ADVERTISEMENT

ಸುಲಭ ಕ್ಯಾಚ್ ಕೈಚೆಲ್ಲಿದ ರೋಹಿತ್; ಅಕ್ಷರ್‌ಗೆ ಕೈತಪ್ಪಿದ ಹ್ಯಾಟ್ರಿಕ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2025, 10:25 IST
Last Updated 20 ಫೆಬ್ರುವರಿ 2025, 10:25 IST
<div class="paragraphs"><p>ಸುಲಭ ಕ್ಯಾಚ್ ಕೈಚೆಲ್ಲಿದ ರೋಹಿತ್ ಶರ್ಮಾ</p></div>

ಸುಲಭ ಕ್ಯಾಚ್ ಕೈಚೆಲ್ಲಿದ ರೋಹಿತ್ ಶರ್ಮಾ

   

(ಟ್ವಿಟರ್ ಸ್ಕ್ರೀನ್‌ಶಾಟ್)

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ 'ಎ' ಗುಂಪಿನಲ್ಲಿ ಇಂದು (ಗುರುವಾರ) ದುಬೈಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶದ ಸವಾಲನ್ನು ಎದುರಿಸುತ್ತಿದೆ.

ADVERTISEMENT

ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ತಂಡದ ಆರಂಭ ಉತ್ತಮವಾಗಿರಲಿಲ್ಲ. 8.3 ಓವರ್‌ಗಳಲ್ಲಿ 35 ರನ್ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ನಡುವೆ ನಾಯಕ ರೋಹಿತ್ ಶರ್ಮಾ ಅವರು ಸುಲಭ ಕ್ಯಾಚ್ ಕೈಚೆಲ್ಲಿದ ಹಿನ್ನೆಲೆಯಲ್ಲಿ ಭಾರತೀಯ ಸ್ಪಿನ್ನರ್ ಅಕ್ಷರ್ ಪಟೇಲ್ ಅವರಿಗೆ 'ಹ್ಯಾಟ್ರಿಕ್' ವಿಕೆಟ್ ಗಳಿಸುವ ಅಪರೂಪದ ಅವಕಾಶ ನಷ್ಟವಾಯಿತು.

ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ತಮ್ಮ ಮೊದಲ ಓವರ್ ಎಸೆಯಲು ಅಕ್ಷರ್ ದಾಳಿಗಿಳಿದರು. ಮೊದಲ ಎಸೆತದಲ್ಲಿ ರನ್ ಬಿಟ್ಟುಕೊಡದ ಅಕ್ಷರ್ ಎರಡನೇ ಎಸೆತದಲ್ಲಿ ತನ್ಜೀದ್ ಹಸನ್ (25) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

ತನ್ಜೀದ್ ಬ್ಯಾಟ್‌ಗೆ ಸವರಿದ ಚೆಂಡು ನೇರವಾಗಿ ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ಅವರ ಕೈಸೇರಿತು. ಇದರ ಆ್ಯಕ್ಷನ್ ರಿಪ್ಲೇ ಎಂಬಂತೆ ನಂತರದ ಎಸೆತದಲ್ಲಿ ಬಾಂಗ್ಲಾದೇಶದ ಅನುಭವಿ ಬ್ಯಾಟರ್ ಮುಷ್ಫಿಕುರ್ ರಹೀಮ್‌ ಅವರಿಗೂ ಪೆವಿಲಿಯನ್ ಹಾದಿ ತೋರಿಸಿದರು. ಮುಷ್ಫಿಕುರ್ ಖಾತೆ ತೆರೆಯುವಲ್ಲಿ ವಿಫಲರಾದರು. ಈ ಕ್ಯಾಚ್ ಕೂಡ ರಾಹುಲ್ ಪಾಲಾಯಿತು.

ಇದರೊಂದಿಗೆ ಹ್ಯಾಟ್ರಿಕ್ ವಿಕೆಟ್ ಗಳಿಸುವ ಅವಕಾಶ ಅಕ್ಷರ್‌ಗೆ ಒದಗಿ ಬಂದಿತ್ತು. ಆದರೆ ನಾಲ್ಕನೇ ಎಸೆತದಲ್ಲಿ ಜಾಕರ್ ಅಲಿ ಬ್ಯಾಟ್‌ಗೆ ಸವರಿದ ಚೆಂಡು ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋಹಿತ್ ಶರ್ಮಾ ಕ್ಯಾಚ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು.

ಸುಲಭ ಕ್ಯಾಚ್ ಕೈಚೆಲ್ಲಿದ್ದರಿಂದ ಜಾಕರ್ ಅಲಿಗೆ ಜೀವದಾನ ದೊರಕಿತು. ಮತ್ತೊಂದೆಡೆ ರೋಹಿತ್ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.