ADVERTISEMENT

ಟಿ20 ವಿಶ್ವಕಪ್ | ಎಲ್ಲ ತಂಡಗಳೂ ಭಾರತವನ್ನು ಗುರಿಯಾಗಿಸಿವೆ: ಬ್ರಯಾನ್ ಲಾರಾ

ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಟೀ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 7:15 IST
Last Updated 2 ಜನವರಿ 2020, 7:15 IST
   

ನವದೆಹಲಿ:ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಎಲ್ಲ ತಂಡಗಳೂ ಅದ್ನನು ಗುರಿಯಾಗಿಸಿವೆ ಎಂದು ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌ ದಿಗ್ಗಜ ಬ್ರಯಾನ್‌ ಲಾರಾ ಅಭಿಪ್ರಾಯಪಟ್ಟಿದ್ದಾರೆ.2016ರಲ್ಲಿ ತವರಿನಲ್ಲಿ ನಡೆದಿದ್ದ ಕಳೆದ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಸೆಮಿಫೈನಲ್‌ನಲ್ಲಿ ವಿಂಡೀಸ್‌ ವಿರುದ್ಧ ಮುಗ್ಗರಿಸಿತ್ತು.

ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಮೂರು ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆಯಾದರೂ ಐಸಿಸಿಯ ಪ್ರಮುಖ ಟೂರ್ನಿಗಳಲ್ಲಿ ಎಡವುತ್ತಿದೆ. 2017ರಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 180 ರನ್‌ಗಳ ಹೀನಾಯ ಸೋಲು ಕಂಡಿದ್ದ ಭಾರತ, 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ 18 ರನ್‌ ಅಂತರದಿಂದ ಸೋತಿತ್ತು. ಆದಾಗ್ಯೂ ಕೊಹ್ಲಿ ನೇತೃತ್ವದ ತಂಡ ಈ ಬಾರಿ ಟಿ20 ವಿಶ್ವಕಪ್‌ ಗೆಲ್ಲಲಿದೆ ಎಂದು ಪತ್ರಿಕೆಯೊಂದರ ಜೊತೆ ನಡೆಸಿದ ಮಾತುಕತೆಯಲ್ಲಿ ಲಾರಾ ಹೇಳಿದ್ದಾರೆ.

‘ನನ್ನ ಪ್ರಕಾರ ಅವರು (ಭಾರತ) ಆಡುವ ಎಲ್ಲ ಟೂರ್ನಿಗಳಲ್ಲಿಯೂ ಖಂಡಿತವಾಗಿಯೂ ಪ್ರಶಸ್ತಿ ಗೆಲ್ಲಲು ಸಮರ್ಥರಿದ್ದಾರೆ. ಎಲ್ಲ ದೇಶದ ತಂಡಗಳ ಗುರಿಯೂ ವಿರಾಟ್‌ ಕೋಹ್ಲಿ ಮತ್ತು ತಂಡದತ್ತಲೇ ಇರುವುದಕ್ಕೆ ಅವರಿಗೆ (ಕೊಹ್ಲಿ ಪಡೆಗೆ) ಮೆಚ್ಚುಗೆ ಸೂಚಿಸುತ್ತೇನೆ. ಪ್ರಬಲವಾದ ಮತ್ತೊಂದು ತಂಡ ಭಾರತದ ವಿರುದ್ಧ ಪ್ರಮುಖ ಪಂದ್ಯವೊಂದನ್ನು ಆಡಲಿದೆ. ಅದು ಕ್ವಾರ್ಟರ್ ಫೈನಲ್ ಆಗಿರಬಹುದು. ಅಥವಾ ಸೆಮಿಫೈನಲ್ ಇಲ್ಲವೇ ಫೈನಲ್ ಆಗಿರಲೂ ಬಹುದು ಎಂಬುದು ಎಲ್ಲಿರಿಗೂ ಗೊತ್ತು’ ಎಂದಿದ್ದಾರೆ.

ADVERTISEMENT

ಟಿ20 ವಿಶ್ವಕಪ್‌ಗೆ ತಂಡದ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ. ಅಗ್ರ ಕ್ರಮಾಂಕದ ಬಗ್ಗೆ ಹೆಚ್ಚಿನ ಚಿಂತೆಯಿಲ್ಲ. ಆದರೆ ವಿಕೆಟ್‌ ಕೀಪರ್‌ ಧೋನಿ ಸ್ಥಾನ ಪಡೆಯಲಿದ್ದಾರೆಯೇ ಎಂಬುದೂ ಸೇರಿದಂತೆ, ಮಧ್ಯಮ ಕ್ರಮಾಂಕದ ಆಯ್ಕೆ ಸ್ಪಷ್ಟವಾಗಿಲ್ಲ. ಆಲ್ರೌಂಡರ್‌ಗಳಾದ ಗಾಯಾಳು ಹಾರ್ದಿಕ್‌ ಪಾಂಡ್ಯ ಹಾಗೂ ಶಿವಂ ದುಬೆ ಇಬ್ಬರಲ್ಲಿ ಯಾರಿಗೆ ಸ್ಥಾನ ಲಭಿಸಲಿದೆ ಎಂಬುದು ಖಚಿತವಿಲ್ಲ. ಸದ್ಯ ಉತ್ತಮ ಪ್ರದರ್ಶನ ನೀಡುತ್ತಿರುವ ದೀಪಕ್‌ ಚಾಹರ್‌ ವೇಗದ ವಿಭಾಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.