ADVERTISEMENT

ವಿರಾಟ್‌ ಕೊಹ್ಲಿ ಮೇಲೆ ಒತ್ತಡ ಹೇರಿ ನಾಯಕತ್ವದಿಂದ ಕೆಳಗಿಳಿಸಲಾಗಿದೆ: ಅಖ್ತರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜನವರಿ 2022, 5:49 IST
Last Updated 23 ಜನವರಿ 2022, 5:49 IST
ವಿರಾಟ್‌ ಕೊಹ್ಲಿ ಮತ್ತು ಶೋಯೆಬ್‌ ಅಖ್ತರ್‌
ವಿರಾಟ್‌ ಕೊಹ್ಲಿ ಮತ್ತು ಶೋಯೆಬ್‌ ಅಖ್ತರ್‌   

ನವದೆಹಲಿ: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕತ್ವ ತೊರೆಯಲು ವಿರಾಟ್‌ ಕೊಹ್ಲಿ ಅವರ ಮೇಲೆ ಒತ್ತಡ ಹೇರಲಾಗಿತ್ತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್‌ ಅಖ್ತರ್‌ ಹೇಳಿದ್ದಾರೆ.

ಸುದ್ದಿ ಸಂಸ್ಥೆ ‘ಎಎನ್‌ಐ’ ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅಖ್ತರ್, ‘ನಾಯಕತ್ವ ತೊರೆಯಲು ಕೊಹ್ಲಿಗೆ ಇಷ್ಟವಿರಲಿಲ್ಲ. ಬಲವಂತದಿಂದ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಇದು ಕೊಹ್ಲಿಗೆ ಒಳ್ಳೆಯ ಸಮಯವಲ್ಲ. ಆದರೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ. ಕೊಹ್ಲಿ ಶ್ರೇಷ್ಠ ವ್ಯಕ್ತಿ ಮತ್ತು ಉತ್ತಮ ಕ್ರಿಕೆಟಿಗ. ವಿಶ್ವದ ಇತರ ಆಟಗಾರರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ’ ಎಂದು ಅಖ್ತರ್‌ ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಬ್ಬರ ನಾಯಕತ್ವದಲ್ಲೂ ಕೊಹ್ಲಿ ಆಟಗಾರರಾಗಿ ಮುಂದುವರಿಯುತ್ತಾರೆ. ಆಟದಲ್ಲಿ ಫಾರ್ಮ್‌ನಲ್ಲಿದವರು ಕೂಡ ಕೆಲವೊಮ್ಮೆ ತೊಂದರೆ ಅನುಭವಿಸಬೇಕಾಗುತ್ತದೆ. ಈಗಿನ ಸಂದರ್ಭದ ಕುರಿತು ಯಾರ ಬಗ್ಗೆಯೂ ಕಹಿ ಭಾವನೆ ಹೊಂದದೇ, ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಮುಂದೆ ಸಾಗಿ. ಎಲ್ಲರನ್ನೂ ಕ್ಷಮಿಸಿ, ಮುಂದೆ ಸಾಗಿರಿ ಎಂದು ಅಖ್ತರ್‌ ಸಲಹೆ ನೀಡಿದ್ದಾರೆ.

ADVERTISEMENT

ಭಾರತದ ಮುಂದಿನ ಟೆಸ್ಟ್ ನಾಯಕನ ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಬಿಸಿಸಿಐ ಈ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸಿದ್ದೇನೆ’ ಎಂದು ಹೇಳಿದರು.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ಪುರುಷರ ಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಅ.23ರಂದು ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ (ಎಂಸಿಜಿ) ನಡೆಯಲಿರುವ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ.

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ 16ರಿಂದ ಟೂರ್ನಿಯ ಪಂದ್ಯಗಳು ಅರಂಭವಾಗಲಿದ್ದು, ನವೆಂಬರ್‌ 10ರಂದು ಫೈನಲ್‌ ನಡೆಯಲಿದೆ.

‘ನಮ್ಮ ತಂಡ (ಪಾಕಿಸ್ತಾನ) ಮೆಲ್ಬರ್ನ್‌ನಲ್ಲಿ ಭಾರತವನ್ನು ಮತ್ತೊಮ್ಮೆ ಸೋಲಿಸಲಿದೆ. ಟಿ–20 ಕ್ರಿಕೆಟ್‌ನಲ್ಲಿ ಭಾರತಕ್ಕಿಂತ ಪಾಕಿಸ್ತಾನ ಉತ್ತಮ ತಂಡವಾಗಿದೆ. ಕ್ರಿಕೆಟ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾದಾಗಲೆಲ್ಲಾ ಭಾರತೀಯ ಮಾಧ್ಯಮಗಳು ತಮ್ಮ ತಂಡದ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುತ್ತವೆ. ಆದರೂ ಈ ಬಾರಿ ಭಾರತಕ್ಕೆ ಸೋಲು ಖಚಿತ’ ಎಂದು ಅಖ್ತರ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ದಾಖಲಿಸುವ ಸುವರ್ಣಾವಕಾಶವನ್ನು ಕಳೆದುಕೊಂಡ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ವಿರಾಟ್‌ ಕೊಹ್ಲಿ ಅವರು 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. 40 ಪಂದ್ಯಗಳಲ್ಲಿ ಭಾರತ ತಂಡವು ಗೆಲುವು ಸಾಧಿಸಿತ್ತು. 17 ಟೆಸ್ಟ್‌ಗಳಲ್ಲಿ ಪರಾಭವಗೊಂಡಿದ್ದು, 11 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದ್ದವು.

33 ವರ್ಷದ ವಿರಾಟ್‌ ಕೊಹ್ಲಿ ಎರಡು ತಿಂಗಳ ಹಿಂದೆ ಟಿ–20 ಹಾಗೂ ಏಕದಿನ ಕ್ರಿಕೆಟ್‌ನ ನಾಯಕತ್ವವನ್ನು ತ್ಯಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.