ADVERTISEMENT

ಕೋವಿಡ್–19 | ದೇಶ ಸಹಜ ಸ್ಥಿತಿಗೆ ಮರಳಿದರಷ್ಟೇ ಐಪಿಎಲ್: ರೋಹಿತ್ ಶರ್ಮಾ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 7:33 IST
Last Updated 27 ಮಾರ್ಚ್ 2020, 7:33 IST
   

ಮುಂಬೈ: ಕೋವಿಡ್‌–19ನ ಭೀತಿಯಿಂದಾಗಿ ದೇಶದಲ್ಲಿ ಸೃಷ್ಟಿಯಾಗಿರುವ ಪ್ರಸ್ತುತ ಸನ್ನಿವೇಶವುಸಹಜ ಸ್ಥಿತಿಗೆ ಮರಳಿದ ಬಳಿಕ ಐಪಿಎಲ್‌ 13ನೇ ಆವೃತ್ತಿಜರುಗಲಿದೆ ಎಂದು ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಹೇಳಿದ್ದಾರೆ.

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್‌ ಪೀಟರ್ಸನ್‌ ಅವರೊಂದಿಗೆ ನಡೆಸಿದ ಲೈವ್‌ ಚಾಟ್‌ನಲ್ಲಿ ಅವರು ಮಾತನಾಡಿದರು.

ಈ ವೇಳೆ ‘ಐಪಿಎಲ್‌ ಈ ವರ್ಷನಡೆಯಲಿದೆಯೇಅಥವಾ ಮುಂದಿನ ವರ್ಷಕ್ಕೆ ಮುಂದೂಡಲಾಗುತ್ತದೆಯೇ’ ಎಂದು ಪೀಟರ್ಸನ್‌ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ, ‘ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದರೆ ನಡೆಯಬಹುದು. ಆದರೆ, ಅದು ಯಾವಾಗ ಆಗುತ್ತದೆ ಎಂದು ಯಾರಿಗೆ ಗೊತ್ತು?’ ಎಂದರು.

ADVERTISEMENT

ಈ ಬಾರಿಯ ಐಪಿಎಲ್‌ ಟೂರ್ನಿಯು ಇದೇ ತಿಂಗಳು 29ರಿಂದ ಆರಂಭವಾಗಬೇಕಿತ್ತು. ಆದರೆ, ಕೋವಿಡ್‌–19 ಹರಡುವ ಭೀತಿಯಿಂದಾಗಿ ಮುಂದಿನ ತಿಂಗಳು 15ರ ವರೆಗೆ ಮುಂದೂಡಲಾಗಿದೆ.

‘ಬಿಸಿಸಿಐ ತನ್ನ ಎಲ್ಲ ಪಾಲುದಾರರು ಹಾಗೂ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಸೂಕ್ಷ್ಮತೆಯನ್ನು ಹೊಂದಿದೆ. ಅಭಿಮಾನಿಗಳೂ ಸೇರಿದಂತೆ, ಐಪಿಎಲ್‌ಗೆ ಸಂಬಂಧಿಸಿದ ಪ್ರತಿಯೊಬ್ಬರೂ ಸುರಕ್ಷಿತ ಕ್ರಿಕೆಟಿಂಗ್ ಅನುಭವ ಪಡೆಯಲಿದ್ದಾರೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದರು.

ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ 724ಕ್ಕೆ ಏರಿಕೆಯಾಗಿದೆ . ಜಗತ್ತಿನಾದ್ಯಂತ ಸುಮಾರು 5.3 ಲಕ್ಷ ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 22ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.