ADVERTISEMENT

ವಿರಾಟ್‌ ಕೊಹ್ಲಿ ಸೇರಿದಂತೆ ದೇಶದ ಪ್ರಮುಖರ ಮೇಲೆ ಉಗ್ರರ ಕಣ್ಣು?: ಎನ್ಐಎ ಎಚ್ಚರಿಕೆ

ಬಿಗಿ ಭದ್ರತೆಗೆ ಸೂಚನೆ

ಏಜೆನ್ಸೀಸ್
Published 7 ಡಿಸೆಂಬರ್ 2019, 13:24 IST
Last Updated 7 ಡಿಸೆಂಬರ್ 2019, 13:24 IST
   

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರರನ್ನು ಗುರಿಯಾಗಿಸಿ ಉಗ್ರರ ದಾಳಿ ನಡೆಯಲಿರುವ ಸಾಧ್ಯತೆ ಇರುವುದರಿಂದ ಕ್ರಿಕೆಟ್‌ ಪಂದ್ಯಗಳು ನಡೆಯಲಿರುವ ಸ್ಥಳದಲ್ಲಿ ಭದ್ರತೆ ಹೆಚ್ಚಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೆಹಲಿ ಪೊಲೀಸರಿಗೆ ಕಟ್ಟೆಚ್ಚರ ನೀಡಿದೆ.

ಉಗ್ರರ ಸಂಭವನೀಯ ದಾಳಿಯ ಕುರಿತು ಎನ್‌ಐಎಗೆ ತಲುಪಿರುವ ಅನಾಮಧೇಯ ಪತ್ರವನ್ನು ಆಧರಿಸಿ ಭದ್ರತೆಯನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ.

ನವೆಂಬರ್‌ 3ರಂದು ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಪ್ರವಾಸಿ ಬಾಂಗ್ಲಾದೇಶ ತಂಡದ ವಿರುದ್ಧ ಭಾರತೀಯ ತಂಡ ಮೊದಲ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಆಡಲಿದೆ. ಈ ವೇಳೆ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಎಲ್ಲ ಆಟಗಾರರಿಗೆ ನೀಡಲಾಗುವ ಭದ್ರತೆಯನ್ನು ಬಿಗಿಗೊಳಿಸುವಂತೆ ಆದೇಶ ನೀಡಲಾಗಿದೆ ಎಂದು ದೆಹಲಿ ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಕ್ರಿಕೆಟ್‌ ಆಟಗಾರರು ಮಾತ್ರವಲ್ಲದೆ, ರಾಜಕೀಯ ಮುಖಂಡರು, ಸಂಘ– ಸಂಸ್ಥೆಗಳ ಗಣ್ಯರ ಮೇಲೂ ದಾಳಿಯ ಸಾಧ್ಯತೆ ಇದೆ ಎಂದು ಅನಾಮಧೇಯ ಪತ್ರದಲ್ಲಿ ಸುಳಿವು ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್‌, ಕೇಂದ್ರದ ಗೃಹ ಸಚಿವ
ಅಮಿತ್‌ ಶಾ, ಬಿಜೆಪಿಯ ಹಿರಿಯ ಮುಖಂಡ ಲಾಲಕೃಷ್ಣ ಅಡ್ವಾಣಿ, ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ
ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತಿತರ ಗಣ್ಯರ ಹೆಸರುಗಳೂ ಪತ್ರದಲ್ಲಿ ಇವೆ. ಅವರ ಮೇಲೂ ದಾಳಿ ನಡೆಸಲು ಉಗ್ರರು ಹೊಂಚು ಹಾಕಿದ್ದಾರೆ ಎಂದು ಎನ್‌ಐಎ ತಿಳಿಸಿದೆ.

ಇದು ಹುಸಿ ಬೆದರಿಕೆಯೂ ಆಗಿರಬಹುದು. ಆದರೆ, ಅದನ್ನು ಸುಲಭಕ್ಕೆ ಕಡೆಗಣಿಸುವಂತಿಲ್ಲ ಎಂಬ ಕಾರಣದಿಂದಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂದು ಎನ್‌ಐಎ ಮೂಲಗಳು ಹೇಳಿವೆ.

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ದೇಶದ ಹಲವೆಡೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಹಾಗೂ ಭದ್ರತಾಪಡೆಗಳ ಮೂಲಗಳು ಸುಳಿವು ನೀಡಿವೆ. ಕಳೆದ ಮೂರು ತಿಂಗಳಿಂದ ದೇಶದಾದ್ಯಂತ ಆತಂಕದ ಛಾಯೆ ಆವರಿಸಿರುವುದರಿಂದ ಭದ್ರತಾ ವ್ಯವಸ್ಥೆಯನ್ನೂ ಬಿಗಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.