ADVERTISEMENT

ಮೊದಲು ರಿಜ್ವಾನ್, ಈಗ ಬಾಬರ್: ಪಾಕಿಸ್ತಾನ ಆಟಗಾರರಿಗೆ ಆಸ್ಟ್ರೇಲಿಯಾದಲ್ಲಿ ಅವಮಾನ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2026, 10:35 IST
Last Updated 18 ಜನವರಿ 2026, 10:35 IST
<div class="paragraphs"><p>ಮೊಹಮ್ಮದ್‌ ರಿಜ್ವಾನ್‌ ಹಾಗೂ ಬಾಬರ್‌ ಅಜಂ</p></div>

ಮೊಹಮ್ಮದ್‌ ರಿಜ್ವಾನ್‌ ಹಾಗೂ ಬಾಬರ್‌ ಅಜಂ

   

ಚಿತ್ರ ಕೃಪೆ: X

ಪಾಕಿಸ್ತಾನ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರೆನಿಸಿರುವ ಬಾಬರ್‌ ಅಜಂ ಅವರಿಗೆ ಬಿಗ್ ಬ್ಯಾಷ್ ಟಿ20 ಕ್ರಿಕೆಟ್‌ ಲೀಗ್ ವೇಳೆ ಭಾರಿ ಮುಖಭಂಗವಾಗಿದೆ.

ADVERTISEMENT

ಲೀಗ್‌ನಲ್ಲಿ 'ಸಿಡ್ನಿ ಸಿಕ್ಸರ್ಸ್‌' ಪರ ಆಡುತ್ತಿರುವ ಬಾಬರ್‌ ಅವರಿಗೆ, 'ಸಿಡ್ನಿ ಥಂಡರ್ಸ್‌' ವಿರುದ್ಧ ಶುಕ್ರವಾರ ನಡೆದ ಪಂದ್ಯದ ವೇಳೆ, ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಮಾಡಿದ ಎಡವಟ್ಟಿನಿಂದ ಮುಜುಗರ ಉಂಟಾಗಿದೆ.

ಅಂಥದ್ದೇನಾಯಿತು?
ಪಂದ್ಯದಲ್ಲಿ ಟಾಸ್‌ ಗೆದ್ದ ಸಿಕ್ಸರ್ಸ್‌ ನಾಯಕ ಮೊಯಿಸೆಸ್ ಹೆನ್ರಿಕ್ಸ್‌, ಬೌಲಿಂಗ್‌ ಆಯ್ದುಕೊಂಡಿದ್ದರು. ಅದರಂತೆ ಬ್ಯಾಟಿಂಗ್‌ ಆರಂಭಿಸಿದ ಥಂಡರ್ಸ್‌, ನಾಯಕ ಡೇವಿಡ್‌ ವಾರ್ನರ್‌ (110) ಶತಕದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 189 ರನ್‌ ಗಳಿಸಿತ್ತು.

ಸವಾಲಿನ ಗುರಿ ಬೆನ್ನತ್ತಿದ ಸಿಡ್ನಿಗೆ ಬಾಬರ್‌ ಹಾಗೂ ಸ್ಮಿತ್‌ ಜೋಡಿ, ಶತಕದ ಜೊತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿತ್ತು.

ಕ್ರಿಸ್‌ ಗ್ರೀನ್‌ ಹಾಕಿದ ಇನಿಂಗ್ಸ್‌ನ 11ನೇ ಓವರ್‌ನ ಮೊದಲೆರಡು ಎಸೆತಗಳಲ್ಲಿ ಬಾಬರ್‌ ಹಾಗೂ ಸ್ಮಿತ್‌, ತಲಾ ಒಂದೊಂದು ರನ್‌ ಗಳಿಸಿದ್ದರು. ನಂತರದ ಮೂರು ಎಸೆತಗಳಲ್ಲಿ ಸೊನ್ನೆ ಸುತ್ತಿದ ಬಾಬರ್‌, ಕೊನೇ ಎಸೆತವನ್ನು ಲಾಂಗ್‌ ಆನ್‌ನತ್ತ ಬಾರಿಸಿದರು. ಸುಲಭವಾಗಿ ಒಂದು ರನ್‌ ಓಡಬಹುದಿತ್ತು. ಆದರೆ, ಸ್ಮಿತ್‌ ಮನಸ್ಸು ಮಾಡಲಿಲ್ಲ. ರನ್‌ ಓಡುವುದು ಬೇಡ ಎಂದು ಶುರುವಿನಲ್ಲೇ ಸನ್ನೆ ಮಾಡಿ ತಡೆದರು. ಇದರಿಂದ ಬಾಬರ್ ಬೇಸರ ವ್ಯಕ್ತಪಡಿಸಿದರು.

ಬಾಬರ್‌ಗೆ ಸ್ಟ್ರೈಕ್‌ ನೀಡಲು ನಿರಾಕರಿಸಿದ್ದಕ್ಕೆ ಸ್ಮಿತ್‌ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಯೂ ವ್ಯಕ್ತವಾಗಿದೆ.

ಕಾರಣ ತಿಳಿಸಿದ ಸ್ಮಿತ್‌
11ನೇ ಓವರ್‌ನ ಕೊನೆಯಲ್ಲಿ ರನ್‌ ಓಡಲು ನಿರಾಕರಿಸಿದ್ದು ಏಕೆ ಎಂಬುದಕ್ಕೆ ಸ್ಮಿತ್ ಕಾರಣ ನೀಡಿದ್ದಾರೆ.

ಪಂದ್ಯದ ಬಳಿಕ ಹೇಳಿಕೆ ನೀಡಿರುವ ಸ್ಮಿತ್‌, 10 ಓವರ್‌ಗಳ ಬಳಿಕ ನಾಯಕ ಹಾಗೂ ಕೋಚ್‌ ಜೊತೆ ಮಾತನಾಡಿದೆವು. ವೇಗವಾಗಿ ರನ್‌ ಗಳಿಸಲು ಸಲಹೆ ನೀಡಿದರು. ಅದರಂತೆ 12ನೇ ಓವರ್‌ ಪೂರ್ತಿ ಆಡಲು ನಿರ್ಧರಿಸಿ, 11ನೇ ಓವರ್‌ನ ಕೊನೆಯಲ್ಲಿ ಒಂಟಿ ರನ್‌ ಓಡಲಿಲ್ಲ. ಮುಂದಿನ ಓವರ್‌ನಲ್ಲಿ ಯೋಜನೆಗೆ ತಕ್ಕಂತೆ ಆಡಿದೆವು ಎಂದು ತಿಳಿಸಿದ್ದಾರೆ.

ರಿಯಾನ್‌ ಹೆಡ್ಲಿ ಹಾಕಿದ 12ನೇ ಓವರ್‌ನ ಮೊದಲ ಐದು ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ ಒಂದು ಬೌಂಡರಿ ಬಾರಿಸಿದ ಸ್ಮಿತ್, ಬರೋಬ್ಬರಿ 32 ರನ್‌ ಚಚ್ಚುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ಈ ಪಂದ್ಯದಲ್ಲಿ ಒಟ್ಟು 42 ಎಸೆತಗಳನ್ನು ಎದುರಿಸಿದ ಸ್ಮಿತ್‌, 9 ಸಿಕ್ಸರ್‌ ಹಾಗೂ 5 ಬೌಂಡರಿ ಸಹಿತ 100 ರನ್‌ ಗಳಿಸಿದರು. ಬಾಬರ್‌ 39 ಎಸೆತಗಳಲ್ಲಿ 47 ರನ್‌ ಗಳಿಸಿದ್ದಾಗ ಔಟಾದರು. ಇವರಿಬ್ಬರ ಆಟದ ಬಲದಿಂದ ಸಿಕ್ಸರ್ಸ್‌ ಪಡೆ 17.2 ಓವರ್‌ಗಳಲ್ಲೇ 191 ರನ್‌ ಗಳಿಸಿ ಜಯದ ನಗೆ ಬೀರಿತು.

ಕ್ರೀಸ್‌ನಿಂದ ಹಿಂತಿರುಗಿದ್ದ ರಿಜ್ವಾನ್‌
ಪಾಕಿಸ್ತಾನ ಕ್ರಿಕೆಟ್‌ ತಂಡದಲ್ಲಿ ಬಾಬರ್‌ ಜೊತೆ ಆಡುವ ಮೊಹಮ್ಮದ್‌ ರಿಜ್ವಾನ್‌ ಅವರಿಗೂ ಇದೇ ರೀತಿ ಆಗಿತ್ತು.‌

ರಿಜ್ವಾನ್‌, ಮೆಲ್ಬರ್ನ್ ರೆನೆಗೇಡ್ಸ್ ಪರ ಆಡುತ್ತಿದ್ದಾರೆ. ಸಿಡ್ನಿ ಥಂಡರ್‌ ವಿರುದ್ಧ ಜನವರಿ 12ರಂದು ನಡೆದ ಪಂದ್ಯದ ವೇಳೆ ನಿಧಾನಗತಿಯ ಬ್ಯಾಟಿಂಗ್‌ ನಡೆಸಿದ್ದ ಅವರನ್ನು, ಪೆವಿಲಿಯನ್‌ಗೆ ವಾಪಸ್‌ ಕರೆಸಿಕೊಳ್ಳಲಾಗಿತ್ತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಮೆಲ್ಬರ್ನ್‌, 18 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್‌ಗೆ 154 ರನ್‌ ಗಳಿಸಿತ್ತು. ಇನಿಂಗ್ಸ್‌ ಮುಕ್ತಾಯ ಸಮೀಪಿಸುತ್ತಿದ್ದರೂ ವೇಗವಾಗಿ ರನ್‌ ಗಳಿಸಲು ರಿಜ್ವಾನ್‌ ಪರದಾಡಿದ್ದರು. 23 ಎಸೆತಗಳಲ್ಲಿ ಅಷ್ಟೇ ರನ್‌ ಗಳಿಸಿದ್ದ ಅವರು 'ರಿಟೈರ್ಡ್ ಔಟ್' ಹೆಸರಲ್ಲಿ ಕ್ರಿಸ್‌ನಿಂದ ಹೊರನಡೆದಿದ್ದರು. ಅವರ ಬದಲು, ವಿಲ್‌ ಸುದರ್ಲ್ಯಾಂಡ್‌ ಕ್ರಿಸ್‌ಗೆ ಇಳಿದಿದ್ದರು.

ಈ ಎರಡೂ ಸಂದರ್ಭಗಳ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.