ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸಚಿತ್ರ ಸೇನಾನಾಯಕೆ
ಚಿತ್ರ: X / @SriLankaTweet
ಕೊಲಂಬೊ: 2020ರ ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ಟಿ20 ಕ್ರಿಕೆಟ್ ಟೂರ್ನಿ ವೇಳೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಲು ಸಹ ಆಟಗಾರರಿಗೆ ಆಮಿಷ ಒಡ್ಡಿದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸಚಿತ್ರ ಸೇನಾನಾಯಕೆ ವಿರುದ್ಧ ಹಂಬಂಟೋಟ ಹೈಕೋರ್ಟ್‌ಗೆ ದೋಷಾರೋಪಣೆ ಸಲ್ಲಿಕೆಯಾಗಿದೆ.
ದೇಶದಲ್ಲಿ ಇತ್ತೀಚೆಗೆ ಜಾರಿಯಾಗಿರುವ ಭ್ರಷ್ಟಾಚಾರ ವಿರೋಧಿ ಕಾಯ್ದೆ ಅಡಿಯಲ್ಲಿ ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದ ಕ್ರಿಕೆಟಿಗನ ವಿರುದ್ಧ ದಾಖಲಾಗಿರುವ ಮೊದಲ ದೋಷಾರೋಪ ಇದಾಗಿದೆ ಎಂದು ಅಟಾರ್ನಿ ಜನರಲ್ ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ಬಂಧನಕ್ಕೊಳಗಾಗಿದ್ದ 40 ವರ್ಷದ ಸಚಿತ್ರ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಸಚಿತ್ರ ಅವರು 2012–2016ರ ಅವಧಿಯಲ್ಲಿ ಶ್ರೀಲಂಕಾ ಪರ ಒಂದು ಟೆಸ್ಟ್, 49 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆ 78 ವಿಕೆಟ್‌ಗಳನ್ನು ಗಳಿಸಿರುವ ಅವರು, 2014ರಲ್ಲಿ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರು.
ಐಪಿಎಲ್‌ನಲ್ಲಿ ಆಡಿರುವ ಅವರು, ಕೋಲ್ಕತ್ತ ನೈಟ್ ರೈಡರ್ಸ್ ಪರ 2013ರಲ್ಲಿ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.
2020ರಲ್ಲಿ ಕೊಲಂಬೊ ಕಿಂಗ್ಸ್ ತಂಡದ ಪರ ಆಡುತ್ತಿದ್ದ ಸಚಿತ್ರ, ಸಹ ಆಟಗಾರ ತರಿಂಡು ರತ್ನಾಯಕೆ ಅವರನ್ನು ಮ್ಯಾಚ್ ಫಿಕ್ಸಿಂಗ್‌ಗೆ ಸೆಳೆಯಲು ಪ್ರಯತ್ನಿಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.