ADVERTISEMENT

Champions Trophy History | ಭಾರತ-ಪಾಕ್ ಐದು ಬಾರಿ ಮುಖಾಮುಖಿ; ಯಾರಿಗೆ ಮೇಲುಗೈ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2025, 10:23 IST
Last Updated 22 ಫೆಬ್ರುವರಿ 2025, 10:23 IST
<div class="paragraphs"><p>ಬಾಬರ್ ಆಜಂ, ಕೆ.ಎಲ್. ರಾಹುಲ್, ರೋಹಿತ್ ಶರ್ಮಾ</p></div>

ಬಾಬರ್ ಆಜಂ, ಕೆ.ಎಲ್. ರಾಹುಲ್, ರೋಹಿತ್ ಶರ್ಮಾ

   

(ರಾಯಿಟರ್ಸ್ ಚಿತ್ರ)

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ADVERTISEMENT

ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಾಳೆ (ಫೆ.23, ಭಾನುವಾರ) ಮಧ್ಯಾಹ್ನ 2.30ಕ್ಕೆ (ಭಾರತೀಯ ಕಾಲಮಾನ) ಸರಿಯಾಗಿ ಪಂದ್ಯ ಆರಂಭವಾಗಲಿದೆ.

ಇತಿಹಾಸದತ್ತ ತಿರುಗಿ ನೋಡಿದಾಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು ಐದು ಬಾರಿ ಮುಖಾಮುಖಿಯಾಗಿವೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡು ಬಾರಿಯ ಚಾಂಪಿಯನ್ (2002, 2013) ಭಾರತದ ವಿರುದ್ಧ ಪಾಕಿಸ್ತಾನ ಮೇಲುಗೈ ಸಾಧಿಸಿದ್ದು, 3-2ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಬರ್ಮಿಂಗ್‌ಹ್ಯಾಮ್ (2004): ಭಾರತಕ್ಕೆ ಸೋಲು

2004ರಲ್ಲಿ ಇಂಗ್ಲೆಂಡ್‌ ಆತಿಥ್ಯದಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಅಂದು ರಾಹುಲ್ ದ್ರಾವಿಡ್ (67) ಹಾಗೂ ಅಜಿತ್ ಅಗರ್‌ಕರ್ (47) ಪ್ರತಿರೋಧದ ಹೊರತಾಗಿಯೂ ಭಾರತ 200 ರನ್‌ಗಳಿಗೆ ಆಲೌಟ್ ಆಗಿತ್ತು. ಪಾಕ್ ಪರ ಶೋಯಬ್ ಅಖ್ತರ್ 4 ವಿಕೆಟ್ ಗಳಿಸಿದ್ದರು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ, ಮೊಹಮ್ಮದ್ ಯೂಸುಫ್ (81*) ಹಾಗೂ ಇಂಜಮಾಮ್ ಉಲ್ ಹಕ್ (41) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಮೂರು ವಿಕೆಟ್ ಅಂತರದ ಗೆಲುವು ಸಾಧಿಸಿತ್ತು.

ಸೆಂಚುರಿಯನ್ (2009): ಭಾರತಕ್ಕೆ ಸೋಲು

2009ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತದ ಮೇಲೆ ಪಾಕಿಸ್ತಾನದ ಅಧಿಪತ್ಯ ಮುಂದುವರಿಯಿತು. ಶೋಯಬ್ ಮಲಿಕ್ (128) ಹಾಗೂ ಮೊಹಮ್ಮದ್ ಯುಸೂಫ್ (87) ಅಮೋಘ ಆಟದ ನೆರವಿನಿಂದ ಪಾಕಿಸ್ತಾನ 303 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಭಾರತ ಗೌತಮ್ ಗಂಭೀರ್ (57) ಹಾಗೂ ರಾಹುಲ್ ದ್ರಾವಿಡ್ (76) ಹೋರಾಟದ ಹೊರತಾಗಿಯೂ 248 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಮೂಲಕ 54 ರನ್ ಅಂತರದ ಸೋಲಿಗೆ ಶರಣಾಯಿತು.

ಬರ್ಮಿಂಗ್‌ಹ್ಯಾಮ್ (2013): ಭಾರತಕ್ಕೆ ಗೆಲುವು

2013ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಮತ್ತೊಂದು ಸಲ ಮುಖಾಮುಖಿಯಾದಾಗ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತನ್ನ ನೈಜ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು. ಸಾಂಘಿಕ ಬೌಲಿಂಗ್ ನಡೆಸಿದ ಭಾರತ ಎದುರಾಳಿ ತಂಡವನ್ನು 165 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಮಳೆ ಬಾಧಿತ ಪಂದ್ಯದಲ್ಲಿ ಸುಲಭ ಗುರಿ ಬೆನ್ನಟ್ಟಿದ ಭಾರತ ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತು. ಶಿಖರ್ ಧವರ್ 48 ರನ್ ಗಳಿಸಿದರು. ಬಳಿಕ ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿದ್ದ ಭಾರತ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯಿತು.

ಬರ್ಮಿಂಗ್‌ಹ್ಯಾಮ್ (2017): ಭಾರತಕ್ಕೆ ಜಯ

2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ 'ಬಿ' ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 124 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ರೋಹಿತ್ ಶರ್ಮಾ (91), ಶಿಖರ್ ಧವನ್ (68), ವಿರಾಟ್ ಕೊಹ್ಲಿ (81*), ಯುವರಾಜ್ ಸಿಂಗ್ (53) ನೆರವಿನಿಂದ ಭಾರತ ಮೂರು ವಿಕೆಟ್ ನಷ್ಟಕ್ಕೆ 319 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 164 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ದಿ ಓವಲ್ (2017): ಫೈನಲ್‌ನಲ್ಲಿ ಸೋಲು

ಆದರೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತಕ್ಕೆ ನಿರಾಸೆ ಕಾದಿತ್ತು. ಫೈನಲ್‌ನಲ್ಲಿ ಭಾರತವನ್ನು 180 ರನ್ ಅಂತರದಲ್ಲಿ ಬಗ್ಗುಬಡಿದ ಪಾಕಿಸ್ತಾನ ಕಿರೀಟ ಎತ್ತಿ ಹಿಡಿಯಿತು. ಮೊದಲು ಬ್ಯಾಟಿಂಗ್ ನಡೆಸಿದ ಪಾಕ್, ಫಖರ್ ಜಮಾನ್ (114), ಅಜರ್ ಅಲಿ (59), ಮೊಹಮ್ಮದ್ ಹಫೀಜ್ (57*) ಹಾಗೂ ಬಾಬರ್ ಆಜಂ (46) ಬಿರುಸಿನ ಆಟದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 338 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಭಾರತ ಹಾರ್ದಿಕ್ ಪಾಂಡ್ಯ ಅರ್ಧಶತಕದ (76) ಹೊರತಾಗಿಯೂ 158 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಮೂಲಕ ಮೂರನೇ ಸಲ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿತ್ತು. ಅತ್ತ ಪಾಕಿಸ್ತಾನ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಿತು.

ಸೇಡು ತೀರಿಸಿಕೊಳ್ಳುವ ತವಕ...

ಈಗ 2017ರ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತದ ಮಂದಿದೆ. 'ಎ' ಗುಂಪಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿರುವ ಹಾಲಿ ಚಾಂಪಿಯನ್ ಪಾಕಿಸ್ತಾನದ ಪಾಲಿಗೆ ಈ ಪಂದ್ಯ ನಿರ್ಣಾಯಕವೆನಿಸಿದೆ. ಮತ್ತೊಂದೆಡೆ ಬಾಂಗ್ಲಾದೇಶ ವಿರುದ್ಧ ಗೆದ್ದು ಶುಭಾರಂಭ ಮಾಡಿರುವ ಭಾರತ, ಈ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.