ADVERTISEMENT

ಫಿಟ್ನೆಸ್‌ ಪರೀಕ್ಷೆ: ಹಾರ್ದಿಕ್ ಪಾಂಡ್ಯ ತೇರ್ಗಡೆ

ಪಿಟಿಐ
Published 1 ಡಿಸೆಂಬರ್ 2025, 19:47 IST
Last Updated 1 ಡಿಸೆಂಬರ್ 2025, 19:47 IST
ಹಾರ್ದಿಕ್‌ ಪಾಂಡ್ಯ
ಹಾರ್ದಿಕ್‌ ಪಾಂಡ್ಯ   

ನವದೆಹಲಿ: ಭಾರತ ತಂಡದ ಅನುಭವಿ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರು ಫಿಟ್‌ನೆಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಮಂಗಳವಾರ ಹೈದರಾಬಾದ್‌ನಲ್ಲಿ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದಲ್ಲಿ ಬರೋಡಾ ತಂಡದ ಪರ ಕಣಕ್ಕಿಳಿಯಲಿದ್ದಾರೆ. 

ತೊಡೆಯ ಗಾಯದಿಂದ ಗುಣಮುಖವಾಗಿರುವ ಹಾರ್ದಿಕ್‌ ಅವರು ಎರಡೂವರೆ ತಿಂಗಳ ನಂತರ ತಮ್ಮ ಮೊದಲ ಪಂದ್ಯವನ್ನು ಪಂಜಾಬ್ ವಿರುದ್ಧ ಆಡಲಿದ್ದಾರೆ. ಇದೇ 4ರಂದು ಗುಜರಾತ್ ವಿರುದ್ಧದ ಪಂದದಲ್ಲೂ ಅವರು ಆಡುವರು. ಈ ಎರಡೂ ಪಂದ್ಯಗಳಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿಯ ಪ್ರಗ್ಯಾನ್ ಓಜಾ ಹಾಜರಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತಂಡವನ್ನು ಘೋಷಿಸುವ ಮೊದಲು ಹಾರ್ದಿಕ್‌ ಅವರ ಒಟ್ಟಾರೆ ಫಿಟ್‌ನೆಸ್ ಅನ್ನು ಪರಿಶೀಲಿಸಲಿದ್ದಾರೆ. ಇದೇ 9ರಿಂದ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

‘ಅಕ್ಟೋಬರ್ 21ರಿಂದ ನವೆಂಬರ್ 30ರವರೆಗೆ ಹಾರ್ದಿಕ್ ಅವರು ಬೆಂಗಳೂರಿನ ಬಿಸಿಸಿಐ ಉತ್ಕೃಷ್ಟತಾ ಕೇಂದ್ರದಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿ ಚೇತರಿಸಿಕೊಂಡಿದ್ದಾರೆ. ಅವರು ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಫಿಟ್‌ನೆಸ್‌ ಪಡೆದಿದ್ದಾರೆ. ಅವರು ಪಂಜಾಬ್‌ ಮತ್ತು ಗುಜರಾತ್‌ ವಿರುದ್ಧದ ಪಂದ್ಯವನ್ನು ಆಡಲಿದ್ದಾರೆ. ಬಿಸಿಸಿಐನಿಂದ ಆಹ್ವಾನ ಬರದಿದ್ದರೆ ಡಿಸೆಂಬರ್ 6ರಂದು ಹರಿಯಾಣ ವಿರುದ್ಧದ ಪಂದ್ಯವನ್ನೂ ಆಡಲು ಯೋಜಿಸಿದ್ದಾರೆ’ ಮೂಲಗಳು ತಿಳಿಸಿವೆ.

ADVERTISEMENT
ಗಿಲ್‌ಗೆ ಫಿಟ್ನೆಸ್‌ ಪರೀಕ್ಷೆ:
ಭಾರತ ಟಿ20 ಕ್ರಿಕೆಟ್‌ ತಂಡದ ಉಪ ನಾಯಕ ಶುಭಮನ್‌ ಗಿಲ್‌ ಅವರು ಸೋಮವಾರ ಬೆಂಗಳೂರಿನ ಬಿಸಿಸಿಐ ಉತ್ಕೃಷ್ಟತಾ ಕೇಂದ್ರದಲ್ಲಿ ಫಿಟ್ನೆಸ್‌ ಪರೀಕ್ಷೆ ಎದುರಿಸಿದ್ದಾರೆ. ಕೋಲ್ಕತ್ತದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್‌ ಅವರು ಬ್ಯಾಟಿಂಗ್ ಮಾಡುವಾಗ ಕುತ್ತಿಗೆಯ ಸ್ನಾಯುಸೆಳೆತಕ್ಕೊಳಗಾಗಿದ್ದರು. ಅದರಿಂದಾಗಿ ಅವರು ಮೈದಾನ ತೊರೆದು ಚಿಕಿತ್ಸೆಗಾಗಿ ತೆರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.