ADVERTISEMENT

IND vs PAK | ಪಾಕ್‌ ವಿರುದ್ಧ ಕೊಹ್ಲಿ ಅಬ್ಬರ: ಸಚಿನ್ ಸೇರಿ ಗಣ್ಯರಿಂದ ಮೆಚ್ಚುಗೆ

ಏಜೆನ್ಸೀಸ್
Published 24 ಫೆಬ್ರುವರಿ 2025, 6:13 IST
Last Updated 24 ಫೆಬ್ರುವರಿ 2025, 6:13 IST
<div class="paragraphs"><p>ವಿರಾಟ್ ಕೊಹ್ಲಿ&nbsp;</p></div>

ವಿರಾಟ್ ಕೊಹ್ಲಿ 

   

–ರಾಯಿಟರ್ಸ್ ಚಿತ್ರ

ನವದೆಹಲಿ: ದುಬೈನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್‌ ತಂಡದ ‘ರನ್‌ ಮಷಿನ್‌’ ಖ್ಯಾತಿಯ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

ADVERTISEMENT

ವಿರಾಟ್ ಕೊಹ್ಲಿ ಅವರ ಉತ್ತಮ ಆಟಕ್ಕೆ ಮನಸೋತಿರುವ ‘ಮಾಸ್ಟರ್ ಬ್ಲಾಸ್ಟರ್’ ಖ್ಯಾತಿಯ ಸಚಿನ್ ತೆಂಡೂಲ್ಕರ್, ‘ರಾವಲ್ಪಿಂಡಿ ಎಕ್ಸ್‌ಪ್ರೆಸ್’ ಖ್ಯಾತಿಯ ಪಾಕಿಸ್ತಾನದ ವೇಗಿ ಶೋಯಬ್‌ ಅಕ್ತರ್‌ ಸೇರಿದಂತೆ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಗುಣಗಾನ ಮಾಡಿದ್ದಾರೆ.

‘ಬಹು ನಿರೀಕ್ಷಿತ ಪಂದ್ಯಕ್ಕೆ ಪರಿಪೂರ್ಣ ಅಂತ್ಯ. ವಿರಾಟ್ ಅವರು ಮೆನ್ ಇನ್ ಗ್ರೀನ್ ವಿರುದ್ಧ ಅದ್ಭುತ ಆಟವಾಡಿದ್ದಾರೆ. ಟೀಮ್ ಇಂಡಿಯಾ ಗೆಲುವಿಗೆ ಕಾರಣರಾದ ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಹಾಗೂ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ ಅವರಿಗೆ ಅಭಿನಂದನೆಗಳು’ ಎಂದು ಸಚಿನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ವಿರಾಟ್ ಕೊಹ್ಲಿ ಅವರು ಪಾಕಿಸ್ತಾನದ ವಿರುದ್ಧ ಆಟವಾಡಲು ಸಂಪೂರ್ಣವಾಗಿ ಸಿದ್ಧರಾಗಿ ಬರುತ್ತಾರೆ. ಅವರಿಗೆ ಹ್ಯಾಟ್ಸಾಫ್ ಹೇಳಲು ಬಯಸುತ್ತೇನೆ. ವೈಟ್‌ ಬಾಲ್ ರನ್ ಚೇಸರ್ ಆಗಿರುವ ಅವರು ಸೂಪರ್ ಸ್ಟಾರ್... ಆಧುನಿಕ ಕಾಲದ ಶ್ರೇಷ್ಠ ಆಟಗಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಶೋಯಬ್‌ ಅಕ್ತರ್‌ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಅವರು ಪಾಕಿಸ್ತಾನ ವಿರುದ್ಧ ರನ್ ಗಳಿಸುವ ಮೂಲಕ ಸುಂದರವಾದ ಪ್ರೇಮಕಥೆಯನ್ನು ಮುಂದುವರಿಸಿದ್ದಾರೆ. ಇದು ಹಾಗೆಯೇ ಮುಂದುವರಿಯಲಿ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಚೇಸಿಂಗ್‌ನುದ್ದಕ್ಕೂ ವಿರಾಟ್ ಕೊಹ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಂಡ ರೀತಿ ಆಶ್ಚರ್ಯಕರವಾಗಿತ್ತು ಎಂದು ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.

ಭಾರತದ ಕ್ರಿಕೆಟ್‌ ಪ್ರೇಮಿಗಳಿಗೆ ಭಾನುವಾರ ಭಾರಿ ಸಂತಸದ ದಿನವಾಯಿತು. ವಿರಾಟ್ ಕೊಹ್ಲಿ ಹೊಡೆದ ಗೆಲುವಿನ ಬೌಂಡರಿಯೊಂದಿಗೆ ಭಾರತ ತಂಡವು ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್ ಪ್ರವೇಶಿಸಿತು. ಕೊಹ್ಲಿಯ ಖಾತೆಗೆ ಬಹುದಿನಗಳ ನಂತರ ಶತಕವೊಂದು ಸೇರಿಕೊಂಡಿತು. ಆತಿಥೇಯ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿತು.

‘ಎ’ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‌ಗಳಿಂದ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವನ್ನು ಮಣಿಸಿತು. ಉಭಯ ತಂಡಗಳಿಗೂ ಗುಂಪು ಹಂತದಲ್ಲಿ ತಲಾ ಒಂದು ಪಂದ್ಯ ಬಾಕಿ ಇದೆ. ಆದರೆ ಪಾಕ್ ತಂಡವು ಸತತ ಎರಡೂ ಪಂದ್ಯಗಳಲ್ಲಿ ಸೋತು ಹೊರಬಿದ್ದಿದೆ.

ಆತಿಥೇಯ ಪಾಕ್ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತ ತಂಡದ ಬೌಲರ್‌ಗಳ ದಾಳಿಯ ಎದುರು 241 ರನ್‌ಗಳ ಸಾಧಾರಣ ಗುರಿಯೊಡ್ಡಿತು. ಏಕದಿನ ಕ್ರಿಕೆಟ್‌ನಲ್ಲಿ 51ನೇ ಶತಕ ದಾಖಲಿಸಿದ ವಿರಾಟ್ ಕೊಹ್ಲಿ ಶತಕ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕದ ಬಲದಿಂದ ತಂಡವು 42.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 244 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಇದರೊಂದಿಗೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕ್ ಎದುರು ಅನುಭವಿಸಿದ್ದ ಸೋಲಿಗೆ ಭಾರತ ತಂಡವು ಮುಯ್ಯಿ ತೀರಿಸಿಕೊಂಡಿತು. ಆ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದ ಕೊಹ್ಲಿ ಈಗಿನ ಪಂದ್ಯದಲ್ಲಿ ಗೆಲುವಿನ ರೂವಾರಿಯಾದರು. ಸುಮಾರು ಒಂದೂವರೆ ವರ್ಷದ ನಂತರ ಅವರು ಏಕದಿನ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.