ADVERTISEMENT

ಧೋನಿ ತಮ್ಮದೇ ರೀತಿಯಲ್ಲಿ ಸಿದ್ಧವಾಗುತ್ತಿರಬಹುದು: ಟಿ20 ವಿಶ್ವಕಪ್ ಹೀರೋ ಜೋಗಿಂದರ್

‘ಕ್ರಿಕೆಟ್‌ನ ಶ್ರೇಷ್ಠ ನಾಯಕ ಎನಿಸಿಕೊಂಡವರ ನಾಯಕತ್ವದಲ್ಲಿ ಆಡಿದ್ದರಿಂದ ವಿಶ್ವಕಪ್ ಗೆದ್ದಿದ್ದೆವು’

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 10:21 IST
Last Updated 27 ಜನವರಿ 2020, 10:21 IST
   

2019ರ ಏಕದಿನ ವಿಶ್ವಕಪ್‌ ಬಳಿಕ ಆಟದಿಂದ ದೂರ ಉಳಿದಿರುವ ಮಹೇಂದ್ರ ಸಿಂಗ್‌ ಧೋನಿ ಕ್ರಿಕೆಟ್‌ ಭವಿಷ್ಯದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಭಿಮಾನಿಗಳು ಮಾತ್ರವಲ್ಲದೆ ಸಾಕಷ್ಟು ಹಿರಿಯ ಕ್ರಿಕೆಟಿಗರು ತಮ್ಮದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆ ಪಟ್ಟಿಗೆ ಹೊಸ ಸೇರ್ಪಡೆ ಜೋಗಿಂದರ್‌ ಶರ್ಮಾ. ಮೊದಲ ಟಿ20 ವಿಶ್ವಕಪ್‌ನಲ್ಲಿ ಅಂತಿಮ ಓವರ್‌ ಬೌಲ್‌ ಮಾಡಿ ರಾತ್ರೋರಾತ್ರಿ ಹೀರೋ ಆಗಿದ್ದವರು ಜೋಗಿಂದರ್‌.

ಅವರು ಇತ್ತೀಚೆಗೆ ನಡೆದ ಕ್ರೀಡಾ ಉತ್ಸವವೊಂದರ ಸಂದರ್ಭದಲ್ಲಿ, ‘ಧೋನಿ ಮಾನಸಿಕವಾಗಿ ಮತ್ತು ದೈಹಿಕವಾಗಿಬಹಳ ಗಟ್ಟಿಗ. ಅವರ ಈ ನಿರ್ಧಾರದ ಹಿಂದೆ (2019ರ ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಬಳಿಕ ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ನಿರ್ಧಾರದ ಹಿಂದೆ) ಸಾಕಷ್ಟು ಕಾರಣಗಳು ಖಂಡಿತ ಇರುತ್ತವೆ. ಅವರಿಗೆ ಕುಟುಂಬವಿದೆ. ವೈಯಕ್ತಿಕ ಬದುಕಿದೆ. ಬಹುಶಃ ಅವರು ತನ್ನದೇ ರೀತಿಯಲ್ಲಿ ತಯಾರಿ ನಡೆಸಿಕೊಳ್ಳುತ್ತಿರಬಹುದು’ ಎಂದು ಮಾತನಾಡಿದ್ದಾರೆ.

2007ರ ವಿಶ್ವಕಪ್ ಗೆಲುವಿನ ಬಗ್ಗೆಯೂ ಹೇಳಿರುವ ಜೋಗಿಂದರ್‌, ‘ಅದೇ ವರ್ಷ (2007ರ ಮಾರ್ಚ್‌–ಏಪ್ರಿಲ್‌ನಲ್ಲಿ) ವೆಸ್ಟ್‌ಇಂಡೀಸ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧವೇ ಸೋಲು ಕಂಡಿದ್ದೆವು. ಹಾಗಾಗಿ ಹಿರಿಯ ಆಟಗಾರರು ವಿಶ್ರಾಂತಿ ಪಡೆದಿದ್ದರು. ಚುಟುಕು ವಿಶ್ವಕಪ್‌ಗೆ ಆಯ್ಕೆಯಾಗಿದ್ದ ತಂಡದಲ್ಲಿ ಕೆಲವರನ್ನು ಬಿಟ್ಟರೆ, ಬಹುತೇಕ ಹೊಸಬರೇ ಇದ್ದರು. ಧೋನಿ ಮೊದಲ ಸಲ ನಾಯಕತ್ವ ವಹಿಸಿದ್ದರು’

‘ನಾವು ನಾಕೌಟ್‌ ಹಂತಕ್ಕಾದರೂ ತಲುಪಲಿದ್ದೇವೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ. ಆದರೆ ನಾವು ಮುಂದೊಂದು ದಿನ ಈ ಕ್ರೀಡೆಯ ಶ್ರೇಷ್ಠ ನಾಯಕ ಎನಿಸಿಕೊಂಡವರ ನಾಯಕತ್ವದಲ್ಲಿ ಆಡಿದ್ದರ ಫಲವಾಗಿ ಟ್ರೋಫಿಯನ್ನೇ ಗೆದ್ದೆವು’ ಎಂದು ಅಭಿಪ್ರಾಯಪಟ್ಟಿದ್ದಾರೆ.

2017ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಫೈನಲ್‌ನಲ್ಲಿಕ್ರಿಕೆಟ್‌ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳು ಎನಿಸಿದ್ದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 157 ರನ್‌ ಗಳಿಸಿತ್ತು. ಮೊತ್ತ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಮಿಸ್ಬಾ ಉಲ್‌ ಹಕ್‌ ಆಸರೆಯಾಗಿದ್ದರು. ಅವರ ಆಟದ ಬಲದಿಂದ ಪಾಕಿಸ್ತಾನ 19 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಿತ್ತು. ಹೀಗಾಗಿ ಅಂತಿಮ ಓವರ್‌ನಲ್ಲಿ 13 ರನ್‌ ಗಳಿಸಬೇಕಿತ್ತು.

ಪಾಕಿಸ್ತಾನ ಬಳಿ ಇದ್ದದ್ದು ಒಂದೇ ವಿಕೆಟ್‌ ಆದರೂ, ಸ್ಟ್ರೈಕ್‌ನಲ್ಲಿ ಮಿಸ್ಬಾ ಇದ್ದುದರಿಂದ ಜಯದ ಭರವಸೆ ಉಳಿದಿತ್ತು. ನಾನ್‌ಸ್ಟ್ರೈಕ್‌ನಲ್ಲಿವೇಗಿ ಮೊಹಮ್ಮದ್‌ ಆಸಿಫ್‌ ಉಳಿದಿದ್ದರು.

ರೋಚಕ ಪಂದ್ಯವು ಪ್ರೇಕ್ಷಕರನ್ನು ಕುರ್ಚಿ ತುದಿಗೆ ತಂದು ಕೂರಿಸಿತ್ತು. ಈ ವೇಳೆ ನಾಯಕ ಧೋನಿ ಅಚ್ಚರಿಯೆಂಬಂತೆ ಜೋಗಿಂದರ್‌ ಶರ್ಮಾಗೆ ಚೆಂಡು ನೀಡಿದರು. ಆಗ ಬಹುತೇಕರು ಇನ್ನೇನು ವಿಶ್ವಕಪ್‌ ಭಾರತದ ಕೈಯಿಂದ ಜಾರಿತು ಎಂದು ನಿರ್ಧರಿಸಿಬಿಟ್ಟಿದ್ದರು.

ಮೊದಲ ಎಸೆತವನ್ನೇ ವೈಡ್‌ ಎಸೆದ ಜೋಗಿಂದರ್‌ ನಂತರದ ಎಸೆತದಲ್ಲಿ ಯಾವುದೇ ರನ್‌ ನೀಡಲಿಲ್ಲ. ಫುಲ್‌ಟಾಸ್‌ ಆಗಿ ಬಂದ ಎರಡನೇ ಎಸೆತವನ್ನು ಮಿಸ್ಬಾ ಸೀದಾ ಸಿಕ್ಸರ್‌ಗೆ ಎತ್ತಿದರು.

ಹೀಗಾಗಿ ಉಳಿದ ನಾಲ್ಕು ಎಸೆತಗಳಲ್ಲಿ ಪಾಕ್‌ಗೆ ಬೇಕಿದ್ದುದು, 6 ರನ್‌ ಮಾತ್ರ. ಮೂರನೇ ಎಸೆತದಲ್ಲಿಯೂ ದೊಡ್ಡ ಹೊಡತಕ್ಕೆ ಯತ್ನಿಸಿದ ಮಿಸ್ಬಾ, ಶಾರ್ಟ್‌ ಫೈನ್‌ಲೆಗ್‌ನತ್ತ ಸ್ಕೂಪ್‌ ಶಾಟ್‌ ಪ್ರಯೋಗಿಸಿದರು. ಗಾಳಿಯಲ್ಲಿ ಹಾರಿದ ಚೆಂಡನ್ನು ಎಸ್‌. ಶ್ರೀಶಾಂತ್‌ ಹಿಡಿತಕ್ಕೆ ಪಡೆಯುವಲ್ಲಿ ತಪ್ಪು ಮಾಡಲಿಲ್ಲ.

ಅಲ್ಲಿಗೆ ಪಂದ್ಯ ಮುಗಿಯಿತು. ಭಾರತ ಚೊಚ್ಚಲ ಟಿ20 ವಿಶ್ವಕಪ್‌ ವಿಜಯಿ ಎನಿಸಿತು. ನಾಯಕ ಧೋನಿ ಲಕ್ಕಿ ಕ್ಯಾಪ್ಟನ್‌ ಎನಿಸಿದರು.ಜೋಗಿಂದರ್‌ ಶರ್ಮಾ ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.