ADVERTISEMENT

ವೈರತ್ವದ ಕ್ರಿಕೆಟ್ಟಾಟ; ಐಪಿಎಲ್‌ ಪ್ರಸಾರಕ್ಕೆ ನಮ್ಮ ನೆರೆ ರಾಷ್ಟ್ರದಲ್ಲಿ ನಿಷೇಧ

ಪಿಟಿಐ
Published 5 ಜನವರಿ 2026, 12:14 IST
Last Updated 5 ಜನವರಿ 2026, 12:14 IST
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಟ್ರೋಫಿ   –ಪಿಟಿಐ ಚಿತ್ರ
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಟ್ರೋಫಿ   –ಪಿಟಿಐ ಚಿತ್ರ   

ಢಾಕಾ: ಇಂಡಿಯನ್ ಪ್ರೀಮಿಯರ್ ಲೀಗ್‌ 2026ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (KKR) ತಂಡದ ಪರ ಆಡಲು ಆಯ್ಕೆಯಾಗಿದ್ದ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ 2026ರಿಂದ ವಜಾಗೊಳಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಭಾರತ ಹಾಗೂ ಬಾಂಗ್ಲಾದೇಶಗಳ ನಡುವಿನ ಸೌಹಾರ್ದತೆ ದಿನೇ ದಿನೇ ಹದಗೆಡುತ್ತಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದ್ದು, ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಾತ್ರವಲ್ಲ, ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್ ತಂಡದಿಂದ ಕೈಬಿಡಬೇಕೆಂದು ಆಗ್ರಹ ಕೇಳಿಬಂದಿತ್ತು. ಬಳಿಕ ಬಿಸಿಸಿಐ ಆದೇಶದ ಅನ್ವಯ ಅವರನ್ನು ಕೆಕೆಆರ್ ಫ್ರಾಂಚೈಸಿ ತಂಡದಿಂದ ಕೈಬಿಟ್ಟಿದೆ.

‘ಕೋಲ್ಕತ್ತ ನೈಟ್ ರೈಡರ್ಸ್‌ ತಂಡದಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು 2026ರ ಐಪಿಎಲ್ ಆವೃತ್ತಿಯಿಂದ ವಜಾಗೊಳಿಸಲು ಬಿಸಿಸಿಐ ಯಾವುದೇ ‘ತಾರ್ಕಿಕ ಕಾರಣ’ ನೀಡಿಲ್ಲ. ಹಾಗಾಗಿ ಮುಂದಿನ ಆದೇಶದವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯಗಳ ಹಾಗೂ ಕಾರ್ಯಕ್ರಮದ ಪ್ರಸಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿರುವುದಕ್ಕೆ ಬಿಸಿಸಿಐ ಯಾವುದೇ ತಾರ್ಕಿಕ ಕಾರಣ ನೀಡಿಲ್ಲ. ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರದಿಂದ ಬಾಂಗ್ಲಾದೇಶದ ಜನರಿಗೆ ಬೇಸರ ಮತ್ತು ನೋವುಂಟು ಮಾಡಿದೆ’ ಎಂದು ಸರ್ಕಾರಿ ಅಧಿಸೂಚನೆಯಲ್ಲಿ ತಿಳಿಸಿದೆ.

‘ಮುಂದಿನ ಆದೇಶ ನೀಡುವವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಎಲ್ಲಾ ಪಂದ್ಯಗಳು ಮತ್ತು ಕಾರ್ಯಕ್ರಮಗಳ ನೇರ ಪ್ರಸಾರ ಅಥವಾ ಪ್ರಸಾರವನ್ನು ಮಾಡುವುದಿಲ್ಲ. ಈ ಆದೇಶವನ್ನು ಇಲಾಖೆಯ ಸೂಕ್ತ ಅನುಮೋದನೆಯೊಂದಿಗೆ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಹೊರಡಿಸಲಾಗಿದೆ’ ಎಂದು ಸಹಾಯಕ ಕಾರ್ಯದರ್ಶಿ ಫಿರೋಜ್ ಖಾನ್ ಪ್ರಕಟಣೆ ಹೊರಡಿಸಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ ಆಡಲು ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಮಾತ್ರವಲ್ಲ, ಲೀಗ್ ಮಾದರಿಯ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾಗೆ ವರ್ಗಾಯಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯನ್ನು ವಿನಂತಿಸಿದೆ. ಇದಾದ ಒಂದು ದಿನದ ಬಳಿಕ ಬಾಂಗ್ಲಾದಲ್ಲಿ ಐಪಿಎಲ್ ಪ್ರಸಾರ ನಿಷೇಧಿಸಲು ಕ್ರಮ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.