್ರಾ ಜಯ ತಂದುಕೊಟ್ಟಿದ್ದರು.

ನಂತರದ ಪಂದ್ಯದಲ್ಲಿ ತಂಡಕ್ಕೆ ಮರಳಿದ್ದ ರೋಹಿತ್‌, ಇನಿಂಗ್ಸ್‌ ಆರಂಭಿಸುವ ಅವಕಾಶವನ್ನು ರಾಹುಲ್‌ಗೇ ನೀಡಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ್ದರು. ಆದರೆ, ಆ ಪಂದ್ಯದ ಎರಡು ಇನಿಂಗ್ಸ್‌ಗಳಿಂದ ಗಳಿಸಿದ್ದು ಕೇವಲ 9 (6 ಹಾಗೂ 3) ರನ್‌ ಮಾತ್ರ. ನಂತರದ ಪಂದ್ಯದಲ್ಲಿ 10 ರನ್‌ ಗಳಿಸಿದ್ದರಷ್ಟೇ.

ಹೀಗಾಗಿ, ಮುಂದಿನ ಪಂದ್ಯದಲ್ಲಿ ಮತ್ತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಮೂರು ಪಂದ್ಯಗಳ ಆರೂ ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿರುವ ರಾಹುಲ್‌, 47ರ ಸರಾಸರಿಯಲ್ಲಿ 235 ರನ್ ಗಳಿಸಿದ್ದಾರೆ. ಟೀಂ ಇಂಡಿಯಾ ಪರ ಅತ್ಯಧಿಕ ರನ್‌ ಗಳಿಸಿರುವುದು ಅವರೇ. ಜೈಸ್ವಾಲ್‌ (193 ರನ್‌) ನಂತರದ ಸ್ಥಾನದಲ್ಲಿದ್ದಾರೆ.

2019ರಲ್ಲಿ ಅಗ್ರ ಕ್ರಮಾಂಕಕ್ಕೆ
2019ರಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲಾರಂಭಿಸಿದ ರೋಹಿತ್‌, ನಂತರ ಮಧ್ಯಮ ಕ್ರಮಾಂಕದಲ್ಲಿ ಆಡಿಲ್ಲ. ಆದರೆ, ಆಸ್ಟ್ರೇಲಿಯಾ ಎದುರಿನ ಅಡಿಲೇಡ್‌ (2ನೇ) ಹಾಗೂ ಬ್ರಿಸ್ಬೇನ್‌ (3ನೇ) ಟೆಸ್ಟ್‌ಗಳಲ್ಲಿ ಸ್ವತಃ ಕೆಳ ಕ್ರಮಾಂಕದಲ್ಲಿ ಆಡಲು ನಿರ್ಧರಿಸಿದ್ದರು. ಆದರೆ, ಈ ನಡೆ ಯಶಸ್ಸು ತಂದುಕೊಡಲಿಲ್ಲ.

ಒಂದುವೇಳೆ ರೋಹಿತ್‌ ಇನಿಂಗ್ಸ್‌ ಆರಂಭಿಸಿದರೆ, ಇತರರ ಬ್ಯಾಟಿಂಗ್‌ ಕ್ರಮಾಂಕದಲ್ಲಿಯೂ ಬದಲಾವಣೆ ಮಾಡಬೇಕಾಗುತ್ತದೆ. ಅಗ್ರ ಕ್ರಮಾಂಕದಲ್ಲಿ ಭರವಸೆ ಮೂಡಿಸಿರುವ ರಾಹುಲ್, 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿಯುವ ಸಾಧ್ಯತೆ ಇದೆ. ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡುತ್ತಿರುವುದರಿಂದ, ಶುಭಮನ್‌ ಗಿಲ್‌ 5ನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ ಅಥವಾ ಧೃವ್‌ ಜುರೇಲ್‌ಗೆ ಅವಕಾಶ ಬಿಟ್ಟುಕೊಡಬೇಕಾಗುತ್ತದೆ. ಈ ಎಲ್ಲ ಅಂಶಗಳು ಕುತೂಹಲ ಮೂಡಿಸಿವೆ.

ಪಂದ್ಯದ ಮುನ್ನಾದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್‌ ಅವರು, ತಮ್ಮ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಹೆಚ್ಚು ಮಾತನಾಡಿಲ್ಲ.

ಆ ಕುರಿತ ಪ್ರಶ್ನೆಗೆ, 'ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಯಾರು, ಯಾವ ಕ್ರಮಾಂಕದಲ್ಲಿ ಆಡಬೇಕು ಎಂಬುದರ ಬಗ್ಗೆ ನಮ್ಮ ನಡುವೆಯೇ ಚರ್ಚೆಯಾಗುತ್ತದೆ. ಈ ಪ್ರಶ್ನೆಗೆ ಪ್ರತಿ ಪತ್ರಿಕಾಗೋಷ್ಠಿಯಲ್ಲೂ ಉತ್ತರಿಸಲಾಗದು' ಎಂದಷ್ಟೇ ಹೇಳಿದ್ದಾರೆ.

5ಕ್ಕೆ ಪಂದ್ಯ ಆರಂಭ
ಟೂರ್ನಿಯ 4ನೇ ಪಂದ್ಯವು ಮೆಲ್ಬರ್ನ್‌ನಲ್ಲಿ ನಾಳೆ ಬೆಳಿಗ್ಗೆ (ಭಾರತೀಯ ಕಾಲಮಾನ) 5ಕ್ಕೆ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.