ADVERTISEMENT

₹222 ಕೋಟಿಗೆ ಐಪಿಎಲ್ ಪ್ರಾಯೋಜಕತ್ವ ಪಡೆದ ಡ್ರೀಮ್ ಇಲೆವನ್

ಪಿಟಿಐ
Published 18 ಆಗಸ್ಟ್ 2020, 11:59 IST
Last Updated 18 ಆಗಸ್ಟ್ 2020, 11:59 IST
ಐಪಿಎಲ್‌ ಟ್ರೋಫಿ
ಐಪಿಎಲ್‌ ಟ್ರೋಫಿ    

ನವದೆಹಲಿ: ಆನ್‌ಲೈನ್ ಕ್ರೀಡಾ ವೇದಿಕೆಯಾಗಿರುವ ಡ್ರೀಮ್‌ ಇಲೆವನ್ ಕಂಪೆನಿಯು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಟೈಟಲ್ ಪ್ರಾಯೋಜಕತ್ವವನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

’ಮಂಗಳವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಡ್ರೀಮ್‌ ಇಲೆವನ್ ₹ 222 ಕೋಟಿಗೆ ಪ್ರಾಯೋಜಕತ್ವವನ್ನು ಪಡೆದುಕೊಂಡಿತು‘ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಸಮಿತಿಯ ಮುಖ್ಯಸ್ಥ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

ಟಾಟಾ ಸಮೂಹ ಸಂಸ್ಥೆಯು ಅಂತಿಮ ಬಿಡ್ ಸಲ್ಲಿಸಿರಲಿಲ್ಲ. ಸ್ಪರ್ಧೆಯಲ್ಲಿದ್ದ ಇನ್ನುಳಿದ ಸಂಸ್ಥೆಗಳಾದ ಬೈಜುಸ್ (₹ 201 ಕೋಟಿ) ಮತ್ತು ಅನ್‌ಅಕಾಡೆಮಿ (₹ 170 ಕೋಟಿ) ಬಿಡ್ ಸಲ್ಲಿಸಿದ್ದವು.

ADVERTISEMENT

ಚೀನಾದ ವಿವೊ ಮೊಬೈಲ್ ಕಂಪೆನಿಯು ಈ ಬಾರಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ಈಚೆಗೆ ಭಾರತ ಮತ್ತು ಚೀನಾ ಗಡಿಯಲ್ಲಿ ಸೇನೆಗಳ ನಡುವೆ ಆಗಿದ್ದ ಸಂಘರ್ಷದ ನಂತರ ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನ ನಡೆದಿತ್ತು. ಕೇಂದ್ರ ಸರ್ಕಾರವೂ ಚೀನಾದ ಆ್ಯಪ್‌ಗಳನ್ನು ನಿಷೇಧಿಸಿತ್ತು. ಅದರಿಂದಾಗಿ ವಿವೊ ಪ್ರಾಯೋಜಕತ್ವವನ್ನು ಕೈಬಿಡಬೇಕು ಎಂದು ಬಿಸಿಸಿಐ ಮೇಲೆ ಒತ್ತಡ ಹೆಚ್ಚಿತ್ತು. ಹೋದ ತಿಂಗಳು ನಡೆದ ಮಾತುಕತೆಯಲ್ಲಿ ವಿವೊ ಈ ವರ್ಷ ಪ್ರಾಯೋಜಕತ್ವ ನೀಡದಿರಲು ತೀರ್ಮಾನಿಸಿತ್ತು. ಬಿಸಿಸಿಐನೊಂದಿಗೆ 2018ರಿಂದ 2022ರವರೆಗೆ ಕಂಪೆನಿಯ ಒಪ್ಪಂದವಿದೆ. ಪ್ರತಿವರ್ಷ ₹ 440 ಕೋಟಿ ನೀಡುವ ಒಪ್ಪಂದವಿದೆ.

ಆದರೆ ಡ್ರೀಮ್ ಇಲೆವನ್‌ನಲ್ಲಿ ಚೀನಾದ ಟೆನ್ಸೆಂಟ್ ಕಂಪೆನಿಯ ಪಾಲುದಾರಿಕೆ ಇದೆ ಎಂದು ಹೇಳಲಾಗುತ್ತಿದೆ. ಬಿಸಿಸಿಐ ಮೂಲಗಳ ಪ್ರಕಾರ ಇದರಲ್ಲಿಚೀನಾ ಕಂಪೆನಿಯ ಹೂಡಿಕೆಯು ಶೇ 10ಕ್ಕಿಂತಲೂ ಕಡಿಮೆಯಂತೆ.

ಡ್ರೀಮ್ ಇಲೆವನ್‌ ಕಂಪೆನಿಯನ್ನು ಭಾರತದ ಹರ್ಷ ಜೈನ್ ಮತ್ತು ಭಾವಿತ್ ಶೇಟ್ ಅವರು ಸ್ಥಾಪಿಸಿದ್ದಾರೆ.

’ಡ್ರೀಮ್‌ ಇಲೆವನ್‌ ಸ್ಥಾಪಕರು, ಪಾಲುದಾರರು ಮತ್ತು ಅದರಲ್ಲಿರುವ 400 ಉದ್ಯೋಗಿಗಳು ಭಾರತದವರು‘ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.

’ಕಲಾರಿ ಕ್ಯಾಪಿಟಲ್, ಮಲ್ಟಿಪಲ್ಸ್‌ ಇಕ್ವಿಟಿ ಎಂಬ ಭಾರತೀಯ ಮೂಲದ ಕಂಪೆನಿಗಳ ಹೂಡಿಕೆ ಡ್ರೀಮ್‌ ಇಲೆವನ್‌ನಲ್ಲಿದೆ. ಚೀನಾದ ಟೆನ್ಸೆಂಟ್‌ ಪಾಲು ತೀರ ಅತ್ಯಲ್ಪ‘ ಎಂದು ಮೂಲಗಳು ಹೇಳಿವೆ.

ಕೆಲವು ದಿನಗಳ ಹಿಂದೆ ಪಂಜಾಬ್‌ನಲ್ಲಿ ನಡೆದಿದ್ದ ನಕಲಿ ಟಿ20 ಲೀಗ್ ಕ್ರಿಕೆಟ್‌ ಪಂದ್ಯ ಮತ್ತು ಬೆಟ್ಟಿಂಗ್ ವಿಷಯವಾಗಿ ಬಿಸಿಸಿಐನ ಭ್ರಷ್ಟಾಚಾರ ತಡೆ ಘಟಕವು (ಎಸಿಯು) ಫ್ಯಾನ್‌ಕೋಡ್ ವೆಬ್‌ಸೈಟ್ ವಿರುದ್ಧ ತನಿಖೆ ನಡೆಸಿತ್ತು. ಪಂಜಾಬ್‌ನಲ್ಲಿ ನಡೆದ ಪಂದ್ಯವು ಶ್ರೀಲಂಕಾದಲ್ಲಿ ಆಯೋಜನೆಯಾಗಿತ್ತು ಎಂದು ನೇರ ಸ್ಟೀಮಿಂಗ್ ಮಾಡಿದ ಆರೋಪ ಅದರ ಮೇಲಿತ್ತು. ಫ್ಯಾನ್‌ ಕೋಡ್ ಡ್ರೀಮ್ ಇಲೆವನ್‌ನ ಅಂಗಸಂಸ್ಥೆಯಾಗಿದೆ.

’ವಿವೊಗಿಂತಲೂ ಕಡಿಮೆ ಬಿಡ್ ಲಭಿಸಿದೆ. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಇದು ನಿರೀಕ್ಷಿತ. ಆದರೆ ಟಾಟಾ ಸಮೂಹವು ಬಿಡ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇತ್ತು. ಅದೂ ಕೂಡ ಆಸಕ್ತಿ ತೋರಿತ್ತು. ಆದರೆ ಅಂತಿಮ ಹಂತದಲ್ಲಿ ಹಿಂದೆ ಸರಿದಿದೆ. ಟಾಟಾ ಪ್ರಾಯೋಜಕತ್ವ ದೊರೆತಿದ್ದರೆ ನಮ್ಮ ಟೂರ್ನಿಯ ಮೌಲ್ಯ ಇನ್ನಷ್ಟು ಉತ್ತಮವಾಗುತ್ತಿತ್ತು‘ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.