ADVERTISEMENT

ಸಂದೇಹವಿಲ್ಲ, ನಾಯಕತ್ವಕ್ಕೆ ಪಂತ್ ಸೂಕ್ತ: ಡೆಲ್ಲಿ ನಾಯಕನಿಗೆ ಪಾಂಟಿಂಗ್ ಬೆಂಬಲ

ಪಿಟಿಐ
Published 22 ಮೇ 2022, 6:37 IST
Last Updated 22 ಮೇ 2022, 6:37 IST
ರಿಷಭ್ ಪಂತ್ ಹಾಗೂ ರಿಕಿ ಪಾಂಟಿಂಗ್ – ಐಎಎನ್‌ಎಸ್ ಚಿತ್ರ
ರಿಷಭ್ ಪಂತ್ ಹಾಗೂ ರಿಕಿ ಪಾಂಟಿಂಗ್ – ಐಎಎನ್‌ಎಸ್ ಚಿತ್ರ   

ಮುಂಬೈ: ‘ಸಂದೇಹವೇ ಇಲ್ಲ, ಡೆಲ್ಲಿ ಕ್ಯಾಪಿಟಲ್ಸ್‌ ನಾಯಕತ್ವಕ್ಕೆ ರಿಷಭ್ ಪಂತ್ ಅವರೇ ಸರಿಯಾದ ಆಯ್ಕೆ’ ಎಂದು ತಂಡದ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಶನಿವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಸೋಲನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಹೊರಬಿದ್ದಿದೆ.

ಪಂದ್ಯ ಕೊನೆಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಿಕಿ ಪಾಂಟಿಂಗ್, ‘ನನ್ನ ಮನಸಿನಲ್ಲಿ ಯಾವುದೇ ಸಂದೇಹವಿಲ್ಲ. ಕಳೆದ ಋತುವಿನಲ್ಲಿ ಕೂಡ ರಿಷಭ್ ಪಂತ್ ಅವರೇ ನಾಯಕನ ಸ್ಥಾನಕ್ಕೆ ಸೂಕ್ತ ಆಯ್ಕೆಯಾಗಿದ್ದರು. ಶ್ರೇಯಸ್ ಅಯ್ಯರ್ ಅವರು ಭುಜಕ್ಕೆ ಗಾಯಗೊಂಡು ನಿರ್ಗಮಿಸಿದ ಬಳಿಕ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ಪಂತ್ ಅದ್ಭುತವಾಗಿ ನಿರ್ವಹಿಸಿದ್ದಾರೆ’ ಎಂದಿದ್ದಾರೆ.

ADVERTISEMENT

‘ಅವರಿನ್ನೂ (ಪಂತ್) ಯುವಕ. ನಾಯಕತ್ವದ ಪಟ್ಟುಗಳನ್ನು ಕಲಿಯುತ್ತಿದ್ದಾರೆ. ಟ್ವೆಂಟಿ–20 ತಂಡದ ನಾಯಕನಾಗುವುದು, ಅದರಲ್ಲಿಯೂ ಐಪಿಎಲ್‌ನಂಥ ಅತಿ ಒತ್ತಡದ ಟೂರ್ನಿಯಲ್ಲಿ ನಾಯಕತ್ವದ ಜವಾಬ್ದಾರಿ ನಿರ್ವಹಿಸುವುದು ಸುಲಭದ ಕೆಲಸವಲ್ಲ. ಪ್ರತಿಯೊಂದು ಸಣ್ಣ ವಿಷಯವನ್ನೂ ಇಲ್ಲಿ ಸೂಕ್ಷ್ಮವಾಗಿ ಅವಲೋಕಿಸಲಾಗುತ್ತದೆ. ಅವರಿಗೆ ನನ್ನ ಬೆಂಬಲ ಖಂಡಿತಾ ಇದೆ’ ಎಂದು ಅವರು ತಿಳಿಸಿದ್ದಾರೆ.

ಪಂದ್ಯವು ಕೈಜಾರಿ ಹೋಗುತ್ತಿರುವುದನ್ನು ನೋಡಿ ತೀವ್ರ ನಿರಾಶೆಯಾಯಿತು ಎಂದ ಅವರು ಅದಕ್ಕಾಗಿ ಪಂತ್ ಅವರನ್ನು ದೂಷಿಸಲಿಲ್ಲ.

‘ಪಂದ್ಯದ ಒಂದು ಅಂಶದತ್ತ ಬೊಟ್ಟುಮಾಡಲಾಗದು. ಟಾಪ್ ಆರ್ಡರ್‌ ಬ್ಯಾಟಿಂಗ್ ಕೆಟ್ಟದಾಗಿತ್ತು. ಕೇವಲ 40 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ಗಳು ಪತನವಾಗಿದ್ದವು. ಇದು ಟ್ವೆಂಟಿ–20 ಪಂದ್ಯವನ್ನು ಆರಂಭಿಸುವ ಸೂಕ್ತ ರೀತಿಯಲ್ಲ. ಅದರಲ್ಲೂ ಗೆಲ್ಲಲೇಬೇಕಾದ ಪಂದ್ಯದಲ್ಲಿ ಆಡುವ ರೀತಿಯಲ್ಲವಿದು’ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

‘ನಿಜವಾಗಿಯೂ ಟಿಮ್ ಡೇವಿಡ್ ಅದ್ಭುತವಾಗಿ ಆಡಿದರು. ಇಂಥ ಪಂದ್ಯಗಳಿಂದ ಆಟಗಾರರು ಕಲಿಯುವುದು ಸಾಕಷ್ಟಿದೆ. ಪಂದ್ಯವು ನಮ್ಮ ಕೈಜಾರುತ್ತಿರುದನ್ನು ನೋಡಿ ಬಹಳ ನಿರಾಶೆಯಾಯಿತು’ ಎಂದು ಅವರು ಹೇಳಿದ್ದಾರೆ.

ಪಂತ್‌ಗೆ ರೋಹಿತ್ ಬೆಂಬಲ

ಎದುರಾಳಿ ತಂಡದ ನಾಯಕ ರೋಹಿತ್ ಶರ್ಮಾ ಸಹ ಪಂತ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಇಂಥ ಎಡವಟ್ಟುಗಳು ಕ್ರಿಕೆಟ್‌ ಮೈದಾನದಲ್ಲಿ ಸಾಕಷ್ಟು ಸಂಭವಿಸುತ್ತವೆ. ಈ ಅನುಭವಗಳಿಂದ ಅವರು ಇನ್ನಷ್ಟು ಬಲಿಷ್ಠರಾಗಲಿದ್ದಾರೆ ಎಂದು ಹಿಟ್‌ಮ್ಯಾನ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ರಾತ್ರಿಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪೊವೆಲ್ (43; 34ಎ) ಮತ್ತು ನಾಯಕ ರಿಷಭ್ ಪಂತ್ (39; 33ಎ) ಐದನೇ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 75 ರನ್‌ಗಳ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಲ್ಲಿ 159 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಮುಂಬೈ ತಂಡವು ಇಶಾನ್ ಕಿಶನ್ (48; 35ಎ) ಮತ್ತು ಟಿಮ್ ಡೇವಿಡ್ (34; 11ಎ) ಬ್ಯಾಟಿಂಗ್ ಬಲದಿಂದ 19.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 160 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.