ADVERTISEMENT

ಕೇನ್‌ ವಿಲಿಯಮ್ಸನ್ ಶ್ರೇಷ್ಠ ಆಟಗಾರ: ಡೇನಿಯಲ್ ವೆಟೊರಿ ಶ್ಲಾಘನೆ

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ

ಪಿಟಿಐ
Published 20 ಜೂನ್ 2019, 19:45 IST
Last Updated 20 ಜೂನ್ 2019, 19:45 IST
ವಿಲಿಯಮ್ಸನ್–ರಾಯಿಟರ್ಸ್ ಚಿತ್ರ
ವಿಲಿಯಮ್ಸನ್–ರಾಯಿಟರ್ಸ್ ಚಿತ್ರ   

ಬರ್ಮಿಂಗಂ: ಕೇನ್ ವಿಲಿಯಮ್ಸನ್ ಅವರು ನಿಗದಿಯ ಓವರ್‌ಗಳ ಮಾದರಿಯಲ್ಲಿ ನ್ಯೂಜಿಲೆಂಡ್‌ನ ಶ್ರೇಷ್ಠ ಆಟಗಾರ ಎಂದು ಹಿರಿಯ ಕ್ರಿಕೆಟಿಗ ಡೇನಿಯಲ್ ವೆಟೊರಿ ಶ್ಲಾಘಿಸಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಕೆನ್ ವಿಲಿಯಮ್ಸನ್ ಅವರ ತಾಳ್ಮೆಯ ಶತಕದ (ಅಜೇಯ 106; 138ಎಸೆತ, 9ಬೌಂಡರಿ, 1ಸಿಕ್ಸರ್) ಬಲದಿಂದ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು 4 ವಿಕೆಟ್‌ಗಳಿಂದ ಜಯಿಸಿತು. ಮಳೆಯಿಂದಾಗಿ 49 ಓವರ್‌ಗಳಿಗೆ ನಿಗದಿಯಾಗಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿತ್ತು. ಹಾಶೀಂ ಆಮ್ಲಾ (55; 83ಎಸೆತ; 4ಬೌಂಡರಿ) ಮತ್ತು ರಸ್ಸಿ ವ್ಯಾನ್ ಡರ್ ಡಸೆನ್ (ಔಟಾಗದೆ 67; 64ಎಸೆತ, 2ಬೌಂಡರಿ, 3ಸಿಕ್ಸರ್) ಅವರ ಅರ್ಧಶತಕಗಳ ಬಲದಿಂದ ದಕ್ಷಿಣ ಆಫ್ರಿಕಾ 6 ವಿಕೆಟ್‌ಗಳಿಗೆ 241 ರನ್‌ ಗಳಿಸಿತ್ತು.

ನ್ಯೂಜಿಲೆಂಡ್ ಆರಂಭಿಕ ಹಂತದಲ್ಲಿಯೇ ಆಘಾತ ಅನುಭವಿಸಿತ್ತು. ಆದರೆ ಕೇನ್ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (60; 47ಎಸೆತ, 5ಬೌಂಡರಿ, 2 ಸಿಕ್ಸರ್) ಆರನೇ ವಿಕೆಟ್ ಜೊತೆಯಾಟದಲ್ಲಿ 91 ರನ್ ಸೇರಿಸಿದರು. ಇದರಿಂದಾಗಿ ತಂಡವು ಜಯಿಸಿತು.

ADVERTISEMENT

ಈ ಪಂದ್ಯದ ಕುರಿತು ಪ್ರತಿಕ್ರಿಯಿಸಿರುವ ವೆಟೊರಿ, ‘ಕೇನ್ ನಮ್ಮ ದೇಶದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂಬುದನ್ನು ಸಾಬೀತುಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೇನ್ ಅವರು ತಮ್ಮ ಪರಿಣಾಮಕಾರಿ ನಾಯಕತ್ವದ ಮೂಲಕ ತಂಡಕ್ಕೆ ಉತ್ತಮವಾದ ಕಾಣಿಕೆ ನೀಡಿದ್ದಾರೆ. ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದಾರೆ. ಅವರು ಎಲ್ಲ ಬಗೆಯ ಹೊಡೆತಗಳನ್ನೂ ಆಕರ್ಷಕವಾಗಿ ಅಡುತ್ತಾರೆ’ ಎಂದರು.

‘ಇಲ್ಲಿಯ ಪಿಚ್ ವಿಭಿನ್ನವಾಗಿತ್ತು. ಅದಕ್ಕೆ ತಕ್ಕಂತೆ ದಕ್ಷಿಣ ಆಫ್ರಿಕಾ ಬೌಲರ್‌ಗಳು ಚಾಣಾಕ್ಷತದಿಂದ ಬೌಲಿಂಗ್ ಮಾಡಿದರು. ಒಂದು ಹಂತದಲ್ಲಿ ಅವರು ಮೇಲುಗೈ ಸಾಧಿಸುವತ್ತ ಸಾಗಿದ್ದರು. ಆದರೆ, ಕೇನ್ ಬಂಡೆಗಲ್ಲಿನಂತೆ ನಿಂತು ಅಡಿದರು’ ಎಂದರು.

ಪಾಲ್ ಟೀಕೆ
‘ಕೇನ್ ವಿಲಿಯಮ್ಸನ್ ಅವರು ಒಳ್ಳೆಯ ಆಟಗಾರ. ಆದರೆ ಅವರು ಕ್ರೀಡಾ ಸ್ಫೂರ್ತಿ ಮೆರೆಯಬೇಕಿತ್ತು. ತಾವು ಔಟಾಗಿದ್ದನ್ನು ಒಪ್ಪಿಕೊಂಡು ಹೋಗಬೇಕಿತ್ತು’ ಎಂದು ದಕ್ಷಿಣ ಆಫ್ರಿಕಾದ ಹಿರಿಯ ಕ್ರಿಕೆಟಿಗ ಪಾಲ್ ಆ್ಯಡಮ್ಸ್ ಟೀಕಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ 38ನೇ ಓವರ್‌ ಅನ್ನು ಇಮ್ರಾನ್ ತಾಹೀರ್ ಬೌಲಿಂಗ್ ಮಾಡಿದ್ದರು. ಅವರ ಎಸೆತದಲ್ಲಿ ಕೇನ್ ಬ್ಯಾಟ್‌ ಅನ್ನು ನವಿರಾಗಿ ಸ್ಪರ್ಶಿಸಿದ್ದ ಚೆಂಡು ವಿಕೆಟ್‌ಕೀಪರ್ ಕ್ವಿಂಟನ್ ಡಿ ಕಾಕ್ ಕೈಸೇರಿತ್ತು. ಇಮ್ರಾನ್ ಅಪೀಲ್ ಮಾಡಿದ್ದರು. ಆದರೆ ಅಂಪೈರ್ ಪುರಸ್ಕರಿಸಲಿಲ್ಲ. ನಾಯಕ ಡುಪ್ಲೆಸಿ ಅವರು ಡಿಆರ್ಎಸ್ ಪಡೆಯಲು ಮುಂದಾಗಿದ್ದರು. ಆದರೆ ತಮ್ಮ ವಿಕೆಟ್‌ಕೀಪರ್ ಸ್ಪಷ್ಟವಾಗಿ ಹೇಳದ ಕಾರಣ ಕೈಬಿಟ್ಟರು. ನಂತರ ಟಿವಿ ರಿಪ್ಲೆಗಳಲ್ಲಿ ಚೆಂಡು ಬ್ಯಾಟ್‌ ಅಂಚು ಸ್ಪರ್ಶಿಸಿದ್ದು ಸ್ಪಷ್ಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.