ADVERTISEMENT

Champions Trophy | ಕುಟುಂಬದಲ್ಲಿ ತುರ್ತು: ತವರಿಗೆ ಮರಳಿದ ಬೌಲಿಂಗ್ ಕೋಚ್

ಪಿಟಿಐ
Published 18 ಫೆಬ್ರುವರಿ 2025, 9:01 IST
Last Updated 18 ಫೆಬ್ರುವರಿ 2025, 9:01 IST
<div class="paragraphs"><p>ಮೊಹಮ್ಮದ್ ಶಮಿ, ಮಾರ್ನೆ ಮಾರ್ಕೆಲ್</p></div>

ಮೊಹಮ್ಮದ್ ಶಮಿ, ಮಾರ್ನೆ ಮಾರ್ಕೆಲ್

   

(ಪಿಟಿಐ ಚಿತ್ರ)

ದುಬೈ: ಕುಟುಂಬದಲ್ಲಿ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ತವರೂರಾದ ದಕ್ಷಿಣ ಆಫ್ರಿಕಾಗೆ ಮರಳಿದ್ದಾರೆ.

ADVERTISEMENT

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿರುವಂತೆಯೇ ಟೀಮ್ ಇಂಡಿಯಾದ ಶಿಬಿರವನ್ನು ಮಾರ್ಕೆಲ್ ತೊರೆದಿದ್ದಾರೆ.

ಗೌತಮ್ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕಗೊಳಿಸಿದ ಬಳಿಕ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಾರ್ಕೆಲ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿತ್ತು.

40 ವರ್ಷದ ಮಾರ್ಕೆಲ್, ಕಳೆದ ಶನಿವಾರ ಭಾರತದ ತಂಡದೊಂದಿಗೆ ದುಬೈಗೆ ಪಯಣ ಬೆಳೆಸಿದ್ದರು. ಅಲ್ಲದೆ ಮೊದಲ ಅಭ್ಯಾಸ ಅವಧಿಯಲ್ಲೂ ತಂಡದ ಜೊತೆಗಿದ್ದರು. ಆದರೆ ಸೋಮವಾರ ನಡೆದ ಎರಡನೇ ಅಭ್ಯಾಸದ ಅವಧಿಯಲ್ಲಿ ಪಾಲ್ಗೊಂಡಿರಲಿಲ್ಲ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಭಿಯಾನ ಗುರುವಾರ ಆರಂಭವಾಗಲಿದೆ. ರೋಹಿತ್ ಶರ್ಮಾ ಬಳಗವು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.

ಗಾಯಾಳು ಜಸ್‌ಪ್ರೀತ್ ಬೂಮ್ರಾ ಟೂರ್ನಿಯಿಂದಲೇ ನಿರ್ಗಮಿಸಿರುವ ಹಿನ್ನೆಲೆಯಲ್ಲಿ ವೇಗದ ಬೌಲಿಂಗ್ ವಿಭಾಗದ ಜವಾಬ್ದಾರಿ ಅರ್ಷದೀಪ್ ಸಿಂಗ್, ಹರ್ಷೀತ್ ರಾಣಾ, ಮೊಹಮ್ಮದ್ ಶಮಿ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಮೇಲಿದೆ.

ಪಾಕಿಸ್ತಾನದ ಆತಿಥ್ಯದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಯಾಗುತ್ತಿದೆ. ಭಾರತ ತನ್ನೆಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯವು ಭಾನುವಾರ (ಫೆ.23) ನಿಗದಿಯಾಗಿದೆ.

ನಾಳೆ (ಬುಧವಾರ) ಕರಾಚಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನವು ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.