ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ
ಚಿತ್ರ ಕೃಪೆ: @CallMeSheri1_
ಇಂದೋರ್: ಐಸಿಸಿ ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಭಾಗವಾಗಿರುವ ಇಬ್ಬರು ಆಟಗಾರ್ತಿಯರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ ಇಂದೋರ್‌ನ ಖಜ್ರಾನಾ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಶುಕ್ರವಾರ ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಬ್ ಇನ್‌ಸ್ಪೆಕ್ಟರ್ ನಿಧಿ ರಘುವಂಶಿ ಮಾತನಾಡಿ, ‘ಇಬ್ಬರು ಆಟಗಾರ್ತಿಯರು ತಮ್ಮ ಹೋಟೆಲ್‌ನಿಂದ ಹೊರಬಂದು ಕೆಫೆ ಕಡೆಗೆ ನಡೆದುಕೊಂಡು ಹೋಗುವಾಗ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಅವರನ್ನು ಹಿಂಬಾಲಿಸಿದ್ದಾನೆ. ಮಾತ್ರವಲ್ಲ, ಓರ್ವ ಆಟಗಾರ್ತಿಯನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದಾನೆ‘ ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ಆಟಗಾರ್ತಿಯರು ತಮ್ಮ ತಂಡದ ಭದ್ರತಾ ಅಧಿಕಾರಿಯಾಗಿರುವ ಡ್ಯಾನಿ ಸಿಮನ್ಸ್‌ಗೆ ತಿಳಿಸಿದ್ದು, ಕೂಡಲೇ ಡ್ಯಾನಿ ಅವರು ಸ್ಥಳೀಯ ಭದ್ರತಾ ಸಂಪರ್ಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ
ಮಾಹಿತಿ ಪಡೆದ ಸಹಾಯಕ ಪೊಲೀಸ್ ಆಯುಕ್ತರಾದ ಹಿಮಾನಿ ಮಿಶ್ರಾ, ಇಬ್ಬರು ಆಟಗಾರ್ತಿಯರನ್ನು ಭೇಟಿಯಾಗಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 74 (ಯಾವುದೇ ಮಹಿಳೆಯ ಘನತೆಗೆ ಧಕ್ಕೆ ತರುವ ಅಥವಾ ಅವಮಾನ ಮಾಡುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ ಮಾಡುವುದು) ಮತ್ತು 78 (ಹಿಂಬಾಲಿಸುವುದು) ಅಡಿಯಲ್ಲಿ ಎಂಐಜಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಬೈಕ್ ನಂಬರ್ ಆಧರಿಸಿ ‘ಆಟಗಾರ್ತಿಯರ ಜೊತೆ ಅನುಚಿತವಾಗಿ ವರ್ತಿಸಿದ ಅಕಿಲ್ ಖಾನ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯ ವಿರುದ್ಧ ಈ ಹಿಂದೆಯೂ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ದೂರುಗಳಿವೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.