ADVERTISEMENT

AUS vs IND: ಆಸಿಸ್‌ನಲ್ಲಿ ಭಾರತ ಪರ 8ನೇ ಕ್ರಮಾಂಕದಲ್ಲಿ ಶತಕ; ನಿತೀಶ್ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2024, 10:14 IST
Last Updated 28 ಡಿಸೆಂಬರ್ 2024, 10:14 IST
<div class="paragraphs"><p>ಶತಕ ಸಿಡಿಸಿದ ಸಂಭ್ರಮದಲ್ಲಿ ನಿತೀಶ್ ಕುಮಾರ್ ರೆಡ್ಡಿ</p></div>

ಶತಕ ಸಿಡಿಸಿದ ಸಂಭ್ರಮದಲ್ಲಿ ನಿತೀಶ್ ಕುಮಾರ್ ರೆಡ್ಡಿ

   

ಚಿತ್ರಕೃಪೆ: X / @BCCI

ಮೆಲ್ಬರ್ನ್‌: ಆಸ್ಟ್ರೇಲಿಯಾ ಎದುರಿನ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯ 4ನೇ ಪಂದ್ಯದಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ನಿತೀಶ್‌ ಕುಮಾರ್‌ ರೆಡ್ಡಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕದ ಸಂಭ್ರಮ ಆಚರಿಸಿದರು. ಅದರೊಂದಿಗೆ, ಆಸ್ಟ್ರೇಲಿಯಾದಲ್ಲಿ ಶತಕ ಸಿಡಿಸಿದ 3ನೇ ಅತಿ ಕಿರಿಯ ಹಾಗೂ 8ನೇ ಕ್ರಮಾಂಕದಲ್ಲಿ ಮೂರಂಕಿ ದಾಟಿದ ಮೊದಲ ಬ್ಯಾಟರ್‌ ಎಂಬ ಶ್ರೇಯಕ್ಕೆ ಭಾಜನರಾದರು.

ADVERTISEMENT

ಕೆಚ್ಚೆದೆಯ ಆಟವಾಡಿದ ರೆಡ್ಡಿ ಆಟಕ್ಕೆ, ಅವರ ತಂದೆ, ಟೀಂ ಇಂಡಿಯಾ ಆಟಗಾರರು ಸೇರಿದಂತೆ ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ ಸೇರಿದ್ದ ಸುಮಾರು 80,000 ಪ್ರೇಕ್ಷಕರು ಸಾಕ್ಷಿಯಾದರು.

191 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಇಳಿದ ರೆಡ್ಡಿ, ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದರು. ವಾಷಿಂಗ್ಟನ್‌ ಸುಂದರ್‌ (50 ರನ್‌) ಅವರೊಂದಿಗೆ ಶತಕದ ಜೊತೆಯಾಟವಾಡಿದ ಅವರು, ಭಾರತವನ್ನು ಕನಿಷ್ಠ ಮೊತ್ತಕ್ಕೆ ಕುಸಿಯುವ ಆತಂಕ ಹಾಗೂ ಫಾಲೋಆನ್‌ ಭೀತಿಯಿಂದ ಪಾರು ಮಾಡಿದರು.

ಆತಿಥೇಯ ವೇಗಿಗಳಾದ ಮಿಚೇಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌, ಸ್ಕಾಟ್‌ ಬೊಲ್ಯಾಂಡ್‌ ಹಾಗೂ ಸ್ಪಿನ್ನರ್‌ ನೇಥನ್‌ ಲಯನ್‌ ಅವರಂತಹ ವಿಶ್ವ ಶ್ರೇಷ್ಠ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ 21 ವರ್ಷದ ಆಟಗಾರ, 176 ಎಸೆತಗಳಲ್ಲಿ 105 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ತಂಡದ ಮೊತ್ತ 9 ವಿಕೆಟ್‌ಗೆ 358 ರನ್ ಆಗಿದೆ. ರೆಡ್ಡಿ ಜೊತೆ ಮೊಹಮ್ಮದ್ ಸಿರಾಜ್‌ (2 ರನ್‌) ಕ್ರೀಸ್‌ನಲ್ಲಿದ್ದಾರೆ.

ಇನಿಂಗ್ಸ್‌ ಹಿನ್ನಡೆ ತಪ್ಪಿಸಿಕೊಳ್ಳಲು ಇನ್ನೂ 116 ರನ್‌ ಗಳಿಸಬೇಕಿದೆ.

ಗುರುವಾರ ಆರಂಭವಾದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 474 ರನ್‌ ಗಳಿಸಿದೆ.

ಆಸ್ಟ್ರೇಲಿಯಾದಲ್ಲಿ ಭಾರತ ಪರ ಶತಕ ಸಿಡಿಸಿದ ಕಿರಿಯ ಬ್ಯಾಟರ್‌
ಅಜೇಯ ಶತಕದೊಂದಿಗೆ 4ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿರುವ ರೆಡ್ಡಿ, ಸಚಿನ್‌ ತೆಂಡೂಲ್ಕರ್‌ ಹಾಗೂ ರಿಷಭ್‌ ಪಂತ್‌ ಬಳಿಕ ಆಸ್ಟ್ರೇಲಿಯಾದಲ್ಲಿ ಶತಕ ಸಿಡಿಸಿದ ಕಿರಿಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ರೆಡ್ಡಿ ವಯಸ್ಸು 21 ವರ್ಷ 216 ದಿನಗಳು.

ಸಚಿನ್‌ ಅವರು 1992ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿದಾಗ ಅವರ ವಯಸ್ಸು 18 ವರ್ಷ 256 ದಿನಗಳಾಗಿದ್ದವು. 2019ರಲ್ಲಿ ಸಿಡ್ನಿಯಲ್ಲಿ ನೂರು ರನ್‌ ಗಳಿಸಿದಾಗ ರಿಷಭ್‌ ಪಂತ್‌ಗೆ 21 ವರ್ಷ 92 ದಿನ ವಯಸ್ಸಾಗಿತ್ತು.

ದತ್ತು ಫಾಡ್ಕರ್‌ ಅವರು 1948ರಲ್ಲಿ ಅಡಿಲೇಡ್‌ನಲ್ಲಿ ಶತಕ ಗಳಿಸಿದ್ದರು. ಆಗ ಅವರ ವಯಸ್ಸು 22 ವರ್ಷ 46 ದಿನಗಳು.

8ನೇ ಕ್ರಮಾಂಕದಲ್ಲಿ ಗರಿಷ್ಠ ರನ್‌ ದಾಖಲೆ
ಕಾಂಗರೂ ನೆಲದಲ್ಲಿ ಆಡಿದ ಟೆಸ್ಟ್‌ ಪಂದ್ಯಗಳಲ್ಲಿ 8 ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಹೆಚ್ಚು ರನ್‌ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ರೆಡ್ಡಿ ಅವರದ್ದಾಯಿತು.

ಮೆಲ್ಬರ್ನ್‌ ಪಂದ್ಯಕ್ಕೂ ಮುನ್ನ, ಈ ದಾಖಲೆ ಅನಿಲ್‌ ಕುಂಬ್ಳೆ ಅವರ ಹೆಸರಲ್ಲಿತ್ತು. ಅವರು 2008ರಲ್ಲಿ ಅಡಿಲೇಡ್ ಟೆಸ್ಟ್‌ನಲ್ಲಿ 87 ರನ್ ಗಳಿಸಿದ್ದರು. 2019ರಲ್ಲಿ ಸಿಡ್ನಿಯಲ್ಲಿ 81 ರನ್‌ ಗಳಿಸಿದ್ದ ರವೀಂದ್ರ ಜಡೇಜ ನಂತರದ ಸ್ಥಾನದಲ್ಲಿದ್ದಾರೆ.

8ನೇ ವಿಕೆಟ್‌ಗೆ ಅತಿಹೆಚ್ಚು ರನ್ ಜೊತೆಯಾಟ
8 ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಭಾರತದ ಪರ ಆಸ್ಟ್ರೇಲಿಯಾದಲ್ಲಿ ಅತಿಹೆಚ್ಚು ರನ್‌ ಕಲೆಹಾಕಿದ 2ನೇ ಜೋಡಿ ಎಂಬ ಶ್ರೇಯ ರೆಡ್ಡಿ ಹಾಗೂ ಸುಂದರ್‌ ಅವರದ್ದಾಯಿತು. ಇವರಿಬ್ಬರ ಪಾಲುದಾರಿಕೆಯಲ್ಲಿ 127 ರನ್‌ ತಂಡಕ್ಕೆ ಸೇರ್ಪಡೆಯಾದವು.

ಸಚಿನ್‌ ತೆಂಡೂಲ್ಕರ್‌ ಹಾಗೂ ಹರ್ಭಜನ್‌ ಸಿಂಗ್‌ ಅವರು 2008ರಲ್ಲಿ ಸಿಡ್ನಿ ಟೆಸ್ಟ್‌ನಲ್ಲಿ 129 ರನ್‌ ಗಳಿಸಿದ್ದು ದಾಖಲೆಯಾಗಿದೆ. ಅದೇ ವರ್ಷ ಅನಿಲ್‌ ಕುಂಬ್ಳೆ ಅವರೊಂದಿಗೂ ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದ್ದ ಹರ್ಭಜನ್‌, 107 ರನ್‌ಗಳ ಜೊತೆಯಾಟವಾಡಿದ್ದರು. ಇದು ಮೂರನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.