ನಾಗಪುರದ ವಿಸಿಎ ಕ್ರೀಡಾಂಗಣದಲ್ಲಿ ಬುಧವಾರ ಅಭ್ಯಾಸ ನಡೆಸಿದ ಭಾರತ ತಂಡದ ಆಟಗಾರರಾದ ವಿರಾಟ್ ಕೊಹ್ಲಿ, ಅರ್ಷದೀಪ್ ಸಿಂಗ್, ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ
–ಪಿಟಿಐ ಚಿತ್ರ
ನಾಗಪುರ: ಇನ್ನೆರಡು ವಾರ ಕಳೆದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದೆ. ಅದಕ್ಕಾಗಿ ತಂಡಗಳು ಭರದ ಸಿದ್ಧತೆ ಆರಂಭಿಸಿವೆ.
ಗುರುವಾರ ಶುರುವಾಗುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ಕೂಡ ಭಾರತ ಮತ್ತು ಇಂಗ್ಲೆಂಡ್ ತಂಡಗಳಿಗೆ ಪೂರ್ವಾಭ್ಯಾಸ ವೇದಿಕೆಯಾಗಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಈಗಾಗಲೇ ರೋಹಿತ್ ಶರ್ಮಾ ನಾಯಕತ್ವದ ತಂಡವನ್ನು ಆಯ್ಕೆ ಮಾಡಲಾಗಿದೆ. ಆದರೆ ಕೊನೆಯ ಹಂತದ ಬದಲಾವಣೆ ಮಾಡಲು ಫೆಬ್ರುವರಿ 12 ಅಂತಿಮ ದಿನವಾಗಿದೆ. ಆ ಕಾರಣಕ್ಕೂ ಈ ಸರಣಿ ಕುತೂಹಲ ಮೂಡಿಸಿದೆ.
ಕೆಂಪು ಚೆಂಡಿನ ಕ್ರಿಕೆಟ್ ಮಾದರಿಯಲ್ಲಿ ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಬ್ಬರೂ ವಿಫಲರಾಗಿದ್ದಾರೆ. ರಣಜಿ ಟ್ರೋಫಿ ಪಂದ್ಯಗಳಲ್ಲಿಯೂ ಲಯ ಕಂಡುಕೊಳ್ಳಲಿಲ್ಲ. ಆದ್ದರಿಂದ ಅವರು ಕೂಡ ಈ ಸರಣಿಯಲ್ಲಿ ಪರೀಕ್ಷೆಗೊಳಗಾಗಲಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ 765 ಮತ್ತು ರೋಹಿತ್ 597 ರನ್ ಗಳಿಸಿದ್ದರು.
ಆ ಟೂರ್ನಿಯಲ್ಲಿ ಭಾರತ ಫೈನಲ್‌ನಲ್ಲಿ ಸೋತಿತ್ತು. ಅಲ್ಲಿಂದ ಇಲ್ಲಿಯವರೆಗೆ ವಿರಾಟ್ ಮತ್ತು ರೋಹಿತ್ ಅವರು ಶ್ರೀಲಂಕಾ ಎದುರಿನ ಏಕದಿನ ಸರಣಿಯಲ್ಲಿ ಆಡಿದ್ದಾರೆ. ಅದರಲ್ಲಿ ರೋಹಿತ್ ಎರಡು ಅರ್ಧಶತಕ ಗಳಿಸಿದ್ದರು. ವಿರಾಟ್ ವೈಫಲ್ಯ ಅನುಭವಿಸಿದ್ದರು.
ಚಾಂಪಿಯನ್ಸ್ ಟ್ರೋಫಿ ಟೂರ್ನಿಗಿಂತ ಮುಂಚೆ ಭಾರತಕ್ಕೆ ಪೂರ್ವಾಭ್ಯಾಸಕ್ಕಾಗಿ ಸಿಗುವ ಏಕೈಕ ಸರಣಿ ಇಂಗ್ಲೆಂಡ್ ಎದುರಿನದ್ದು. ಫೆಬ್ರುವರಿ 19ರಿಂದ ಆರಂಭವಾಗಲಿದೆ. ಪಾಕಿಸ್ತಾನ ಮತ್ತು ದುಬೈನಲ್ಲಿ ಪಂದ್ಯಗಳು ನಡೆಯಲಿವೆ. ಹೋದವರ್ಷ ಭಾರತ ತಂಡವು ಟಿ20 ವಿಶ್ವಕಪ್ ಗೆದ್ದ ನಂತರ ಇಬ್ಬರೂ ತಾರಾ ಆಟಗಾರರಾದ ವಿರಾಟ್ ಮತ್ತು ರೋಹಿತ್ ಚುಟುಕು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
ಇದಲ್ಲದೇ ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಅವರಲ್ಲಿ ಯಾರು 11ರ ಬಳಗದಲ್ಲಿ ಸ್ಥಾನ ಪಡೆಯುವರು ಎಂಬ ಕುತೂಹಲವೂ ಇದೆ. ರೋಹಿತ್ ಮತ್ತು ಉಪನಾಯಕ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ನಂತರದ ಕ್ರಮಾಂಕದಲ್ಲಿ ವಿರಾಟ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಮತ್ತು ಐದನೇ ಕ್ರಮಾಂಕದಲ್ಲಿ ವಿಕೆಟ್‌ಕೀಪರ್–ಬ್ಯಾಟರ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು.
2023ರ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ವಿಕೆಟ್‌ಕೀಪಿಂಗ್ ನಿಭಾಯಿಸಿದ್ದರು. ಆಗ ಒಟ್ಟು 452 ರನ್ ಕೂಡ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಅವರು ಸ್ಥಿರತೆ ಪ್ರದರ್ಶಿಸಿದ್ದರು. ಇನ್ನೊಂದೆಡೆ ರಿಷಭ್ ಅವರಿಗೆ ಅವಕಾಶ ಕೊಡುವುದರಿಂದ ಮಧ್ಯಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಲಭಿಸುತ್ತಾರೆ. ಇದು ತಂಡಕ್ಕೆ ಹೆಚ್ಚು ಅನುಕೂಲವಾಗಬಹುದು ಎಂಬ ಅಭಿಪ್ರಾಯವೂ ಇದೆ.
ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ವೇಗಿ ಮೊಹಮ್ಮದ್ ಶಮಿ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೂ ಈ ಸರಣಿ ಪರೀಕ್ಷಾ ಕಣವಾಗಿದೆ. ಈಚೆಗೆ ಅವರು ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ಎರಡು ಪಂದ್ಯಗಳನ್ನು ಆಡಿದ್ದರು. ಕುಲದೀಪ್ ಅವರು ಹೋದ ವರ್ಷ ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡಿದ್ದರು. ಅದರ ನಂತರ ಈಗಲೇ ಅವರು ಕಣಕ್ಕೆ ಇಳಿಯುತ್ತಿದ್ದಾರೆ. ಈ ಸರಣಿಯಲ್ಲಿ ಬೂಮ್ರಾ ಲಭ್ಯರಿಲ್ಲ. ವಿಶ್ವಕಪ್ ನಂತರ ರವೀಂದ್ರ ಜಡೇಜ ಏಕದಿನ ಮಾದರಿಯಲ್ಲಿ ಆಡಿಲ್ಲ. ಆದ್ದರಿಂದ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೇ ಅವಕಾಶ ಸಿಗುವ ಸಾಧ್ಯತೆ ಹೆಚ್ಚು.
ಇಂಗ್ಲೆಂಡ್ ತಂಡದಲ್ಲಿ ನಾಯಕ ಜೋಸ್ ಬಟ್ಲರ್ ಲಯಕ್ಕೆ ಮರಳಿದರೆ ದೊಡ್ಡ ಬಲ ಬಂದಂತಾಗುತ್ತದೆ. ಹ್ಯಾರಿ ಬ್ರೂಕ್, ಬೆನ್ ಡಕೆಟ್, ಫೀಲಿಪ್ ಸಾಲ್ಟ್ ಉತ್ತಮ ಲಯದಲ್ಲಿದ್ದಾರೆ. ಜೋ ರೂಟ್ ಕೂಡ ತಂಡಕ್ಕೆ ಮರಳಿದ್ದಾರೆ. ಇದರಿಂದಾಗಿ ಬ್ಯಾಟಿಂಗ್ ಉತ್ತಮವಾಗಿದೆ. ವೇಗಿ ಜೋಫ್ರಾ ಆರ್ಚರ್ ಮತ್ತು ಸ್ಪಿನ್ನರ್ ಆದಿಲ್ ರಶೀದ್ ಅವರಿರುವ ಬೌಲಿಂಗ್ ಬಳಗವು ಆತಿಥೇಯ ಬ್ಯಾಟರ್‌ಗಳಿಗೆ ಸವಾಲೊಡ್ಡಲು ಸಿದ್ಧವಾಗಿದೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ) ಶುಭಮನ್ ಗಿಲ್ (ಉಪನಾಯಕ) ಯಶಸ್ವಿ ಜೈಸ್ವಾಲ್ ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಕೆ.ಎಲ್. ರಾಹುಲ್ ರಿಷಭ್ ಪಂತ್ (ಇಬ್ಬರು ವಿಕೆಟ್‌ಕೀಪರ್) ಹಾರ್ದಿಕ್ ಪಾಂಡ್ಯ ರವೀಂದ್ರ ಜಡೇಜ ವಾಷಿಂಗ್ಟನ್ ಸುಂದರ್ ಅಕ್ಷರ್ ಪಟೇಲ್ ಕುಲದೀಪ್ ಯಾದವ್ ಹರ್ಷಿತ್ ರಾಣಾ ಮೊಹಮ್ಮದ್ ಶಮಿ ಅರ್ಷದೀಪ್ ಸಿಂಗ್ ವರುಣ ಚಕ್ರವರ್ತಿ.
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ) ಹ್ಯಾರಿ ಬ್ರೂಕ್ ಬೆನ್ ಡಕೆಟ್ ಜೋ ರೂಟ್ ಫೀಲಿಪ್ ಸಾಲ್ಟ್ ಜೇಮಿ ಸ್ಮಿತ್ ಜೇಕಬ್ ಬೆಥೆಲ್ ಬ್ರೈಡನ್ ಕೇರ್ಸ್ ಲಿಯಾಮ್ ಲಿವಿಂಗ್‌ಸ್ಟೋನ್ ಜೇಮಿ ಓವರ್ಟನ್ ಜೋಫ್ರಾ ಆರ್ಚರ್ ಗಸ್ ಅಟ್ಕಿನ್ಸನ್ ಸಕೀಬ್ ಮೆಹಮೂದ್ ಆದಿಲ್ ರಶೀದ್ ಮಾರ್ಕ್ ವುಡ್.
ಪಂದ್ಯ ಆರಂಭ: ಮಧ್ಯಾಹ್ನ 1.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.