ADVERTISEMENT

IPL 2025 MI vs CSK | ಮುಂಬೈ ಬ್ಯಾಟಿಂಗ್ ಪಡೆಗೆ ಚೆನ್ನೈ ಸ್ಪಿನ್ ಸವಾಲು

ಚೆಪಾಕ್‌ನಲ್ಲಿ ಋತುರಾಜ್‌, ಯಾದವ್ ಪಡೆಗಳ ಹಣಾಹಣಿ ಇಂದು; ಮಹಿ, ಹಿಟ್‌ಮ್ಯಾನ್ ಮೇಲೆ ಕಣ್ಣು

ಪಿಟಿಐ
Published 22 ಮಾರ್ಚ್ 2025, 23:30 IST
Last Updated 22 ಮಾರ್ಚ್ 2025, 23:30 IST
<div class="paragraphs"><p>ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಹೇಂದ್ರಸಿಂಗ್ ಧೋನಿ ಮತ್ತು ನಾಯಕ ಋತುರಾಜ್ ಗಾಯಕವಾಡ&nbsp; </p></div>

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಹೇಂದ್ರಸಿಂಗ್ ಧೋನಿ ಮತ್ತು ನಾಯಕ ಋತುರಾಜ್ ಗಾಯಕವಾಡ 

   

–ಪಿಟಿಐ ಚಿತ್ರ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಲಾ ಐದು ಸಲ ಪ್ರಶಸ್ತಿ ಜಯಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು  ಮುಂಬೈ ಇಂಡಿಯನ್ಸ್ ತಂಡಗಳು ಭಾನುವಾರ ಮುಖಾಮುಖಿಯಾಗಲಿವೆ. 

ADVERTISEMENT

ಋತುರಾಜ್ ಗಾಯಕವಾಡ ನಾಯಕತ್ವದ ಚೆನ್ನೈ ತಂಡವು ತನ್ನ ಸ್ಪಿನ್ ವಿಭಾಗದ ಮೇಲೆ ಹೆಚ್ಚು ವಿಶ್ವಾಸ ಇಟ್ಟುಕೊಂಡಿದೆ. ಮೆಗಾ ಹರಾಜಿನಲ್ಲಿ ಸ್ಪಿನ್‌ ಬೌಲರ್‌ಗಳ ಸೇರ್ಪಡೆಗೆ ಹೆಚ್ಚು ಒತ್ತು ನೀಡಿತ್ತು. ತಂಡದಲ್ಲಿ ಈಗಾಗಲೇ ಇರುವ ರವೀಂದ್ರ ಜಡೇಜ ಅವರೊಂದಿಗೆ ಆಫ್‌ಸ್ಪಿನ್ ದಂತಕಥೆ ಆರ್. ಅಶ್ವಿನ್, ನೂರ್ ಅಹಮದ್,  ಕನ್ನಡಿಗ ಶ್ರೇಯಸ್ ಗೋಪಾಲ್  ಮತ್ತು ದೀಪಕ್ ಹೂಡಾ ತಂಡದಲ್ಲಿದ್ದಾರೆ. ಆಲ್‌ರೌಂಡರ್ ರಚಿನ್ ರವೀಂದ್ರ ಕೂಡ ಇವರಿಗೆ ಜೊತೆ ನೀಡುತ್ತಾರೆ.  ನಾಯಕ ಋತುರಾಜ್, ರಾಹುಲ್ ತ್ರಿಪಾಠಿ, ಡೆವೊನ್ ಕಾನ್ವೆ ಹಾಗೂ ಮಹೇಂದ್ರಸಿಂಗ್ ಧೋನಿ ಅವರು ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಸ್ಯಾಮ್ ಕರನ್, ಖಲೀಲ್ ಅಹಮದ್ ಹಾಗೂ ಮಥಿಷ್ ಪಥಿರಾಣಾ ವೇಗದ ವಿಭಾಗವನ್ನು ನಿರ್ವಹಿಸುವುದು ಖಚಿತ. 

ಮುಂಬೈ ತಂಡದ ಬೌಲಿಂಗ್ ಶಕ್ತಿ ಜಸ್‌ಪ್ರೀತ್ ಬೂಮ್ರಾ ಕಣಕ್ಕಿಳಿಯುವುದು ಖಚಿತವಾಗಿಲ್ಲ. ಆದ್ದರಿಂದ ನಾಯಕ ಹಾರ್ದಿಕ್ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ. ಹೋದ ವರ್ಷದ ಟೂರ್ನಿಯ 3 ಪಂದ್ಯಗಳಲ್ಲಿ ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸದ ಕಾರಣ ಒಂದು ಪಂದ್ಯದ ಅಮಾನತು ಶಿಕ್ಷೆಗೆ ಒಳಗಾಗಿದ್ದರು. ಅದು ಈ ಪಂದ್ಯದಲ್ಲಿ ಜಾರಿಯಾಗಲಿದೆ. ಆದ್ದರಿಂದ ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸುವರು. ಇದರಿಂದಾಗಿ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್ ಅವರ ಮೇಲೆ ಅವಲಂಬಿತವಾಗಬಹುದು. ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಪ್ರಮುಖರಾಗಿದ್ದಾರೆ. ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಸೂರ್ಯ, ರೋಹಿತ್, ತಿಲಕ್ ವರ್ಮಾ, ರಿಯಾನ್ ರಿಕೆಲ್ಟನ್ ಅವರು ಅಬ್ಬರಿಸುವ ನಿರೀಕ್ಷೆ ಇದೆ. ತಂಡದಲ್ಲಿರುವ ಕರ್ನಾಟಕದ ಶ್ರೀಜಿತ್ ಕೃಷ್ಣನ್ ಅವರಿಗೆ ಅವಕಾಶದ ನಿರೀಕ್ಷೆ ಇದೆ.

ಇಲ್ಲಿಯ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ನಿರೀಕ್ಷೆ ಇದೆ. ರಾತ್ರಿ ಹೊತ್ತಿನ ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದರಿಂದ ಎರಡನೇ ಅವಧಿಯಲ್ಲಿ ಬೌಲಿಂಗ್ ಮಾಡುವುದು ಸವಾಲಾಗಲಿದೆ. ಆದ್ದರಿಂದ ಟಾಸ್ ಜಯಿಸುವ ನಾಯಕ ತೆಗೆದುಕೊಳ್ಳುವ ನಿರ್ಧಾರ ಮುಖ್ಯವಾಗಲಿದೆ. 

ಬಲಾಬಲ

ಪಂದ್ಯ; 37

ಚೆನ್ನೈ ಜಯ; 17

ಮುಂಬೈ ಜಯ; 20

ಗರಿಷ್ಠ ಸ್ಕೋರು

ಚೆನ್ನೈ; 218

ಮುಂಬೈ; 219

ಕನಿಷ್ಠ ಸ್ಕೋರು

ಚೆನ್ನೈ; 79

ಮುಂಬೈ; 136 

ನಿಕಟಪೂರ್ವ ನಾಯಕರ ಮುಖಾಮುಖಿ

* ಮಹೇಂದ್ರಸಿಂಗ್ ಧೋನಿ

ಪಂದ್ಯ 264; ರನ್ 5243; ಶ್ರೇಷ್ಠ 84; ಅರ್ಧಶತಕ 24; ಕ್ಯಾಚ್ 152; ಸ್ಟಂಪ್ಡ್  42; ಸ್ಟ್ರೈಕ್‌ರೇಟ್ 137.53  ವಯಸ್ಸು 43

* ರೋಹಿತ್ ಶರ್ಮಾ

ಪಂದ್ಯ 257; ರನ್ 6628; ಶ್ರೇಷ್ಠ 109*; ಶತಕ 2; ಅರ್ಧಶತಕ 43; ಕ್ಯಾಚ್ 101; ಸ್ಟ್ರೈಕ್‌ರೇಟ್ 131.14; ವಯಸ್ಸು 37

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಫೋರ್ಟ್ಸ್, ಜಿಯೊ ಹಾಟ್‌ಸ್ಟಾರ್. 

ಸೂರ್ಯಕುಮಾರ್ ಯಾದವ್
ರೋಹಿತ್ ಶರ್ಮಾ

ಸನ್‌ರೈಸರ್ಸ್‌- ರಾಯಲ್ಸ್‌ ಮುಖಾಮುಖಿ ಇಂದು

ಹೈದರಾಬಾದ್‌ : ಉತ್ತಮ ಬ್ಯಾಟಿಂಗ್ ಲೈನ್‌ಅಪ್ ಮತ್ತು ಅನುಭವಿ ಬೌಲರ್‌ಗಳನ್ನು ಹೊಂದಿರುವ ಹಾಲಿ ರನ್ನರ್ಸ್‌ ಅಪ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 18ನೇ ಆವೃತ್ತಿಯಲ್ಲಿ ಭಾನುವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ತವರಿನಲ್ಲಿ ಅಭಿಯಾನ ಆರಂಭಿಸಲಿದೆ.

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ ಗಳನ್ನು ಒಳಗೊಂಡ ಆತಿಥೇಯ ತಂಡವು ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬೃಹತ್ ಮೊತ್ತವನ್ನು ಗಳಿಸುವ ನಿರೀಕ್ಷೆಯಿದೆ. ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದಿಂದ ಚೇತರಿಸಿಕೊಂಡಿರುವುದು ತಂಡದ ಬಲ ಹೆಚ್ಚಿಸಿದೆ. ಅನುಭವಿ ವೇಗಿಗಳಾದ ನಾಯಕ ಪ್ಯಾಟ್ ಕಮಿನ್ಸ್, ಮೊಹಮ್ಮದ್ ಶಮಿ, ಸ್ಪಿನ್ನರ್ ಆ್ಯಡಂ ಜಂಪಾ ಅವರು ಬೌಲಿಂಗ್‌ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ.

ರಾಜಸ್ಥಾನ ತಂಡವನ್ನು ಮೊದಲ ಮೂರು ಪಂದ್ಯಗಳಲ್ಲಿ ರಿಯಾನ್‌ ಪರಾಗ್‌ ಮುನ್ನಡೆಸಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಕಾಯಂ ನಾಯಕ ಸಂಜು ಸ್ಯಾಮ್ಸನ್ ಸಂಜು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರೆ ಆಶ್ಚರ್ಯ ವಿಲ್ಲ. ಇಂಗ್ಲೆಂಡ್‌ನ ಜೋಸ್ ಬಟ್ಲರ್‌ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವುದರಿಂದ ಬ್ಯಾಟಿಂಗ್ ಬಲ ಕೊಂಚ ಕಡಿಮೆಯಾಗಿದೆ. ಹೀಗಾಗಿ, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ನಿತೀಶ್ ರಾಣಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.