ADVERTISEMENT

Champions Trophy Final: IND vs NZ Highlights: 73 ಓವರ್‌ ಸ್ಪಿನ್ ದಾಳಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2025, 3:31 IST
Last Updated 10 ಮಾರ್ಚ್ 2025, 3:31 IST
<div class="paragraphs"><p>ಭಾರತ ತಂಡದ ಆಟಗಾರರು</p></div>

ಭಾರತ ತಂಡದ ಆಟಗಾರರು

   

ಪಿಟಿಐ ಚಿತ್ರ

ದುಬೈ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್‌ ಅಂತರದ ಜಯ ಸಾಧಿಸಿರುವ ಭಾರತ, ಮೂರನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದೆ.

ADVERTISEMENT

ದುಬೈನಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 251 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಭಾರತ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ 6 ವಿಕೆಟ್‌ಗೆ 254 ರನ್‌ ಗಳಿಸಿ ಜಯದ ನಗೆ ಬೀರಿತು.

ಸ್ಪಿನ್ನರ್‌ಗಳ ಆಟ
ಫೈನಲ್‌ನಲ್ಲಿ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದ ತಂತ್ರವು ಟೀಂ ಇಂಡಿಯಾಗೆ ಫಲ ಕೊಟ್ಟಿತು.

ನ್ಯೂಜಿಲೆಂಡ್‌ ಪರ ಇನಿಂಗ್ಸ್‌ ಆರಂಭಿಸಿದ ರಚಿನ್ ರವೀಂದ್ರ ಮತ್ತು ವಿಲ್ ಯಂಗ್, ಭಾರತದ ವೇಗಿ ಮೊಹಮ್ಮದ್‌ ಶಮಿ ಮತ್ತು ಹಾರ್ದಿಕ್‌ ಪಾಂಡ್ಯ ಎಸೆತಗಳಲ್ಲಿ ಲೀಲಾಜಾಲವಾಗಿ ರನ್‌ ಗಳಿಸಿದರು. ಇವರಿಬ್ಬರು, ಮೊದಲ ವಿಕೆಟ್ ಜೊತೆಯಾಟದಲ್ಲಿ 7.5 ಓವರ್‌ಗಳಲ್ಲೇ 57 ರನ್ ಸೇರಿಸಿದರು.

ನಂತರ ದಾಳಿಗಿಳಿದ ಸ್ಪಿನ್ನರ್‌ಗಳು, 18 ರನ್‌ಗಳ ಅಂತರದಲ್ಲೇ ಮೊದಲ 3 ವಿಕೆಟ್‌ಗಳನ್ನು ಉರುಳಿಸಿ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಹೀಗಾಗಿ, ಕಿವೀಸ್‌ ರನ್‌ ಗಳಿಕೆಗೆ ಹಿನ್ನಡೆಯಾಯಿತು.

ಸ್ಪಿನ್ನರ್‌ಗಳ ಸವಾಲಿನೆದುರು ಡ್ಯಾರಿಲ್ ಮಿಚೆಲ್ ಹೋರಾಟ ನಡೆಸಿದರೂ ನಿಧಾನಗತಿಯ ಬ್ಯಾಟಿಂಗ್‌ ಮಾಡಿದರು. 101 ಎಸೆತಗಳನ್ನು ಎದುರಿಸಿದ ಅವರು, 63 ರನ್‌ ಗಳಿಸಿದರು. ಇನಿಂಗ್ಸ್‌ಗೆ ವೇಗ ನೀಡುವ ಭರದಲ್ಲಿ 46ನೇ ಓವರ್‌ನ 4ನೇ ಎಸೆತದಲ್ಲಿ ಔಟಾದರು.

ಕೊನೆಯಲ್ಲಿ ಅಜೇಯ ಆಟವಾಡಿದ ಮಿಚೆಲ್ ಬ್ರೇಸ್‌ ವೆಲ್ 40ಎಸೆತಗಳಲ್ಲೇ 53 ರನ್‌ ಗಳಿಸಿ ಮಿಂಚಿದರು. ಅವರ ಆಟದ ಬಲದಿಂದಾಗಿ, ನ್ಯೂಜಿಲೆಂಡ್‌ ಮೊತ್ತ 7 ವಿಕೆಟ್‌ಗೆ 251ಕ್ಕೆ ತಲುಪಿತು.

ಒಟ್ಟು 38 ಓವರ್‌ ಬೌಲಿಂಗ್‌ ಮಾಡಿದ ಸ್ಪಿನ್ನರ್‌ಗಳು ಕೇವಲ 3.79 ಸರಾಸರಿಯಲ್ಲಿ 144 ರನ್‌ ನೀಡಿ 5 ವಿಕೆಟ್‌ಗಳನ್ನು ಉರುಳಿಸಿದರು. ಉಳಿದ 12 ಓವರ್‌ಗಳಲ್ಲಿ ಶಮಿ ಮತ್ತು ಪಾಂಡ್ಯ, 8.67ರ ಸರಾಸರಿಯಲ್ಲಿ 104 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಮಾತ್ರ ಪಡೆದರು.

ಈ ಗುರಿ ಬೆನ್ನತ್ತಿದ ಭಾರತಕ್ಕೆ ರೋಹಿತ್‌ ಬಿರುಸಿನ ಆರಂಭ ನೀಡಿದರು. 41 ಎಸೆತಗಳಲ್ಲೇ ಅರ್ಧಶತಕ ಪೂರೈಸಿಕೊಂಡ ಅವರು, ಶುಭಮನ್‌ ಗಿಲ್‌ ಜೊತೆಗೂಡಿ ತಂಡದ ಮೊತ್ತವನ್ನು ವಿಕೆಟ್‌ ನಷ್ಟವಿಲ್ಲದೆ 17 ಓವರ್‌ಗಳಲ್ಲೇ ನೂರರ ಗಡಿ ದಾಟಿಸಿದರು.

ಮಿಚೆಲ್‌ ಸ್ಯಾಂಟನರ್‌ ಹಾಕಿದ 19ನೇ ಓವರ್‌ನಲ್ಲಿ ಕವರ್ಸ್‌ನತ್ತ ಶುಭಮನ್‌ ಗಿಲ್‌ (31 ರನ್‌) ಬಲವಾಗಿ ಬಾರಿಸಿದ ಚೆಂಡನ್ನು ಮೇಲೆ ಹಿಮ್ಮುಖವಾಗಿ ಜಿಗಿದು ಅದ್ಭುತವಾಗಿ ಹಿಡಿತಕ್ಕೆ ಪಡೆದ ಗ್ಲೆನ್‌ ಫಿಲಿಪ್ಸ್‌ ಭಾರತಕ್ಕೆ ಮೊದಲ ಆಘಾತ ನೀಡಿದರು. ನಂತರದ ಓವರ್‌ನಲ್ಲಿ ವಿರಾಟ್‌ ಕೊಹ್ಲಿ (1 ರನ್‌) ಸಹ ಔಟಾದರು.

ಇದು ಪಂದ್ಯಕ್ಕೆ ತಿರುವು ನೀಡಿತು. ರಕ್ಷಣಾತ್ಮಕ ಆಟದ ಮೊರೆ ಹೋದ ರೋಹಿತ್‌, 83 ಎಸೆತಗಳಲ್ಲಿ 76 ರನ್‌ ಗಳಿಸಿದ್ದಾಗ ಔಟಾದರು. ನಂತರ ರನ್‌ ಗಳಿಕೆ ಕುಸಿಯಿತು. ಇದರಿಂದ ಭಾರತದ ಪಾಳಯದಲ್ಲಿ ಆತಂಕ ಮೂಡಿಸಿತ್ತು. ಆದರೆ, ಒತ್ತಡ ಮೆಟ್ಟಿನಿಂತ ಶ್ರೇಯಸ್‌ ಅಯ್ಯರ್‌ (48 ರನ್‌), ಅಕ್ಷರ್‌ ಪಟೇಲ್‌ (29 ರನ್‌) ಉಪಯಕ್ತ ಕೊಡುಗೆ ನೀಡಿದರು. ಕೊನೆಯಲ್ಲಿ ಜವಾಬ್ದಾರಿಯುತವಾಗಿ ಆಡಿದ ಕೆ.ಎಲ್‌. ರಾಹುಲ್‌ (33 ಎಸೆತ, 34 ರನ್‌) ಮತ್ತು ರವೀಂದ್ರ ಜಡೇಜ (9 ರನ್‌) ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಜಯದ ಲೆಕ್ಕ ಚುಕ್ತಾ ಮಾಡಿದರು.

ಹಾರ್ದಿಕ್‌ ಪಾಂಡ್ಯ (18 ರನ್‌) ಕೈಲ್‌ ಜೇಮಿಸನ್‌ ಬೌಲಿಂಗ್‌ನಲ್ಲಿ ಔಟಾದದ್ದನ್ನು ಬಿಟ್ಟರೆ, ಉಳಿದ ಐದು ವಿಕೆಟ್‌ಗಳನ್ನು ಸ್ಪಿನ್ನರ್‌ಗಳೇ ಪಡೆದದ್ದು ವಿಶೇಷ. ಹೀಗಾಗಿ, ಈ ಪಂದ್ಯದಲ್ಲಿ ಪತನವಾದ ಒಟ್ಟು 13ರಲ್ಲಿ 10 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾದವು. ಎರಡು ವೇಗಿಗಳಿಗೆ ದಕ್ಕಿದರೆ ಇನ್ನೊಂದು ರನೌಟ್‌ ಆಯಿತು.

ಈ ಪಂದ್ಯದ ಪ್ರಮುಖ ಅಂಕಿ–ಅಂಶಗಳ ಮಾಹಿತಿ ಇಲ್ಲಿದೆ.

ಭಾರತಕ್ಕೆ ಮೂರನೇ ಟ್ರೋಫಿ
ಟೀಂ ಇಂಡಿಯಾ, ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರುತ್ತಿರುವುದು ಮೂರನೇ ಸಲ. 2013ರ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಗೆದ್ದಿದ್ದ ಭಾರತ, 2002ರಲ್ಲಿ ಶ್ರೀಲಂಕಾ ಜೊತೆ ಪ್ರಶಸ್ತಿ ಹಂಚಿಕಂಡಿತ್ತು. ಉಳಿದಂತೆ ಆಸ್ಟ್ರೇಲಿಯಾ ಎರಡು ಸಲ (2006, 2009) ಈ ಸಾಧನೆ ಮಾಡಿದೆ.

ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌ ಮತ್ತು ಪಾಕಿಸ್ತಾನ ಒಮ್ಮೊಮ್ಮೆ ಟ್ರೋಫಿ ಮುಡಿಗೇರಿಸಿಕೊಂಡಿವೆ.

ಐಸಿಸಿ ಟೂರ್ನಿ ಫೈನಲ್‌ನಲ್ಲಿ ಪಂದ್ಯಶ್ರೇಷ್ಠರೆನಿಸಿದ ನಾಯಕರು

  • ಕ್ಲೈವ್‌ ಲಾಯ್ಡ್‌ (ವೆಸ್ಟ್‌ ಇಂಡೀಸ್‌): ಏಕದಿನ ವಿಶ್ವಕಪ್‌ – 1975

  • ರಿಕಿ ಪಾಂಟಿಂಗ್‌ (ಆಸ್ಟ್ರೇಲಿಯಾ): ಏಕದಿನ ವಿಶ್ವಕಪ್‌ – 2003

  • ಎಂ.ಎಸ್‌. ಧೋನಿ (ಭಾರತ): ಏಕದಿನ ವಿಶ್ವಕಪ್‌ – 2011

  • ರೋಹಿತ್‌ ಶರ್ಮಾ (ಭಾರತ): ಚಾಂಪಿಯನ್ಸ್‌ ಟ್ರೋಫಿ – 2025

ಸ್ಪಿನ್ನರ್‌ಗಳಿಂದ 73 ಓವರ್‌
ಈ ಪಂದ್ಯದಲ್ಲಿ ಸ್ಪಿನ್ನರ್‌ಗಳು ಒಟ್ಟು 73 ಓವರ್‌ ಬೌಲಿಂಗ್‌ ಮಾಡಿದರು. ಭಾರತದವರು 38 ಓವರ್ ಹಾಕಿದರೆ, ನ್ಯೂಜಿಲೆಂಡ್ 35 ಓವರ್‌ ಎಸೆದರು. ಇದು ಐಸಿಸಿ ಪಂದ್ಯಗಳಲ್ಲಿ ದಾಖಲೆಯಾಗಿದೆ. ಇದೇ ಟೂರ್ನಿಯ ಭಾರತ vs ಆಸ್ಟ್ರೇಲಿಯಾ ಸೆಮಿಫೈನಲ್‌ನಲ್ಲಿ 65.1 ಹಾಗೂ ಭಾರತ vs ನ್ಯೂಜಿಲೆಂಡ್ ಗುಂಪು ಹಂತದ ಪಂದ್ಯದಲ್ಲಿ 62.3 ಓವರ್‌ಗಳನ್ನು ಸ್ಪಿನ್ನರ್‌ಗಳು ಎಸೆದಿದ್ದರು.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಹೆಚ್ಚು ಓವರ್‌ ಸ್ಪಿನ್‌ ಬೌಲಿಂಗ್‌ ಮಾಡಿದ ದಾಖಲೆ ಇರುವುದು ಶ್ರೀಲಂಕಾ ಹೆಸರಲ್ಲಿ. ಈ ತಂಡ, ಆಸ್ಟ್ರೇಲಿಯಾ ವಿರುದ್ಧ 2002ರ ಆವೃತ್ತಿಯ ಸೆಮಿಫೈನಲ್‌ನಲ್ಲಿ 39.4 ಓವರ್‌ ಸ್ಪಿನ್‌ ಬೌಲಿಂಗ್ ಮಾಡಿತ್ತು. 2025ರ ಫೈನಲ್‌ನಲ್ಲಿ ಭಾರತ 38 ಓವರ್‌ ಎಸೆಯುವ ಮೂಲಕ 2ನೇ ಸ್ಥಾನ ಪಡೆದಿದೆ.

ಭಾರತದ ಸ್ಪಿನ್ನರ್‌ಗಳು ವೆಸ್ಟ್‌ ಇಂಡೀಸ್‌ ವಿರುದ್ಧ ಇಂದೋರ್‌ನಲ್ಲಿ 2011ರಲ್ಲಿ ನಡದ ಪಂದ್ಯದಲ್ಲಿ 41.2 ಓವರ್‌ಗಳನ್ನು ಎಸೆದಿದ್ದರು. ಅದು ದಾಖಲೆಯಾಗಿದೆ. 1998ರಲ್ಲಿ ಕೀನ್ಯಾ ವಿರುದ್ಧದ ಪಂದ್ಯದಲ್ಲಿ 39 ಓವರ್‌ ಬೌಲಿಂಗ್‌ ಮಾಡಿದ್ದರು.

24 ಪಂದ್ಯದಲ್ಲಿ 23 ಜಯ
ಭಾರತ ತಂಡವು ನಿಗದಿತ ಓವರ್‌ಗಳ ಐಸಿಸಿ ಟೂರ್ನಿಗಳಲ್ಲಿ (ಚಾಂಪಿಯನ್ಸ್‌ ಟ್ರೋಪಿ, ಏಕದಿನ ಹಾಗೂ ಟಿ20 ವಿಶ್ವಕಪ್‌) ಆಡಿರುವ ಕಳೆದ 24 ಪಂದ್ಯಗಳಲ್ಲಿ ಒಮ್ಮೆಯಷ್ಟೇ ಸೋಲು ಕಂಡಿದೆ. ಉಳಿದ 23ರಲ್ಲಿ ಜಯ ಸಾಧಿಸಿದೆ.

ಚಾಂಪಿಯನ್ಸ್‌ ಟ್ರೋಫಿಯಲ್ಲಿ 23ನೇ ಜಯ
ಭಾರತ ತಂಡವು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಇದುವರೆಗೆ 34 ಪಂದ್ಯಗಳನ್ನು ಆಡಿದೆ. ಈ ಪೈಕಿ 23ರಲ್ಲಿ ಜಯ ಸಾಧಿಸಿದ್ದು 8ರಲ್ಲಿ ಸೋಲು ಕಂಡಿದೆ. ಉಳಿದ ಮೂರು ಪಂದ್ಯಗಳು ಫಲಿತಾಂಶ ಕಂಡಿಲ್ಲ.

ದುಬೈನಲ್ಲಿ 10ನೇ ಜಯ
ಟೀಂ ಇಂಡಿಯಾ ದುಬೈನಲ್ಲಿ ಸತತ 10 ಜಯ ಸಾಧಿಸಿದೆ. ಇಲ್ಲಿ ಭಾರತ ಆಡಿರುವ 11 ಪಂದ್ಯಗಳಲ್ಲಿ ಒಂದು ಟೈ ಆಗಿದೆ. ನ್ಯೂಜಿಲೆಂಡ್ ತಂಡ ಡುಂಡಿನ್‌ನಲ್ಲಿ 10, ಭಾರತ ತಂಡ ಇಂದೋರ್‌ನಲ್ಲಿ 7 ಹಾಗೂ ಪಾಕ್‌ ಪಡೆ ಪಾಕಿಸ್ತಾನದ ಹೈದರಾಬಾದ್‌ನಲ್ಲಿ ಸತತವಾಗಿ 7 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿವೆ.

ಮಾಹಿತಿ: ಕ್ರಿಕ್‌ಬಜ್‌ ವೆಬ್‌ಸೈಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.