ಢಾಕಾ: ರಾಷ್ಟ್ರೀಯ ತಂಡದ ಸೀನಿಯರ್ ಆಟಗಾರರ ಬಂಡಾಯಕ್ಕೆ ಮಣಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು (ಬಿಸಿಬಿ) ತನ್ನ ನಿರ್ದೇಶಕ ಎಂ.ನಜ್ಮುಲ್ ಇಸ್ಲಾಂ ಅವರನ್ನು ಹಣಕಾಸು ಸಮಿತಿ ಅಧ್ಯಕ್ಷ ಸ್ಥಾನದಿಂದ ಗುರುವಾರ ವಜಾ ಮಾಡಿದೆ. ನಜ್ಮುಲ್ ಅವರು ಆಟಗಾರರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು.
ನಜ್ಮುಲ್ ಅವರನ್ನು ವಜಾ ಮಾಡಬೇಕೆಂದು ಆಟಗಾರರು ಪಟ್ಟುಹಿಡಿದಿದ್ದು, ಗುರುವಾರ ನೌಖಾಲಿ ಎಕ್ಸ್‌ಪ್ರೆಸ್– ಛಟ್ಟೊಗ್ರಾಂ ರಾಯಲ್ಸ್ ತಂಡಗಳ ನಡುವಣ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯ ಆಡಲು ಆಟಗಾರರು ನಿರಾಕರಿಸಿದ್ದರು. ಟಾಸ್ ಕೂಡ ಸಾಧ್ಯವಾಗಲಿಲ್ಲ.
ಆಟಗಾರರು ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದ ಬಿಸಿಬಿ ಕೊನೆಗೂ ನಜ್ಮುಲ್ ಅವರನ್ನು ವಜಾ ಮಾಡಿತು. ಆದರೆ ಅವರು ನಿರ್ದೇಶಕರಾಗಿ ಉಳಿಯುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಹಣಕಾಸು ಸಮಿತಿಗೆ ಬಿಸಿಬಿ ಅಧ್ಯಕ್ಷರೇ ಹಂಗಾಮಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಸಿಬಿ ತಿಳಿಸಿದೆ.
ಭದ್ರತಾ ಕಳವಳಗಳ ಕಾರಣ, ಮುಂದಿನ ತಿಂಗಳ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಆಡಲು ಬಾಂಗ್ಲಾದೇಶ ತಂಡ ಭಾರತಕ್ಕೆ ಪಯಣಿಸುವುದಿಲ್ಲ ಎಂದು ನಜ್ಮುಲ್ ಪುನುರುಚ್ಚರಿಸಿದ್ದರು. ಜೊತೆಗೆ, ತಂಡ ಹಿಂದೆಸರಿದರೆ ಸಂಭಾವನೆಗೆ ಸಂಬಂಧಿಸಿ ಆಟಗಾರರು ವ್ಯಕ್ತಪಡಿಸಿದ ಕಳವಳವನ್ನೂ ಅವರು ತಿರಸ್ಕರಿಸಿದ್ದರು. ತಂಡವು ಒಂದೂ ಐಸಿಸಿ ಪ್ರಶಸ್ತಿ ಗೆಲ್ಲದಿರುವುದನ್ನು ಅವರು ಉಲ್ಲೇಖಿಸಿದ್ದು ಆಟಗಾರರ ಆಕ್ರೋಶಕ್ಕೆ ಕಾರಣವಾಯಿತು.
ನಜ್ಮುಲ್ ಅವರಿಗೆ ಷೋಕಾಸ್ ನೋಟಿಸ್ ನೀಡಿದ್ದ ಮಂಡಳಿಯು, ಅವರ ಆಕ್ಷೇಪಾರ್ಹ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿತ್ತು.
‘ಈ ರೀತಿಯ ಹೇಳಿಕೆಗಳಿಂದ ಆಟಗಾರರಿಗೆ ಆದ ನೋವನ್ನು ಬಿಸಿಬಿ ಅರ್ಥಮಾಡಿಕೊಳ್ಳುತ್ತದೆ. ಕ್ರಿಕೆಟ್ ಆಟದ ಬೆಳವಣಿಗೆಗೆ ಕಾರಣವಾಗುವ ಆಟಗಾರರನ್ನು ಮತ್ತು ಮೌಲ್ಯಗಳನ್ನು ಗೌರವಿಸುತ್ತದೆ’ ಎಂದು ಬಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಬಿಸಿಸಿಐ ಸೂಚನೆಯನ್ನು ಅನುಸರಿಸಿ ಐಪಿಎಲ್‌ನಲ್ಲಿ ಆಡುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದಿಂದ ತನ್ನ ದೇಶದ ಬೌಲರ್ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈಬಿಟ್ಟ ಬೆನ್ನಲ್ಲೇ, ಬಾಂಗ್ಲಾದೇಶವು ಭದ್ರತೆಯ ಆತಂಕ ವ್ಯಕ್ತಪಡಿಸಿ ತನ್ನ ತಂಡವನ್ನು ಟಿ20 ವಿಶ್ವಕಪ್‌ನಲ್ಲಿ ಆಡಲು ಭಾರತಕ್ಕೆ ಕಳುಹಿಸುವುದಕ್ಕೆ ಹಿಂದೇಟು ಹಾಕಿತು. ಮುಸ್ತಫಿಝುರ್ ಅವರನ್ನು ಕೈಬಿಡಲು ‘ಸುತ್ತಮುತ್ತಲಿನ ವಿದ್ಯಮಾನಗಳು’ ಕಾರಣ ಎಂದು ಬಿಸಿಸಿಐ ಹೇಳಿದ್ದು, ನಿರ್ದಿಷ್ಟ ಕಾರಣ ತಿಳಿಸಿರಲಿಲ್ಲ.
ಈ ಟೂರ್ನಿಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಿವೆ. ಬಾಂಗ್ಲಾದೇಶದ ಪಂದ್ಯಗಳನ್ನು ಲಂಕಾಕ್ಕೆ ಸ್ಥಳಾಂತರಿಸಬೇಕು ಎಂದು ಬಿಸಿಬಿ ಆಗ್ರಹಿಸುತ್ತಿದೆ. ಐಸಿಸಿ ಇದುವರಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.
ಮೂರು ದಿನಗಳ ಹಿಂದೆ ನಜ್ಮುಲ್ ಅವರು ಮಾಜಿ ನಾಯಕ ಹಾಗೂ ಬಾಂಗ್ಲಾದೇಶದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ತಮೀಮ್ ಇಕ್ಬಾಲ್ ಅವರನ್ನು ‘ಭಾರತದ ಏಜಂಟ್’ ಎಂದು ಲೇವಡಿ ಮಾಡಿದ್ದರು. ಭಾರತದೊಂದಿಗೆ ಆಡುವ ಸಂಬಂಧ ನಿರ್ಧಾರವನ್ನು ಕೈಗೊಳ್ಳುವಾಗ ಸಂಯಮ ಕಾಯ್ದುಕೊಳ್ಳುವಂತೆ ತಮೀಮ್ ಹೇಳಿದ್ದರು. ತಕ್ಷಣಕ್ಕೆ ಕೈಗೊಳ್ಳುವ ನಿರ್ಧಾರವು ಮುಂದಿನ 10 ವರ್ಷಗಳವರೆಗೆ ತಂಡದ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದರು. ನಜ್ಮುಲ್ ಅವರ ಈ ಹೇಳಿಕೆಗೂ ಸಿಡಬ್ಲ್ಯುಎಬಿ ಆಕ್ಷೇಪ ವ್ಯಕ್ತಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.