ADVERTISEMENT

ಆಫ್ರಿದಿ ಬೆಂಬಲಿಸಿದ ಯುವಿ, ಹರಭಜನ್ ವಿರುದ್ಧ ಆಕ್ರೋಶ

ಪಿಟಿಐ
Published 1 ಏಪ್ರಿಲ್ 2020, 19:45 IST
Last Updated 1 ಏಪ್ರಿಲ್ 2020, 19:45 IST
ಯುವರಾಜ್ ಸಿಂಗ್
ಯುವರಾಜ್ ಸಿಂಗ್    

ನವದೆಹಲಿ: ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ಆಟಗಾರ ಶಾಹೀದ್ ಆಫ್ರಿದಿ ಅವರು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಎಲ್ಲರೂ ಬೆಂಬಲ ಕೊಡಿ ಎಂದು ಹೇಳಿರುವ ಕ್ರಿಕೆಟಿಗರಾದ ಹರಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಅವರು ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಯುವಿ, ‘ಅಗತ್ಯವುಳ್ಳವರಿಗೆ ಮತ್ತು ಬಡವರಿಗೆ ಸಹಾಯ ಮಾಡಿ ಎಂದು ನೀಡಿದ ಸಂದೇಶವು ಈ ರೀತಿಯ ವಿವಾದವಾಗಿದ್ದು ಹೇಗೆ ಎಂದು ಅರ್ಥವಾಗುತ್ತಿಲ್ಲ. ಎರಡೂ ದೇಶಗಳಲ್ಲಿ ಸಂಕಷ್ಟದಲ್ಲಿರುವ, ವೈದ್ಯಕೀಯ ನೆರವಿಗಾಗಿ ಪರಿತಪಿಸುತ್ತಿರುವವರಿಗೆ ಸಹಾಯ ಹಸ್ತ ಚಾಚಿ ಎಂದಷ್ಟೇ ಹೇಳಿದ್ದು. ನನಗೆ ಬೇರೆ ಯಾವುದೇ ದುರುದ್ದೇಶವಿರಲಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

‘ನಾನೊಬ್ಬ ಭಾರತೀಯ. ನನ್ನ ಜೀವನದಲ್ಲಿ ನೀಲಿ ಪೋಷಾಕಿನಲ್ಲಿ ಆಡಿದ್ದೇನೆ. ಗೌರವಿಸಿದ್ದೇನೆ. ಸದಾಕಾಲ ನಾನು ಮನುಷ್ಯತ್ವದ ಪರವಾಗಿಯೇ ಇರುತ್ತೇನೆ. ಜೈಹಿಂದ್’ ಎಂದೂ ಅದರಲ್ಲಿ ಬರೆದಿದ್ದಾರೆ.

ADVERTISEMENT

ಟ್ವಿಟರ್‌ನಲ್ಲಿ ಏನಿದೆ?: ಯುವಿ ಈ ಮೊದಲು ಹಾಕಿರುವ ವಿಡಿಯೊ ತುಣುಕಿನಲ್ಲಿ ಯುವಿ, ‘ಈ ಅಭಿಯಾನದಲ್ಲಿ ಹರಭಜನ್ ಸಿಂಗ್ ಅವರನ್ನು ನನ್ನನು ನಾಮನಿರ್ದೇಶನ ಮಾಡಿದ್ದಾರೆ. ಇವತ್ತು ಜಗತ್ತಿನ ಬಹಳಷ್ಟು ರಾಷ್ಟ್ರಗಳು ಕೊರೊನಾ ವೈರಸ್‌ ಹೊಡೆತಕ್ಕೆ ತತ್ತರಿಸಿವೆ. ಬಡವರು ಊಟಕ್ಕಾಗಿ ಪರದಾಡುವಂತಾಗಿದೆ. ಪಾಕಿಸ್ತಾನದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಆಟಗಾರ ಆಫ್ರಿದಿ ಅವರು ಜನರಿಗೆ ಆಹಾರ ಒದಗಿಸುತ್ತಿದ್ದಾರೆ. ನಾನು ಅವರನ್ನು ಬೆಂಬಲಿಸುತ್ತೇನೆ. ಇಲ್ಲಿರುವ ನಮ್ಮ ಸಂಘಟನೆಯ ಮೂಲಕ ಬಹಳಷ್ಟು ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದೇನೆ. ದಾನಿಗಳ ಮೂಲಕ ಹಣ ಸಂಗ್ರಹಿಸಿದ್ದೇನೆ. ಈ ಮಹಾಮಾರಿಯನ್ನು ಹೊಡೆದೊಡಿಸಲು ಎಲ್ಲರೂ ಕೈಜೋಡಿಸೋಣ’ ಎಂದಿದ್ದಾರೆ.

ಇದಕ್ಕಾಗಿ ಹಲವರು ಯುವರಾಜ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ದೇಶದಲ್ಲಿಯೇ ಸಾಕಷ್ಟು ತೊಂದರೆಯನ್ನು ಜನ ಅನುಭವಿಸುತ್ತಿದ್ದಾರೆ. ಪಾಕ್‌ಗೆ ಬೆಂಬಲಿಸುವ ಅವಶ್ಯಕತೆ ಏನಿದೆ ಎಂದು ಟೀಕಿಸಿದ್ದರು.

ಇದಕ್ಕೂ ಮುನ್ನ ಹರಭಜನ್ ಸಿಂಗ್ ಅವರೂ, ‘ಆಫ್ರಿದಿ ನೀವು ತುಂಬಾ ಒಳ್ಳೆಯ ಕಾರ್ಯ ಮಾಡುತ್ತಿದ್ದೀರಿ. ನೀವು ಮತ್ತು ನಮಗೆಲ್ಲರಿಗೂ ಆ ಭಗವಂತನು ಒಳ್ಳೆಯದನ್ನು ಮಾಡಲಿ’ ಎಂದು ಶ್ಲಾಘಿಸಿ ಟ್ವೀಟ್ ಮಾಡಿದ್ದರು. ಆಫ್ರಿದಿ ಅವರು ಯುವಿ ಮತ್ತು ಹರಭಜನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.