ADVERTISEMENT

ಅಲೆಕ್ಸ್‌ಗೆ ಕೊರೊನಾ ಸೋಂಕು ಇದೆ ಎಂದು ಪಾಕ್ ಮಾಜಿ ನಾಯಕ ಹೇಳಿದ್ದು ಸುಳ್ಳು!

ಸುಳ್ಳುಸುದ್ದಿ ಹರಡುವುದು ಅಪಾಯಕಾರಿ ಮನಸ್ಥಿತಿ ಎಂದ ಇಂಗ್ಲೆಂಡ್ ಕ್ರಿಕೆಟಿಗ

ಏಜೆನ್ಸೀಸ್
Published 18 ಮಾರ್ಚ್ 2020, 6:53 IST
Last Updated 18 ಮಾರ್ಚ್ 2020, 6:53 IST
   

ಕರಾಚಿ:ಇಂಗ್ಲೆಂಡ್‌ ಕ್ರಿಕೆಟಿಗ ಅಲೆಕ್ಸ್‌ ಹೇಲ್ಸ್‌ ಅವರಲ್ಲಿ ಕೊರೊನಾ ವೈರಸ್‌ ಸೋಂಕಿನ ಲಕ್ಷಣಗಳು ಗೋಚರಿಸಿವೆ ಎಂದುಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ರಜೀಜ್‌ ರಾಜಾ ಹೇಳಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅಲೆಕ್ಸ್‌ ಹೇಲ್ಸ್‌, ‘ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ. ಇದು ಅಪಾಯಕಾರಿ ಮನಸ್ಥಿತಿ’ ಎಂದು ಮನವಿ ಮಾಡಿದ್ದಾರೆ.

ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವೀಟ್‌ನಲ್ಲಿ ಸ್ಪಷ್ಟನೆ ನೀಡಿರುವ ಅವರು, ‘ನನ್ನ ಸ್ಥಿತಿಯ ಒಂದು ಅಪ್‌ಡೇಟ್‌. ಎಲ್ಲರೂ ಸುರಕ್ಷಿತವಾಗಿ ಇರಿ’ ಎಂದು ಬರೆದುಕೊಂಡು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಸದ್ಯ ಕ್ರಿಕೆಟ್‌ ಜಗತ್ತಿನಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಸಂಬಂಧಿಸಿದಂತೆ, ನನ್ನ ಆರೋಗ್ಯ ಸ್ಥಿತಿಯ ಸಂಪೂರ್ಣ ವಿವರ ನೀಡಬೇಕೆಂದು ಅನಿಸಿದೆ. ಕೋವಿಡ್‌–19 ಜಾಗತಿಕ ಮಾರಿ ಹರಡುತ್ತಿರುವುದರಿಂದಾಗಿ, ಅನೇಕ ವಿದೇಶಿ ಆಟಗಾರರಂತೆ ನಾನೂ ಇಷ್ಟವಿಲ್ಲದೆಯೇ ಪಿಎಸ್‌ಎಲ್‌ನಿಂದ ಹೊರಬಂದಿದ್ದೇನೆ. ಸಾವಿರಾರು ಮೈಲುಗಳಷ್ಟು ದೂರದಲ್ಲಿ ಬಂಧನಕ್ಕೊಳಗಾದವರಂತೆ ಉಳಿಯುವುದಕ್ಕಿಂತ ಮನೆಯಲ್ಲಿರುವುದೇ ಮುಖ್ಯ ಎಂದು ನನಗೆ ಅನಿಸಿತು’

ADVERTISEMENT

‘ಆರೋಗ್ಯಯುತವಾಗಿ ಹಾಗೂ ಫಿಟ್‌ ಆಗಿದ್ದೇನೆಎಂಬ ಭಾವನೆಯೊಂದಿಗೆ ಶನಿವಾರ ನಾನು ಇಂಗ್ಲೆಂಡ್‌ ತಲುಪಿದೆ.ವೈರಸ್‌ ಸೋಂಕಿನ ಯಾವುದೇ ರೀತಿಯ ಲಕ್ಷಣಗಳುಖಂಡಿತ ಇರಲಿಲ್ಲ.’

‘ಆದರೂ, ಸ್ವಲ್ಪ ಜ್ವರದಿಂದಾಗಿ ಭಾನುವಾರ ಬೆಳಗ್ಗೆ ಬೇಗನೆ ಎದ್ದೆ. ಹೀಗಾಗಿ ಸರ್ಕಾರ ನಿರ್ದೇಶನದಂತೆಪ್ರತ್ಯೇಕವಾಗಿ ಉಳಿದಿದ್ದೇನೆ. ನೆಗಡಿ ಮತ್ತು ಕೆಮ್ಮು ಇದೆ’

‘ಸದ್ಯದ ಸ್ಥಿತಿಯಲ್ಲಿ ಆರೋಗ್ಯ ಪರೀಕ್ಷೆ ಮಾಡಿಸುವುದು ಸಾಧ್ಯವಿಲ್ಲ. ಆದಾಗ್ಯೂ, ಈ ದಿನವೇ ಸ್ವಲ್ಪ ತಡವಾಗಿ ಪರೀಕ್ಷೆ ಮಾಡಿಸಿ ನನ್ನ ಆರೋಗ್ಯದ ನಿಖರ ಸ್ಥಿತಿಯನ್ನು ತಿಳಿದುಕೊಳ್ಳಲಿದ್ದೇನೆ’ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ (ಪಿಎಸ್‌ಎಲ್‌) ಕರಾಚಿ ಕಿಂಗ್ಸ್‌ ತಂಡದ ಪರ ಆಡುವ ಅಲೆಕ್ಸ್‌, ಕೊರೊನಾಭೀತಿಯಿಂದಾಗಿ ಆರಂಭದಲ್ಲೇ ಟೂರ್ನಿಯಿಂದ ಹಿಂದೆ ಸರಿದಿದ್ದರು. ಮಾತ್ರವಲ್ಲದೆ, ಹಲವು ವಿದೇಶಿ ಆಟಗಾರರೂ ತಮ್ಮತಮ್ಮ ದೇಶಗಳಿಗೆ ವಾಪಸ್‌ ಆಗಿದ್ದರು.

ಸದ್ಯ ಪಿಎಸ್‌ಎಲ್‌ ಟೂರ್ನಿಯನ್ನು ಅರ್ಧದಲ್ಲೆ ನಿಲ್ಲಿಸಲಾಗಿದೆ. ಟೂರ್ನಿಯ ಲೀಗ್‌ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಸೆಮಿಫೈನಲ್ಸ್‌ ಹಾಗೂ ಫೈನಲ್‌ ಪಂದ್ಯಗಳಷ್ಟೇ ಬಾಕಿ ಇವೆ. ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ರಾಜಾ ಅವರು ಅಲೆಕ್ಸ್‌ ಬಗ್ಗೆ ಹೇಳಿಕೆ ನೀಡಿದ್ದರು.

ವೀಕ್ಷಕ ವಿವರಣೆಗಾರರೂ ಆಗಿರುವ ರಾಜಾ, ‘ನನಗೆ ತಿಳಿದಿರುವಂತೆ ಅಲೆಕ್ಸ್‌ಇನ್ನೂ ಪರೀಕ್ಷೆಗೆ ಒಳಪಟ್ಟಿಲ್ಲ. ಅವರಲ್ಲಿ ಕಾಣಿಸಿಕೊಂಡಿರುವುದು ಕೊರೊನಾ ವೈರಸ್‌ ಸೋಂಕಿನ ಗುಣಲಕ್ಷಣಗಳೇ ಅಲ್ಲವೇ ಎಂಬುದು ಗೊತ್ತಿಲ್ಲ. ಆದರೆ, ನಾವೆಲ್ಲ ಎಚ್ಚರದಿಂದ ಇರಬೇಕಿದೆ. ಸಮಸ್ಯೆಯ ವಿರುದ್ಧ ಸೆಣಸಲು ಖಂಡಿತವಾಗಿಯೂ ಸಾಮಾನ್ಯ ಜ್ಞಾನವನ್ನು ಅಳವಡಿಸಿಕೊಳ್ಳಬೇಕಿದೆ’ ಎಂದಿದ್ದರು.

ಇದೇ ವೇಳೆ ಮಾತನಾಡಿದ್ದ ಪಿಸಿಬಿಯ ಸಿಇಒ ವಾಸೀಂ ಖಾನ್‌ ಅವರೂ,ಪಿಎಸ್‌ನಲ್ಲಿ ಭಾಗವಹಿಸಿರುವ ಒಬ್ಬ ವಿದೇಶೀ ಆಟಗಾರನಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿವೆ ಎಂದು ಹೇಳಿದ್ದರು. ಆದರೆ, ಆಟಗಾರರನ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.